ಗಂಗಾವತಿ: ‘ಹಿಂದೂ ಧರ್ಮವನ್ನು ಉಳಿಸಿ, ಬೆಳೆಸುವುದು ಮಹಿಳೆಯರಿಂದ ಮಾತ್ರ ಸಾಧ್ಯ. ಮಹಿಳೆಯರಲ್ಲಿ ಆ ದುರ್ಗಾದೇವಿಯ ಶಕ್ತಿಯಿದ್ದು, ಮನೆಯಲ್ಲಿ ಹಿಂದೂ ಸಂಪ್ರದಾಯ, ಸಂಸ್ಕೃತಿ ಆಚರಿಸುತ್ತಾ ಬಂದರೆ, ಪುರುಷರು ತಾವಾಗಿಯೇ ಧರ್ಮ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ’ ಎಂದು ಮಂತ್ರಾಲಯ ರಾಯರಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.
ತಾಲ್ಲೂಕಿನ ಆನೆಗೊಂದಿ ಗ್ರಾಮದ ರಾಯರಮಠದ ಆವರಣದಲ್ಲಿ ಶುಕ್ರವಾರ ನಡೆದ ಜಯತೀರ್ಥರ ಉತ್ತರಾರಾಧನೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹಿಳೆಯರು ಭಕ್ತಿಪ್ರಿಯರು. ಅವರು ಮಾಡುವ ಪೂಜೆ ಕಂಕೈರ್ಯಗಳಿಂದಲೇ ಮನೆಯಲ್ಲಿ ಎಲ್ಲರಿಗೂ ನೆಮ್ಮದಿ, ಉತ್ತಮ ಆಯು-ಆರೋಗ್ಯ ಸಿಗುತ್ತಿದೆ. ಹಿಂದೂ ಧರ್ಮ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಹಿರಿದು. ಇಂದಿನ ಜಯತೀರ್ಥರ ಉತ್ತರಾರಾಧನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದು ಸಂತಸದ ವಿಷಯವಾಗಿದೆ’ ಎಂದರು.
‘ಪುರಾತನ ಕಾಲದ ಇತಿಹಾಸ ಹೊಂದಿದ ಆನೆಗೊಂದಿ ಗ್ರಾಮದ ನಡುಗಡ್ಡೆಯಲ್ಲಿ 9 ಯತಿಗಳು ಬೃಂದಾನವಸ್ಥರಾಗಿದ್ದು, ಅದಕ್ಕಾಗಿ ಅದನ್ನು ನವಬೃಂದಾವನಗಡ್ಡೆ ಎಂದು ಕರೆಯಲಾಗುತ್ತಿದೆ. ಇಲ್ಲಿ ಪದ್ಮನಾಭ ತೀರ್ಥರು, ವ್ಯಾಸರಾಜ ತೀರ್ಥರು ಸೇರಿ ಇತರೆ ಯತಿಗಳ ಬೃಂದಾವನಗಳು ದಿವ್ಯ ಸನ್ನಿಧಾನವಾಗಿವೆ’ ಎಂದು ತಿಳಿಸಿದರು.
ಆರಾಧನೆಗೆ ಕೆಲವರಿಂದ ಅಡ್ಡಿ: ‘ಜಯತೀರ್ಥರ ಆರಾಧನಾ ಮಹೋತ್ಸವವನ್ನು ನವಬೃಂದಾವನಗಡ್ಡೆಯಲ್ಲಿ ಆಚರಿಸಬೇಕಿತ್ತು. ಕೆಲವರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಧಾರವಾಡ ಹೈಕೋರ್ಟ್ ನಮಗೆ ಆಚರಿಸಲು ಅವಕಾಶ ನೀಡಲಿಲ್ಲ. ನಾವೆಲ್ಲರೂ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಬೇಕು’ ಎಂದರು.
‘ಭಕ್ತರು ನಿರಾಶರಾಗದೆ ತುಂಗಭದ್ರಾ ನದಿಯ ತಟದಲ್ಲಿಯೇ ನಿಂತು ಸ್ಮರಿಸುವ ಮೂಲಕ ಜಯತೀರ್ಥರ ಆಶೀರ್ವಾದ ಪಡೆಯಬೇಕು. ಜಯತೀರ್ಥರ ಆರಾಧನೆಗೆ ತೊಡಕು ಬರಬಾರದೆಂದು ಆನೆಗೊಂದಿ ರಾಯರಮಠದಲ್ಲಿ 3 ದಿನಗಳ ಕಾಲ ಆರಾಧನಾ ಮಹೋತ್ಸವ ನಡೆಸಲಾಗಿದೆ’ ಎಂದು ಹೇಳಿದರು.
ತುಂಗಭದ್ರಾ ನದಿಗೆ ಪೂಜೆ: ತುಂಗಾಭದ್ರ ನದಿ ಬಳಿಯಿಂದ ನವಬೃಂದಾವನಕ್ಕೆ ತೆರಳುವ ಸ್ಥಳದ ಬಳಿಗೆ ರಾಯರಮಠದ ಶ್ರೀಗಳು ಭೇಟಿ ನೀಡಿ, ಜಯತೀರ್ಥರ ಆರಾಧನೆ ನಿಮಿತ್ತ ಅಪಾರ ಪ್ರಮಾಣದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಗೆ ಮಂಗಳಾರತಿ ಮಾಡಿ, ಜಯತೀರ್ಥರ ಬೃಂದಾವನಕ್ಕೆ ಪೂಜೆ ಸಲ್ಲಿಸಿದರು.
‘ಈಗಾಗಾಗಲೇ ಆನೆಗೊಂದಿ ಗ್ರಾಮದಲ್ಲಿ ಜಯತೀರ್ಥರ ಆರಾಧನಾ ಮಹೋತ್ಸವ ಅಂಗವಾಗಿ ಜಯತೀರ್ಥರ ಭಾವಚಿತ್ರ ಮೆರವಣಿಗೆ, ಮಹಿಳೆಯರಿಂದ ಸಾಮೂಹಿಕ ಭಜನೆ, ನೃತ್ಯ, ಪಂಡಿತರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳು ನಡೆಸಲಾಗಿದೆ. ಭಕ್ತರೇ ನಿರಾಶೆ ಪಡೆಬೇಡಿ. ಮುಂದಿನ ದಿನಗಳಲ್ಲಿ ನ್ಯಾಯಾಲಯದಿಂದ ಪರವಾನಗಿ ಪಡೆದು ನವ ಬೃಂದಾವನದಲ್ಲಿ ಜಯತೀರ್ಥರ ಆರಾಧನೆ ನಡೆಸೋಣ’ ಎಂದು ಭರವಸೆ ತುಂಬಿದರು.
ಬೆಳಿಗ್ಗೆ ಆನೆಗೊಂದಿ ಮಠದಲ್ಲಿ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.
ಪವನ್ ಆಚಾರ್, ಸುಧೀಂದ್ರ ಆಚಾರ್, ನರಸಿಂಹ ಆಚಾರ್, ವಿಜೀಂದ್ರ ಆಚಾರ್, ಶ್ರೀನಿವಾಸ ಆಚಾರ್, ಆನೆಗೊಂದಿ ರಾಯರಮಠದ ಸುಮಂತ ಕುಲಕರ್ಣಿ ಸೇರಿದಂತೆ ವಿವಿಧ ರಾಜ್ಯ, ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.