ಗಂಗಾವತಿ: ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಕೊಪ್ಪಳ, ಗದಗ ಜಿಲ್ಲೆಯ ಗಜೇಂದ್ರಗಡ, ರೋಣ, ಬಾಗಲಕೋಟೆ ಜಿಲ್ಲೆಯ ಹನಗುಂದ, ಇರಕಲ್ಗಡ ತಾಲ್ಲೂಕು ಭಾಗವನ್ನ ನೀರಾವರಿ ಮಾಡಬೇಕು ಎಂದು ಒತ್ತಾಯಿಸಿ ಕುಷ್ಟಗಿ ತಾಲ್ಲೂಕಿನ ಯಲಬುಣಚಿ ಗ್ರಾಮದ ರೈತರು ಬುಧವಾರ ಅಂಜನಾದ್ರಿ ಬೆಟ್ಟದಿಂದ ನವದೆಹಲಿ ಸಂಸತ್ ಭವನಕ್ಕೆ ಪಾದಯಾತ್ರೆ ಆರಂಭಿಸಿದರು.
ಯಲಬುಣಚಿ ಗ್ರಾಮದ ರೈತ ನಬೀಸಾಬ ಎಂ ಹೊಲಗೇರಿ ಮಾತನಾಡಿ, ಕೊಪ್ಪಳ, ಗದಗ, ಬಾಗಲಕೋಟೆ ಜಿಲ್ಲೆಯ ಕೆಲ ತಾಲ್ಲೂಕುಗಳು ಒಣಭೂಮಿಯನ್ನು ಹೊಂದಿದ್ದು, ಇಲ್ಲಿ ಸರಿಯಾಗಿ ಮಳೆ ಆಗದಿದ್ದರೆ ರೈತರು ಬೆಳೆ ಬೆಳೆಯಲು ಸಾಧ್ಯವೇ ಇಲ್ಲ. ಪ್ರಸಕ್ತ ಸಾಲಿನ ಬರದಿಂದ ಸಾಕಷ್ಟು ರೈತರು ಸಾಲದಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಒಣಭೂಮಿ ಹೊಂದಿರುವ ತಾಲ್ಲೂಕುಗಳ ಸಮೀಪ ಆಲಮಟ್ಟಿ, ತುಂಗಾಭದ್ರ ಜಲಾಶಯಗಳಿದ್ದು, ಇವುಗಳು ಭರ್ತಿಯಾದ ಸಂದರ್ಭದಲ್ಲಿ ಅಪಾರ ನೀರು ವ್ಯರ್ಥವಾಗಿ ಪೋಲಾಗುತ್ತಿವೆ. ಹೊರಬಿಡುವ ನೀರನ್ನು ಒಣ ಬೇಸಾಯ ಪ್ರದೇಶದ ತಾಲ್ಲೂಕು ಭಾಗಕ್ಕೆ ತಿರುಗಿಸಿದರೆ ಬೆಳೆ ಬೆಳೆಯಲು ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.
ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳಿಗೆ ಜೋಡಣೆ ಮಾಡಿದರೆ ಬೇಸಾಯಕ್ಕೆ ತುಂಬ ಅನುಕೂಲವಾಗಲಿದೆ. ಹಾಗೇ ತುಂಗಾಭದ್ರ, ಆಲಮಟ್ಟಿ ಜಲಾಶಯದಲ್ಲಿ ತುಂಬ ಹೂಳು ತುಂಬಿದ್ದು, ಅದೆನ್ನೆಲ್ಲ ತೆಗೆದರೆ ಹೆಚ್ಚಿನ ನೀರು ಸಂಗ್ರಹವಾಗಿ ಬೆಳೆಗಳಿಗೆ ಉಪಯೋಗವಾಗಲಿದೆ. ಹಾಗಾಗಿ ಅಂಜನಾದ್ರಿ ಬೆಟ್ಟದಿಂದ ನವದೆಹಲಿ ಸಂಸತ್ ಭವನಕ್ಕೆ ಪಾದಯಾತ್ರೆ ತೆರಳಿದ್ದೇವೆ ಎಂದರು.
ಯಾತ್ರೆಯಲ್ಲಿ ರೈತರಾದ ಯಮನೂರ, ಶಿವಾನಂದ, ಬಸವರಾಜ, ಮು ಕ್ತಾಂಸಾಬ, ಖಾಜಸಾಬ, ಮುರ್ತುಜಾಸಾಬ, ಅಲ್ಲಸಾಬ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.