ADVERTISEMENT

ಗಂಗಾವತಿ: ಎಂಟು ತಿಂಗಳ ವೇತನ ಬಾಕಿ, ಕಂಗಾಲಾದ 1,630 ಹೊರಗುತ್ತಿಗೆ ನೌಕರರು

ಎನ್.ವಿಜಯ್
Published 10 ಮೇ 2024, 5:45 IST
Last Updated 10 ಮೇ 2024, 5:45 IST
ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಎಂಟು ತಿಂಗಳ ವೇತನ ಪಾವತಿ ಮಾಡಬೇಕೆಂದು ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಜಿಲ್ಲಾ ಸಮಿತಿ ಸದಸ್ಯರು ಗಂಗಾವತಿ ಸಮಾಜ ಕಲ್ಯಾಣ ಇಲಾಖೆ ಗ್ರೇಡ್-1ಸಹಾಯಕ ನಿರ್ದೇಶಕರಿಗೆ ಈಚೆಗೆ ಮನವಿ ಸಲ್ಲಿಸಿದರು
ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಎಂಟು ತಿಂಗಳ ವೇತನ ಪಾವತಿ ಮಾಡಬೇಕೆಂದು ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಜಿಲ್ಲಾ ಸಮಿತಿ ಸದಸ್ಯರು ಗಂಗಾವತಿ ಸಮಾಜ ಕಲ್ಯಾಣ ಇಲಾಖೆ ಗ್ರೇಡ್-1ಸಹಾಯಕ ನಿರ್ದೇಶಕರಿಗೆ ಈಚೆಗೆ ಮನವಿ ಸಲ್ಲಿಸಿದರು   

ಗಂಗಾವತಿ: ಕಳೆದ ಎಂಟು ತಿಂಗಳಿಂದ ಜಿಲ್ಲೆಯ ಎಲ್ಲ ತಾಲ್ಲೂಕಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಸತಿ ನಿಲಯದ ಹೊರಗುತ್ತಿಗೆ ನೌಕರರ ವೇತನ ಪಾವತಿ ಬಾಕಿ ಉಳಿದಿದ್ದು, 1,630ಕ್ಕೂ ಹೆಚ್ಚು ನೌಕರರು ವೇತನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಗಂಗಾವತಿ ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಒಟ್ಟು 52 ವಸತಿ ನಿಯಲಗಳು ಇದ್ದು ಇಲ್ಲಿನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಹೊರಗುತ್ತಿಗೆ ನೌಕರರು ಹಗಲಿರುಳು ಶ್ರಮಿಸುತ್ತಿದ್ದರೂ ಸಮಯಕ್ಕೆ ಸರಿಯಾಗಿ ವೇತನ ಬರುತ್ತಿಲ್ಲ.

ಜಿಲ್ಲೆಯ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಸತಿ ನಿಲಯಗಳಲ್ಲಿ 207 ಅಡುಗೆಯವರು, 308 ಅಡುಗೆ ಸಹಾಯಕರು, 151 ಕಾವಲು ಸಿಬ್ಬಂದಿ, ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಸತಿ ನಿಲಯಗಳಲ್ಲಿ 370 ಅಡುಗೆಯವರು , 397 ಅಡುಗೆ ಸಹಾಯಕರು,137 ಕಾವಲು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ಎಷ್ಟು ತಿಂಗಳ ವೇತನ ಪಾವತಿಯಿಲ್ಲ!: ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ಪ್ರತಿ ತಿಂಗಳು ವೇತನ ಪಾವತಿ ಮಾಡಬೇಕೆಂಬ ನಿಯಮವಿದ್ದರೂ, ಸಂಬಂಧಪಟ್ಟ ಏಜೆನ್ಸಿ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪವಿದೆ. ಸಂಬಳಕ್ಕಾಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಬಜೆಟ್ ಇಲ್ಲ ಎನ್ನುವ ಸಬೂಬು ಹೇಳುತ್ತಿದ್ದು, ಇದರ ಪರಿಣಾಮ 2023ರ ಸೆಪ್ಟೆಂಬರ್ ತಿಂಗಳಿಂದ 2024 ಏಪ್ರಿಲ್‌ವರೆಗೆ ವೇತನ ನೀಡಬೇಕಿದೆ.

ವೇತನಕ್ಕೆ ಅನುದಾನ ಎಷ್ಟು ಬರಬೇಕು?: ಜಿಎಸ್ಟಿ, ಇಎಸ್ಐ, ಪಿಎಫ್ ಕಡಿತವಾಗಿ ಹೊರಗುತ್ತಿಗೆ ನೌಕರರಿಗೆ ತಿಂಗಳ ವೇತನ ₹10-12 ಸಾವಿರ ಮಾತ್ರ ಸಿಗುತ್ತಿದೆ.ಇದೀಗ ವೇತನ ವಿಳಂಬವಾಗಿದ್ದು, ಈವರೆಗೆ ಯೋಜನೆಯ 61ನೇ ಹೆಡ್‌ನಲ್ಲಿ ₹1.09 ಕೋಟಿ, 29ನೇ ಹೆಡ್ ₹1.37ಕೋಟಿ, 30ನೇ ಹೆಡ್ ₹14.02 ಲಕ್ಷ, 32ನೇ ಹೆಡ್‌ನಡಿ ₹4.64 ಲಕ್ಷ ಸೇರಿ ₹2.65 ಕೋಟಿ ಅನುದಾನ ವೇತನ ಪಾವತಿ ಆಗಬೇಕಿದೆ.

‘ನಿಯಮಿತವಾಗಿ ವೇತನ ಬಾರದ ಕಾರಣ ಸಾಲ ಮಾಡಿ ಮನೆ ನಿರ್ವಹಣೆ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ವೇತನದ ಅನುದಾನ ಬಿಡುಗಡೆ ಮಾಡಲು ಅಧಿಕಾರಿಗಳನ್ನು ಕೇಳಿದರೆ, ಬಜೆಟ್ ಮತ್ತು ಏಜೆನ್ಸಿ ನೆಪ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಸಮಯಕ್ಕೆ ವೇತನವೇ ಹಾಕುವುದಿಲ್ಲ’ಎಂದು ಮುಸಲಾಪುರ ಮೆಟ್ರಿಕ್ ಪೂರ್ವ ವಸತಿ ನಿಲಯದ ಕಾವಲುಗಾರ ದವಲಸಾಬ್ ಬೇಸರ ವ್ಯಕ್ತಪಡಿಸಿದರು.

ಹೊರಗುತ್ತಿಗೆ ನೌಕರರ ವೇತನ ಪಾವತಿ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು. 3 ತಿಂಗಳ ವೇತನ ಕೂಡಲೇ ಪಾವತಿ ಮಾಡುವ ಭರವಸೆ ನೀಡಿ ವಾರ ಕಳೆದರೂ ವೇತನ ಪಾವತಿ ಆಗಿಲ್ಲ. 2-3ದಿನಗಳಲ್ಲಿ ಪಾವತಿ ಆಗದಿದ್ದರೆ ಜಿಲ್ಲಾ ಉಸ್ತುವಾರಿ ಮತ್ತು ಜಿಲ್ಲಾಡಳಿತದ ಎದುರು ಹೋರಾಟ ಮಾಡಲಾಗುತ್ತದೆ.
–ಗ್ಯಾನೇಶ ಕಡಗದ, ಜಿಲ್ಲಾಧ್ಯಕ್ಷ ಹೊರಗುತ್ತಿಗೆ ನೌಕರರ ಸಮಿತಿ ಕೊಪ್ಪಳ
ಎಂಟು ತಿಂಗಳಿಂದ ವೇತನ ಆಗಿಲ್ಲ. ಮಕ್ಕಳ ಶಿಕ್ಷಣ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ವೇತನ ಪಾವತಿಸುವಂತೆ ಅಧಿಕಾರಿಗಳಿಗೆ ಮನವಿ ನೀಡಿದ್ದು ವೇತನ ಸಂದಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ಸಾಲ ಮಾಡಿ ಜೀವನ ನಡೆಸಬೇಕು.
–ಪಾರ್ವತಿ, ಅಡುಗೆ ತಯಾರಕಿ ಅಂಬೇಡ್ಕರ್ ಮೆಟ್ರಿಕ್ ನಂತರ ವಸತಿ ನಿಲಯ, ಸಾಯಿನಗರ
ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಸಲು ಅನುದಾನ ನೀಡುವಂತೆ ಸರ್ಕಾರಕ್ಕೆ ಇಲಾಖೆಯಿಂದ ಬೇಡಿಕೆಯಿಟ್ಟಿದ್ದು ನಿರೀಕ್ಷೆಗೆ ತಕ್ಕಂತೆ ಅನುದಾನ ನೀಡದ ಕಾರಣ ವೇತನ ಪಾವತಿ ವಿಳಂಬವಾಗಿದೆ. 3 ತಿಂಗಳ ವೇತನ ಪಾವತಿ ಪ್ರಕ್ರಿಯೆ ನಡೆಯುತ್ತಿದ್ದು 2-3 ದಿನಗಳಲ್ಲಿ ಜಮಾ ಆಗಬಹುದು.
–ರಾಜು ತಳವಾರ, ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.