ADVERTISEMENT

ಗಂಗಾವತಿ | ತಮಗೆ ಅವಕಾಶ ಕೊಡುವಂತೆ ಉಭಯ ಮಠಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 16:02 IST
Last Updated 27 ಜೂನ್ 2023, 16:02 IST
ಗಂಗಾವತಿಯ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ರಾಯರಮಠದ ಹಾಗೂ ಉತ್ತರಾದಿಮಠದ ಪ್ರಮುಖರ ಸಭೆ ಜರುಗಿತು
ಗಂಗಾವತಿಯ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ರಾಯರಮಠದ ಹಾಗೂ ಉತ್ತರಾದಿಮಠದ ಪ್ರಮುಖರ ಸಭೆ ಜರುಗಿತು   

ಗಂಗಾವತಿ: ತಾಲ್ಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ಜು. 6ರಿಂದ ಮೂರು ದಿನ ಕಾರ್ಯಕ್ರಮಗಳನ್ನು ನಡೆಸಲು ಉತ್ತರಾದಿ ಮತ್ತು ರಾಯರ ಮಠದವರು ಇಬ್ಬರೂ ಮುಂದಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಚರ್ಚಿಸಿಲು ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು.

ತಹಶೀಲ್ದಾರ ಮಂಜುನಾಥ ಸಭೆಯ ಅಧ್ಯಕ್ಷತೆ ವಹಿಸಿ ಉಭಯ ಮಠಗಳ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿದರು.

ರಾಯರಮಠದ ಪರ ವಕೀಲ ಶ್ರೀನಿವಾಸ ಢಣಾಪುರ, ಪ್ರಹ್ಲಾದರಾವ ನವಲಿ, ರಾಘವೇಂದ್ರರಾವ ಕುಲಕರ್ಣಿ, ವಿಜಯರಾವ ಢಣಾಪುರ ಮಾತನಾಡಿ ’ಜು. 6ರಿಂದ 8ರ ತನಕ ಜಯತೀರ್ಥರ ಆರಾಧನೆ ನೆರವೇರಿಸಲು ಅನುಮತಿ ಕೊಡಬೇಕು’ ಎಂದು ಮನವಿ ಮಾಡಿದರು. 

ADVERTISEMENT

ಉತ್ತರಾದಿಮಠ ಪರ ವಕೀಲರಾದ ಎ.ಕೆ.ಪಾಟೀಲ, ಗೋಪಿನಾಥ ಆಲೂರು, ಶರದ್ ದಂಡಿನ್ ’ಅದೇ ಅವಧಿಯಲ್ಲಿ ರಘುವರ್ಯರ ಮಹಿಮೋತ್ಸವ ಆಚರಿಸಲು ನಮಗೇ ಅವಕಾಶ ಕೊಡಬೇಕು’ ಎಂದು ಕೋರಿದರು.

ಎರಡೂ ಕಡೆಯ ಅಭಿಪ್ರಾಯ ಆಲಿಸಿದ ತಹಶೀಲ್ದಾರ್‌ ‘ಎರಡೂ ಮಠದವರು ಒಂದೇ ಸಮಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಯಾರಿಗೆ ಅನುಮತಿ ಕೊಡಬೇಕು ಎನ್ನುವುದರ ಬಗ್ಗೆ ಈಗಲೇ ತೀರ್ಮಾನ ಮಾಡುವುದು ಕಷ್ಟ. ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಬುಧವಾರ ಉಭಯ ಮಠದ ಪ್ರಮುಖರಿಗೆ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು. 

ಪೊಲೀಸ್ ಅಧಿಕಾರಿ ಮಂಜುನಾಥ, ಉಭಯಮಠಗಳ ಸದಸ್ಯರಾದ ಸುಮಂತ ಕುಲಕರ್ಣಿ, ಗೋಪಾಲಕೃಷ್ಣ, ಗುರು ರಾಜ ಬೆಳ್ಳುಬ್ಬಿ, ವಾಸು ನವಲಿ,ಸಂಜೀವ ಕುಲಕರ್ಣಿ, ಅರುಣ ಅಯೋಧ್ಯ, ಅನಿಲ್‌ ಅಯೋಧ್ಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.