ಮುನಿರಾಬಾದ್: ಕಳೆದ ವರ್ಷ ಮಳೆ ಕೊರತೆಯಿಂದ ತುಂಗಭದ್ರಾ ಜಲಾಶಯ ತುಂಬಲಿಲ್ಲ. ಹೀಗಾಗಿ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರು ಪಂಪ್‌ಸೆಟ್ ನೆರವಿನ ಮೂಲಕ ಭತ್ತ ಬೆಳೆಯುತ್ತಿದ್ದು, ಉಳಿದವರು ಬೇರೆ ಬೆಳೆಯುತ್ತ ಮುಖ ಮಾಡಿದ್ದಾರೆ.
ಅಚ್ಚುಕಟ್ಟು ಪ್ರದೇಶದ ಬೇವಿನಹಳ್ಳಿ ಪ್ರದೇಶದಲ್ಲಿ ಪಂಪ್‌ಸೆಟ್ ನೀರಾವರಿ ಜಮೀನಿನಲ್ಲಿ ಭತ್ತ ನಾಟಿ ಆರಂಭವಾಗಿದೆ.
‘ಪ್ರಸ್ತುತ 7 ತಾಸು ಪೂರ್ಣ ಪ್ರಮಾಣದ ವಿದ್ಯುತ್ ಪೂರೈಕೆ ಇದೆ. ಇದೇ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಇದ್ದರೆ ನಾವು ಭತ್ತ ಬೆಳೆದದ್ದು ಕೈಗೆ ಸಿಗುತ್ತದೆ, ಇದರಲ್ಲಿ ಏರುಪೇರಾದರೆ ಆ ಬೆಳೆ ಕೂಡ ಬರುವುದು ಕಷ್ಟ’ ಎಂದು ಬೇವಿನಹಳ್ಳಿಯ ರೈತ ಶೇಖರಪ್ಪ ಸಾಹುಕಾರ ತಿಳಿಸಿದರು.
‘ಹೋಬಳಿಯ ಹಿಟ್ನಾಳ, ಅಗಳಕೇರಾ, ಶಿವಪುರ ಮಾಗಾಣಿ ಪ್ರದೇಶದ ರೈತರು ನೀರು ಬಂದೇ ಬರುತ್ತದೆ ಎಂಬ ಭರವಸೆಯಿಂದ ಭತ್ತದ ಸಸಿ ಹಾಕಿಕೊಂಡು ಕುಳಿತಿದ್ದೇವೆ. ಜಿಲ್ಲಾಧಿಕಾರಿ ಸೇರಿದಂತೆ ಮುಖ್ಯಮಂತ್ರಿಯವರೆಗೆ ನೀರು ಬಿಡುವಂತೆ ಮನವಿ ಮಾಡಿದ್ದೇವೆ. ವಿಜಯನಗರ ಕಾಲುವೆಗಳ ಕೋಟಾದ ಅಡಿ ನಮಗೆ ನೀರು ಬಂದೇ ಬರುತ್ತದೆ ಎಂಬ ಭರವಸೆ ಇದೆ’ ಎನ್ನುತ್ತಾರೆ ಅಗಳಕೇರಾ ಗ್ರಾಮದ ಶರಣಬಸಪ್ಪ ಆನೆಗೊಂದಿ ಮತ್ತು ವಿರೂಪಾಕ್ಷಯ್ಯ ಭೂಸನೂರು ಮಠ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೂಲಕ ಶಿವಪುರ ಬಳಿಯ ಭೋರುಕಾ ಕೆರೆ ತುಂಬಿಸಿಕೊಂಡರೆ ನಮ್ಮ ಮೂರು ಗ್ರಾಮಗಳ ಸೀಮೆಗೆ ನೀರು ಸಾಲುತ್ತದೆ ಎನ್ನುತ್ತಾರೆ ಇದೇ ರೈತರು.
ಪ್ರಸ್ತುತ ಜಲಾಶಯದಲ್ಲಿ ಸುಮಾರು 8-9 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿದೆ. ಇದು ಕುಡಿಯುವ ಉದ್ದೇಶಕ್ಕೆ ಮತ್ತು ಜಲಚರಗಳಿಗೆ ಮಾತ್ರ ಮೀಸಲಿರಿಸಲಾಗಿದೆ ಎನ್ನುತ್ತಾರೆ ಜಲಾಶಯದ ಅಧಿಕಾರಿಗಳು.
ತುಂಗಭದ್ರಾ ಜಲಾಶಯ ನಂಬಿಕೊಂಡೆ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 10ರಿಂದ 15 ಕಬ್ಬಿಣದ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಡಿಸೆಂಬರ್ ತಿಂಗಳಿನಿಂದ ನೀರಿನ ಕೊರತೆ ಎದುರಿಸುತ್ತಿರುವ ಕಾರ್ಖಾನೆಗಳಿಗೆ ದಿಕ್ಕೇ ತೋಚದಂತಾಗಿದೆ. ಕಾರ್ಖಾನೆಗಳ ಮಾಲೀಕರು ಖಾಸಗಿ ಬೋರ್‌ವೆಲ್‌ಗಳತ್ತ ಮುಖ ಮಾಡಿದ್ದಾರೆ. ಕೆಲವು ಕಾರ್ಖಾನೆಗಳ 1-2 ಘಟಕಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ ಎಂಬ ವರದಿ ಇದೆ.
ಕೆಲವರು ನೀರಿನ ಲಭ್ಯತೆ ಆಧಾರದ ಮೇಲೆ ಭತ್ತ ಬೆಳೆಯುತ್ತಿದ್ದರೆ ಇನ್ನೂ ಕೆಲವರು ಜಮೀನನ್ನು ಖಾಲಿ ಬಿಟ್ಟಿದ್ದಾರೆ. ಹಲವರು ಮೆಕ್ಕೆಜೋಳ ಬೆಳೆಯತ್ತ ಮುಖ ಮಾಡಿದ್ದಾರೆ.–ಪರಸಪ್ಪ ಮಡ್ಡಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.