ADVERTISEMENT

ಪರಿಷ್ಕೃತ ಡಿಎ ವೇತನದೊಂದಿಗೆ ನೀಡಿ: ಜಿಲ್ಲಾಧಿಕಾರಿ ಎಂ.ಪಿ ಮಾರುತಿ

ಮೂಲ ಮಾಲೀಕರು, ಗುತ್ತಿಗೆದಾರರ ಜೊತೆ ಸಭೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 4:36 IST
Last Updated 21 ಜೂನ್ 2022, 4:36 IST
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಮಾತನಾಡಿದರು
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಮಾತನಾಡಿದರು   

ಕೊಪ್ಪಳ: ಎಲ್ಲಾ ಇಲಾಖೆಯ ಅಧಿಕಾರಿಗಳು ಕಚೇರಿಯ ಹೊರಗುತ್ತಿಗೆ ಸಿಬ್ಬಂದಿಗೆ ಕಾರ್ಮಿಕ ಕಾಯ್ದೆ ಪ್ರಕಾರ ಸರ್ಕಾರ ನಿಗದಿಪಡಿಸಿರುವ ಡಿಎ ಮೊತ್ತವನ್ನು ವೇತನದಲ್ಲಿ ಸೇರಿಸಿ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಅಧಿಕಾರಿಗಳಿಗ ಸೂಚಿಸಿದರು.

ಕಾರ್ಮಿಕ ಇಲಾಖೆ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ನೀಡುತ್ತಿರುವ ವೇತನ, ಇ.ಎಸ್.ಐ ಮತ್ತು ಪಿ.ಎಫ್‌ನ ಕುರಿತು ವರದಿ ಸಲ್ಲಿಸುವಂತೆ ಕಳೆದ ಸಭೆಯಲ್ಲಿ ತಿಳಿಸಲಾಗಿತ್ತು. ವರದಿ ನೀಡದೇ ಇರುವ ಇಲಾಖೆಗಳಿಗೆ ಕೂಡಲೇ ವರದಿ ನೀಡಲು ನೋಟಿಸ್ ನೀಡಬೇಕು. ಹೊರಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನ ಹಾಗೂ ಇ.ಎಸ್.ಐ, ಇ.ಪಿ.ಎಫ್ ಸರಿಯಾದ ಸಮಯದಲ್ಲಿ ಪಾವತಿಸಿದರೆ ಕಾರ್ಮಿಕರಿಗೆ ತುರ್ತು ಸಂಧರ್ಭದಲ್ಲಿ ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಏಜೆನ್ಸಿ ಮಾಲೀಕರಿಗೆ ಸೂಕ್ತ ತರಬೇತಿ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ರಾಜ್ಯ ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿ ಸಮಿತಿಯ ಸದಸ್ಯ ಪಂಪಾಪತಿ ರಾಟೆ ಮಾತನಾಡಿ, ‘ಇನ್ನುಮುಂದೆ ಟೆಂಡರ್ ಕರೆಯುವ ಮುನ್ನ ಷರತ್ತುಗಳನ್ನು ಕರಪತ್ರದ ಮೂಲಕ ವಿತರಿಸಿದಲ್ಲಿ ಟೆಂಡರ್ ನೀಡಿದಾಗ ಕಾರ್ಮಿಕರಗೆ ವೇತನ ಪಾವತಿಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಬಹುದು’ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ ಮಾತನಾಡಿ ‘ಕೆಲವು ಇಲಾಖೆಗಳ ಮುಖ್ಯಸ್ಥರು ಹೊರಗುತ್ತಿಗೆ ಸಿಬ್ಬಂದಿಗೆ ಕಾರ್ಮಿಕ ಕಾಯ್ದೆ ಅನ್ವಯ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಹಾಗೂ ಇತರ ಸೌಲಭ್ಯಗಳನ್ನು ಪಾವತಿಸಿಲ್ಲ. ಈ ಕುರಿತು ಆರೋಪಗಳು ಕೇಳಿಬಂದಿವೆ. ಸರ್ಕಾರದ ನಿಯಮದಂತೆಯೇ ನಡೆದುಕೊಳ್ಳಬೇಕು’ ಎಂದರು.

ಡಿ.ಎಫ್.ಒ ಹರ್ಷಕುಮಾರ, ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ, ಜಿಲ್ಲಾ ಸಾಂಖಿಕ ಅಧಿಕಾರಿ ಕೃಷ್ಣಮೂರ್ತಿ, ಕೊಪ್ಪಳ ತಹಶೀಲ್ದಾರ್ ವಿಠಲ್ ಚೌಗಲಾ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.