ADVERTISEMENT

ಪಂಚರತ್ನ ಯೋಜನೆ ಜಾರಿ ಮಾಡಲು ಶಕ್ತಿ ತುಂಬಿ: ಎಚ್‌.ಡಿ. ಕುಮಾರಸ್ವಾಮಿ

ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜನರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 4:49 IST
Last Updated 31 ಜನವರಿ 2023, 4:49 IST
ಕುಷ್ಟಗಿಯಲ್ಲಿ 'ಪಂಚರತ್ನ' ರಥಯಾತ್ರೆ ಸಮಾವೇಶವನ್ನು ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು
ಕುಷ್ಟಗಿಯಲ್ಲಿ 'ಪಂಚರತ್ನ' ರಥಯಾತ್ರೆ ಸಮಾವೇಶವನ್ನು ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು   

ಕುಷ್ಟಗಿ: ‘ರಾಜ್ಯದ ಮತದಾರರು ಜೆಡಿಎಸ್‌ಗೆ ಪೂರ್ಣಪ್ರಮಾಣದ ಬಹುಮತ ನೀಡಿ ಆಡಳಿತಾತ್ಮಕ ಶಕ್ತಿ ತುಂಬಿದರೆ 'ಪಂಚರತ್ನ' ಯೋಜ ನೆಗಳ ಸಮರ್ಪಕ ಅನುಷ್ಟಾನದ ಮೂಲಕ ನಾಡಿನ ಜನರ ನೆಮ್ಮದಿ ಮತ್ತು ಸ್ವಾಭಿಮಾನದ ಬದುಕಿಗೆ ಪಕ್ಷ ಆಸರೆಯಾಗಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ಇಲ್ಲಿ ಹೇಳಿದರು.

'ಪಂಚರತ್ನ ರಥಯಾತ್ರೆ' ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಐದು ವರ್ಷಗಳಲ್ಲಿ ಐದು ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಟಾನ ಗೊಳಿಸುತ್ತೇನೆ. ಪಂಚರತ್ನ ರಥಯಾತ್ರೆಯನ್ನು ವೈಯಕ್ತಿಕ ಸ್ವಾರ್ಥದ ಉದ್ದೇಶಕ್ಕೆ ಬಳಸಿಕೊಳ್ಳದೆ ರಾಜ್ಯದ ಉದ್ದಗಲ್ಲೂ ಭೇಟಿ ನೀಡಿ ಜನರಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.

ಮೂಲಸೌಲಭ್ಯ, ನೀರಾವರಿ, ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿರೈತರು, ಮಹಿಳೆಯರು, ಯುವಕರು ಅನುಭವಿಸು ತ್ತಿರುವ ಯಾತನೆ ದೂರವಾಗಿಸಲು ರಾಷ್ಟ್ರೀಯ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಎಂದು ಸರ್ಕಾರ ಹೇಳುತ್ತಿದ್ದರೆ ಇಲ್ಲಿ ಮಹಿಳೆಯರು ಕತ್ತಲಿಗಾಗಿ ಕಾಯುವಂಥ ಸ್ಥಿತಿ ಇದೆ ಎಂದು ಹೇಳಿದರು.

ADVERTISEMENT

ಆಕಸ್ಮಿಕ ಸಿಎಂ: ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಈಗ ಪರ್ಸೆಂಟೇಜ್‌ ಬಗ್ಗೆ ಚರ್ಚಿಸುತ್ತವೆ. ಆದರೆ ಎರಡು ಬಾರಿ ತಾವು ಆಕಸ್ಮಿಕವಾಗಿ ಮುಖ್ಯಮಂತ್ರಿಯಾದರೂ ಅಪಮಾರ್ಗದಿಂದ ಸಂಪಾದನೆ ಮಾಡಲಿಲ್ಲ, ಪಾಪದ ಹಣದಿಂದ ಸರ್ಕಾರ ನಡೆಸಲಿಲ್ಲ. ಸರ್ಕಾರದ
ಬೊಕ್ಕಸ ಲೂಟಿ ಹೊಡೆಯಲಿಲ್ಲ. ಎಷ್ಟೇ ಆಮಿಷ, ಒತ್ತಡ ಬಂದರು ಲಾಟರಿ, ಸಾರಾಯಿ ನಿಷೇಧಿಸಲಾಯಿತು ಎಂದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಎಕೆರೆಗೆ ರೈತರಿಗೆ ಪ್ರತಿವರ್ಷ ₹10 ಸಾವಿರ ಧನಸಹಾಯ, ಮಹಿಳೆಯರಿಗೆ ಆರ್ಥಿಕ ಪ್ರೋತ್ಸಾಹ, ಜನರ ತಲಾ ಮಾಸಿಕ ಆದಾಯ ₹15 ಸಾವಿರ ಬರುವಂತೆ ಮಾಡದಿದ್ದರೆ ಮುಂದೆ ಮತ ಕೇಳುವುದಿಲ್ಲ ಎಂದರು.

ಪಂಚರತ್ನ ರಥಯಾತ್ರೆ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿದ್ದು ಕೆಲವರಿಗೆ ಸಂಘಟನೆಗೆ ಜವಾಬ್ದಾರಿ ನೀಡಲಿದ್ದು ಅದರಲ್ಲಿ ಅವರು ತೇರ್ಗಡೆಯಾದರೆ ಮಾತ್ರ ಅಂಥವರ ಕಾರ್ಯಕ್ರಮಗಳಿಗೆ ಮಾನ್ಯತೆ ನೀಡುತ್ತೇನೆ. ಕನಕಗಿರಿ ಮತ್ತು ಯಲಬುರ್ಗಾ ಆಕಾಂಕ್ಷಿಗಳು ಜನರ ಬಳಿಗೆ ಹೋಗಿಲ್ಲ, ಇದೇ ಸ್ಥಿತಿ ಮುಂದುವರೆದರೆ ಬೇರೆಯವರಿಗೆ ಟಿಕೆಟ್‌ ನೀಡಬೇಕಾಗುತ್ತದೆ ಎಂದೆ ವೇದಿಕೆಯಲ್ಲಿದ್ದ ಆಕಾಂಕ್ಷಿಗಳಿಗೆ ನೇರ ಎಚ್ಚರಿಕೆ ನೀಡಿದರು.

ನಿಯೋಜಿತ ಅಭ್ಯರ್ಥಿ ತುಕಾರಾಮ ಸೂರ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಮಹಾಂತ ಯ್ಯನಮಠ, ಸಿ.ಎಂ.ಹಿರೇಮಠ, ಅಮರೇಗೌಡ ಪಾಟೀಲ, ಸುವರ್ಣಮ್ಮ ಸೇರಿ ಅನೇಕ ಪ್ರಮುಖರು ಇದ್ದರು.

‘ಜೆಡಿಎಸ್ ಆಡಳಿತಕ್ಕೆ ಅವಕಾಶ ನೀಡಿ’

ತಾವರಗೇರಾ: 'ಬಿಜೆಪಿ ಸರ್ಕಾರ ಬಡವರ ವಿರೋಧದ ಯೋಜನೆ ಜಾರಿಗೆ ತಂದಿದೆ. ನಾನು ಮುಖ್ಯಮಂತ್ರಿ ಇದ್ದ ಸಮಯದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೆ, ದೀನ ದಲಿತರ ಮತ್ತು ಬಡವರ ಯೋಜನೆಗಳನ್ನು ಜಾರಿಗೆ ತಂದು ಸೇವೆ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಏರ್ಪಡಿಸಿದ್ದ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಕಾರ್ಯಕ್ರಮದ ರೋಡ್ ಶೋ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ, ರಾಜ್ಯದಲ್ಲಿ ಪಕ್ಷ ಆಡಳಿತಕ್ಕೆ ಬಂದರೆ 24 ಗಂಟೆ ವಿದ್ಯುತ್, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರ ಸಾಲ ಮನ್ನಾ, ಗ್ರಾ.ಪಂ ವ್ಯಾಪ್ತಿಯಲ್ಲಿ ಒಂದು ಹೈಟೆಕ್ ಆಸ್ಪತ್ರೆ, ಪ್ರತಿ ಎಕರೆ ₹10 ಸಾವಿರ ನೀಡುವ ಯೋಜನೆ ಘೋಷಣೆ ಮಾಡಲಾಗುವದು ಎಂದರು.

ನಂತರ ಬಸವೇಶ್ವರ ವೃತ್ತದಿಂದ ಶ್ಯಾಮೀದಲಿ ವೃತ್ತದ ಮುಖ್ಯರಸ್ತೆಯಲ್ಲಿ ರೋಡ್ ಶೋ ನಡೆಸಿದರು. ನಂತರ ಕುಷ್ಟಗಿ ಪಟ್ಟಣಕ್ಕೆ ಪ್ರಯಾಣ ಬೆಳೆಸಿದರು. ಪಂಚರತ್ನ ರಥಯಾತ್ರೆಯಲ್ಲಿ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ತುಕಾರಂ ಸುರ್ವೆ , ಮುಖಂಡರಾದ ಶರಣಪ್ಪ ಕುಂಬಾರ, ಸುವರ್ಣಾ ಚಕ್ರಸಾಲಿ, ಪಕ್ಷದ ಹೋಬಳಿ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.