ADVERTISEMENT

ಸಾವಿರ ವಿದ್ಯಾರ್ಥಿನಿಯರಿಗೆ ಇದೆ ಒಂದೇ ಶೌಚಾಲಯ

ಕುಷ್ಟಗಿ ಸರ್ಕಾರಿ ಜೂನಿಯರ್ ಕಾಲೇಜಿನ ಬಾಲಕಿಯರಿಗೆ ಸಂಕಷ್ಟ

ಎ.ನಾರಾಯಣರಾವ ಕುಲಕರ್ಣಿ
Published 10 ಅಕ್ಟೋಬರ್ 2023, 23:06 IST
Last Updated 10 ಅಕ್ಟೋಬರ್ 2023, 23:06 IST
ಜಾಗ ಗುರುತಿಸಿದ್ದರೂ ಶೌಚಾಲಯ ನಿರ್ಮಾಣದ ಕೆಲಸ ಆರಂಭಗೊಂಡಿಲ್ಲ
ಜಾಗ ಗುರುತಿಸಿದ್ದರೂ ಶೌಚಾಲಯ ನಿರ್ಮಾಣದ ಕೆಲಸ ಆರಂಭಗೊಂಡಿಲ್ಲ   

ಕುಷ್ಟಗಿ (ಕೊಪ್ಪಳ ಜಿಲ್ಲೆ): ಸಾವಿರಕ್ಕೂ ಅಧಿಕ ಬಾಲಕಿಯರಿಗೆ ಕೇವಲ ಎರಡು ಮೂತ್ರಾಲಯ, ಒಂದೇ ಶೌಚಾಲಯವಿದೆ. ಹೀಗಾಗಿ ಶಾಲಾ ಕೊಠಡಿಗಳ ಹಿಂಭಾಗಕ್ಕೆ ತೆರಳಿ ‘ನೈಸರ್ಗಿಕ ಕರೆ’ ಪೂರೈಸಬೇಕಾದ ಅನಿವಾರ್ಯ ಇಲ್ಲಿ ನಿರ್ಮಾಣವಾಗಿದೆ. ದುರ್ನಾತ ಬರುವುದರಿಂದ ಉಪನ್ಯಾಸಕರು, ವಿದ್ಯಾರ್ಥಿನಿಯರಿಗೆ ನೆರೆಯವರಿಂದ ಬೈಗುಳದ ಸುರಿಮಳೆ ನಿತ್ಯ ನಡೆಯುತ್ತದೆ. ಇಂಥ ದಯನೀಯ ಸ್ಥಿತಿಯಲ್ಲೇ ಕಾಲೇಜಿನಲ್ಲಿ ಪಾಠ, ಪ್ರಯೋಗಗಳು ನಡೆಯುತ್ತಿವೆ.

ಗ್ರಾಮೀಣ ಪ್ರದೇಶದ, ಬಡವರು, ಕೂಲಿಕಾರರು, ಆರ್ಥಿಕವಾಗಿ ಹಿಂದುಳಿದವರ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿರುವ ಪಟ್ಟಣದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನ ದುಃಸ್ಥಿತಿಯಿದು.

ಹೊಸ ಕೊಠಡಿಗಳ ನಿರ್ಮಾಣ ಕೆಲಸ ಅರ್ಧಕ್ಕೇ ನಿಂತಿದೆ. ಅಗತ್ಯ ಜಾಗ ಇದ್ದರೂ ಶೌಚಾಲಯದ ಕೆಲಸ ಆರಂಭಗೊಂಡಿಲ್ಲ. ಕೊಠಡಿಗಳ ಕೊರತೆಯಿಂದ ಬಯಲಲ್ಲಿ ಮತ್ತು ಅಪೂರ್ಣ ಸ್ಥಿತಿಯಲ್ಲಿರುವ ಕೊಠಡಿ ಗಳಲ್ಲೇ ಕುಳಿತು ವಿದ್ಯಾರ್ಥಿನಿ ಯರು ಸೋಮವಾರದಿಂದ ಅರ್ಧವಾರ್ಷಿಕ ಪರೀಕ್ಷೆ ಬರೆಯುತ್ತಿದ್ದಾರೆ.

ADVERTISEMENT

ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮೂರೂ ವಿಭಾಗಗಳಲ್ಲಿ ಒಟ್ಟು 1,044 ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಸದ್ಯ ಏಳು ಕೊಠಡಿಗಳು ಮಾತ್ರ ಇವೆ. ಇನ್ನೂ ಆರು ಕೊಠಡಿಗಳು ನಿರ್ಮಾಣಗೊಳ್ಳಬೇಕಿದೆ. ಒಂದು ಡೆಸ್ಕ್‌ನಲ್ಲಿ ನಾಲ್ಕೈದು ವಿದ್ಯಾರ್ಥಿನಿಯರು ಕುಳಿತುಕೊಳ್ಳುತ್ತಿದ್ದಾರೆ. ಡೆಸ್ಕ್‌ ಇಲ್ಲದ ಕಡೆ ನೆಲವೇ ಗತಿ. ಒಂದೇ ಪ್ರಯೋಗಾಲಯವಿದೆ. ವಿಜ್ಞಾನ ವಿಭಾಗದ ತರಗತಿಗಳ ಪ್ರಯೋಗಾಲಯಕ್ಕೆ ಪ್ರತ್ಯೇಕ ಜಾಗವಿಲ್ಲದ ಕಾರಣ ಸರದಿ ಪ್ರಕಾರ ಪ್ರಯೋಗ ನಡೆಸಬೇಕಾಗಿದೆ. ಹೀಗಾಗಿ ಈ ವಿಭಾಗದ ವಿದ್ಯಾರ್ಥಿನಿಯರು ಬೆಳಿಗ್ಗೆ 8ರಿಂದ ಸಂಜೆ 4ರವರೆಗೂ ಕಾಲೇಜಿನಲ್ಲೇ ಇರಬೇಕಾಗುತ್ತದೆ.

2021–22ರಲ್ಲಿ ಕೆಕೆಆರ್‌ಡಿಬಿಯ ಮೈಕ್ರೊ ಯೋಜನೆಯಲ್ಲಿ ಈ ಕಾಲೇಜಿನಲ್ಲಿ ಮೂರು ಪ್ರಯೋಗಾಲಯಗಳ ನಿರ್ಮಾಣಕ್ಕೆ ₹1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ನೆಲಮಟ್ಟದ ಒಂದು ಮತ್ತು ಎರಡು ಅಂತಸ್ತಿನ ಕಟ್ಟಡದ ಕೆಲಸ ಅರೆಬರೆ ನಡೆದಿದ್ದು, ನಾಲ್ಕು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿಯ ಹೊಣೆ ಹೊತ್ತಿರುವ ನಿರ್ಮಿತಿ ಕೇಂದ್ರದ ಎಂಜಿನಿಯರ್‌ಗಳು ಇತ್ತ ಕಣ್ಣು ಹಾಯಿಸಿಲ್ಲ ಎಂದು ಊರಿನ ಜನರು ಆರೋಪಿಸಿದ್ದಾರೆ.

ಇಲ್ಲಿನ ವಸತಿ ನಿಲಯದ ಹಳೆ ಕಟ್ಟಡ ತೆರವುಗೊಳಿಸಿದ ಜಾಗದಲ್ಲಿ ಮೂತ್ರಾಲಯ, ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದು, ₹21 ಲಕ್ಷ ಅನುದಾನ ಕೆಕೆಆರ್‌ಡಿಬಿಯಿಂದ ಬಿಡುಗಡೆಯಾಗಿದೆ. ಆದರೆ, ನಿರ್ಮಾಣ ಏಜೆನ್ಸಿಯಾಗಿರುವ ಪಂಚಾಯಿತಿ ರಾಜ್ ಎಂಜಿನಿಯರಿಂಗ್‌ ಉಪವಿಭಾಗದವರು ಕೆಲಸ ಆರಂಭಿಸಿಲ್ಲ. ಬಡವರ ಮಕ್ಕಳೇ ಹೆಚ್ಚಿರುವ ಕಾಲೇಜಿನ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪಾಲಕರೊಬ್ಬರು ‘ಪ್ರಜಾವಾಣಿ’ಗೆ ಹೇಳಿದ್ದಾರೆ. 

ಜಾಗ ಗುರುತಿಸಿದ್ದರೂ ಶೌಚಾಲಯ ನಿರ್ಮಾಣದ ಕೆಲಸ ಆರಂಭಗೊಂಡಿಲ್ಲ
ಕಾಲೇಜಿನಲ್ಲಿ ಶೌಚಾಲಯ ಹಾಗೂ ಮೂತ್ರಾಲಯದ ಸಮಸ್ಯೆ ಇದೆ. ಈ ಕಟ್ಟಡಗಳನ್ನು ನಿರ್ಮಿಸಲು ಅಗತ್ಯ ಜಾಗವಿದೆ. ಹಣವೂ ಬಿಡುಗಡೆಯಾಗಿದೆ. ಆದರೆ, ಕೆಲಸ ಆರಂಭಿಸಿಲ್ಲ.
–ಮಾಲಾಬಾಯಿ ಪಡಸಾಲಿಮನಿ, ಪ್ರಭಾರ ಪ್ರಾಚಾರ್ಯೆ, ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜು
ಕಾಲೇಜಿನಲ್ಲಿ ಶೌಚಾಲಯ ಹಾಗೂ ಮೂತ್ರಾಲಯದ ಸಮಸ್ಯೆ ಇದೆ. ಈ ಕಟ್ಟಡಗಳನ್ನು ನಿರ್ಮಿಸಲು ಅಗತ್ಯ ಜಾಗವಿದೆ. ಹಣವೂ ಬಿಡುಗಡೆಯಾಗಿದೆ. ಆದರೆ, ಕೆಲಸ ಆರಂಭಿಸಿಲ್ಲ ಮಾಲಾಬಾಯಿ ಪಡಸಾಲಿಮನಿ, ಪ್ರಭಾರ ಪ್ರಾಚಾರ್ಯೆ, ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜು

Quote -

‘ಹಣ ಖರ್ಚಿಗೆ ಸರ್ಕಾರದಿಂದ ಕೊಕ್ಕೆ’

‘ಕಾಲೇಜಿನ ಸಮಸ್ಯೆ ಗಮನಕ್ಕಿದೆ. ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಣ ಖರ್ಚು ಮಾಡುವುದಕ್ಕೆ ಕೊಕ್ಕೆ ಹಾಕಿದ್ದರಿಂದ ಎಲ್ಲ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಶೀಘ್ರದಲ್ಲೇ ಕೆಲಸ ಆರಂಭಿಸುವಂತೆ ನಿರ್ಮಿತಿ ಕೇಂದ್ರಕ್ಕೆ ಸೂಚಿಸಿದ್ದೇನೆ. ತ್ವರಿತಗತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಹೇಳುತ್ತೇನೆ’ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.