ADVERTISEMENT

ಕನಕಗಿರಿ | ದೊರೆಯದ ಪಿಂಚಣಿ: ಪರದಾಟ

ಪ್ರಕರಣ ನಡೆದು ಐದು ವರ್ಷ ಗತಿಸಿದರೂ ಇಲಾಖೆ ಅಧಿಕಾರಿಗಳ ಮೌನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 5:59 IST
Last Updated 5 ಸೆಪ್ಟೆಂಬರ್ 2024, 5:59 IST
   

ಕನಕಗಿರಿ: ಕುಟುಂಬಕ್ಕೆ ಆಧಾರ ಆಗಿದ್ದವರನ್ನು ಕಳೆದುಕೊಂಡ ಸಂಕಟ ಒಂದೆಡೆಯಾದರೆ, ಉಪ‌ಜೀವನಕ್ಕಾಗಿ ಪರದಾಡುವಂತಾಗಿದೆ.

ಸಮೀಪದ‌ ವಡಕಿ ಮತ್ತು ಹುಲಿಹೈದರ ಗ್ರಾಮದ ಹನುಮಂತೆಮ್ಮ ಹಾಗೂ ದ್ಯಾಮಮ್ಮ‌ ತಳವಾರ ಅವರು ಗೋಳು ತೋಡಿಕೊಂಡರು.

2022‌ ಆಗಸ್ಟ್ 11ರಂದು ಹುಲಿಹೈದರ ಗ್ರಾಮದಲ್ಲಿ ನಡೆದ ಗಲಭೆಯಲ್ಲಿ ಯಂಕಪ್ಪ ತಳವಾರ ಅವರು ಮೃತಪಟ್ಟಿದ್ದಾರೆ.

ADVERTISEMENT

ದೌರ್ಜನ್ಯ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯ ಅವಲಂಬಿತರಿಗೆ ಪಿಂಚಣಿ ಸೌಲಭ್ಯ‌ ನೀಡಬೇಕೆಂಬ ನಿಯಮವಿದ್ದರೂ ಪರಿಶಿಷ್ಟ ಪಂಗಡದ‌ ಕಲ್ಯಾಣ ಇಲಾಖೆ ಅಧಿಕಾರಿಗಳು ಈವರೆಗೆ ಮೌನ ವಹಿಸಿದ ಪರಿಣಾಮ‌ ಎರಡು ಕುಟುಂಬದವರು ಪಿಂಚಣಿಗಾಗಿ ಪರದಾಡುವಂತಾಗಿದೆ.

‘ಬೆಲೆ ಏರಿಕೆಯಿಂದಾಗಿ ಜೀವನ ನಡೆಸುವುದು ಕಷ್ಟದಾಯಕವಾಗಿದೆ. ಶಾಮಣ್ಣ‌ ತಳವಾರ ಹಾಗೂ ದ್ಯಾಮಮ್ಮ ಸೇರಿದಂತೆ ಅನೇಕರು ಮೃತ ಯಂಕಪ್ಪ ತಳವಾರ ಅವರನ್ನು ಆಶ್ರಯಿಸಿದ್ದರು. ಯಂಕಪ್ಪನ ತಂದೆ ಶಾಮಣ್ಣ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಶಾಮಣ್ಣನ‌ ಪತ್ನಿ ದ್ಯಾಮಮ್ಮ‌ ಅವರಿಗೆ ಪಿಂಚಣಿ ಸೌಲಭ್ಯ‌ ನೀಡುವಂತೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದರೂ ಉಪಯೋಗವಾಗಿಲ್ಲ. ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಲ್ಲಿಸಿದ ಪ್ರಸ್ತಾವಕ್ಕೆ ಮೇಲಧಿಕಾರಿಗಳು ಸ್ಪಂದಿಸಿಲ್ಲ ಎಂಬ ಮಾಹಿತಿ ಬಂದಿದೆ.

ಪರಿಶಿಷ್ಟ ಪಂಗಡದ ಕಲ್ಯಾಣ ಅಧಿಕಾರಿಗಳು ಮೃತರ ಮನೆಗೆ ತೆರಳಿ ಜಾತಿ ಮತ್ತು ಆದಾಯ, ಆಧಾರ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಪಡೆದುಕೊಂಡು‌ ಸಮಾಜ ಕಲ್ಯಾಣ‌ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಪಿಂಚಣಿ ಮಂಜೂರಿ ಪ್ರಾಧಿಕಾರ ಹೊಂದಿರುವ ಅಧಿಕಾರಿಗಳು ಕೈ ಚೆಲ್ಲಿ ಕುಳಿತಿದ್ದಾರೆ ಎಂದು ಜಿ.ಪಂ ಮಾಜಿ ಅಧ್ಯಕ್ಷೆ ಸುಜಾತಾ ಹನುಮೇಶ‌ ನಾಯಕ ದೂರಿದ್ದಾರೆ.

ಮೃತನ‌ ಅವಲಂಬಿತರಿಗೆ ಮಾಸಿಕ ₹ 5 ಸಾವಿರ ಪಿಂಚಣಿ‌ ನೀಡಬೇಕೆಂಬ‌ ನಿಯಮವಿದೆ. ಆದರೆ‌ ಇಲ್ಲಿ ಅನುಷ್ಠಾನಗೊಂಡಿಲ್ಲ. ಪರಿಶಿಷ್ಟ ಜಾತಿಯ ಮೀಸಲು‌ ಕ್ಷೇತ್ರದಲ್ಲಿಯೇ ದಯನೀಯ ಸ್ಥಿತಿ ಇರುವುದು ನೋವು ತಂದಿದೆ ಎಂದು ನಾಯಕ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಸಾಲ ನೀಡಿದ ಹಣ ಕೊಡುವಂತೆ‌ ಕೇಳಿದ್ದಕ್ಕೆ ಸಮೀಪದ‌ ವಡಕಿ ಗ್ರಾಮದ ರಾಮಣ್ಣ ಖ್ಯಾಡೆದ ಅವರನ್ನು ಸಾಲ ಪಡೆದವರು 2019ರಲ್ಲಿ ಕೊಲೆ ಮಾಡಿದ್ದು, ಆತನ‌ ಪತ್ನಿಗೂ ಸಹ ಪಿಂಚಣಿ ಸೌಲಭ್ಯ ಸಿಕ್ಕಿಲ್ಲ. ಕೊಲೆಯಾಗಿ 5 ವರ್ಷ ಗತಿಸಿದರೂ ಮಾಸಿಕ ಪಿಂಚಣಿ ಸೌಲಭ್ಯವನ್ನು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ನೀಡಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.

ಮೃತನಿಗೆ ಇಬ್ಬರು ಪತ್ನಿಯರಿದ್ದರೂ ಮೊದಲ ಪತ್ನಿ ಹನುಮಂತೆಮ್ಮ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. 2ನೇ ಪತ್ನಿ ದ್ಯಾಮವ್ವ ಅವರಿಗೆ ಪಿಂಚಣಿ ಸೌಲಭ್ಯ ಸಿಗಬೇಕಾಗಿತ್ತು. ಐದು ವರ್ಷ ಕಳೆದರೂ ಇಲಾಖೆ ಕ್ರಮಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ, ಪಂಗಡದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಪರಿಶಿಷ್ಟ ಜಾತಿ, ಪಂಗಡದ ಸಮುದಾಯದವರ ಆಹವಾಲುಗಳನ್ನು ಮಾತ್ರ ಆಲಿಸುತ್ತಾರೆ. ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿಲ್ಲ‌. ಕನಿಷ್ಠ ಸೌಲಭ್ಯ ಒದಗಿಸುವಲ್ಲಿ‌ ವಿಫಲರಾಗಿದ್ದಾರೆ’ ಎಂದು ದೂರಿದರು.

ಕೊಲೆಯಾದಾಗ ಮಾತ್ರ ಅನುಕಂಪ: ಪರಿಶಿಷ್ಟ ಜಾತಿ ಹಾಗೂ‌ ಪಂಗಡಕ್ಕೆ ಸೇರಿದವರು ದೌರ್ಜನ್ಯಕ್ಕೆ ಒಳಗಾಗಿ‌ ಕೊಲೆಯಾದ ಸಮಯದಲ್ಲಿ ಅಧಿಕಾರಿಗಳ ಅನುಕಂಪ ತೋರಿಕೆಗೆ ಮಾತ್ರ ಎಂಬುದು‌ ಈ ಪ್ರಕರಣದಲ್ಲಿ ಗೊತ್ತಾಗುತ್ತದೆ. ಕೊಲೆಯಾದಾಗ ಕುಟುಂಬಕ್ಕೆ ಅಕ್ಕಿ, ಬೇಳೆ, ಇತರೆ ದಿನಸಿ ಪದಾರ್ಥಗಳನ್ನು ಕೊಟ್ಟು ಕಣ್ಣೊರೆಸುವ ಕೆಲಸಗಳನ್ನು ಮಾಡುತ್ತಾರೆ‌. ಪರಿಹಾರ ಹಣ‌ ಹಾಗೂ ಪಿಂಚಣಿ ಸೌಲಭ್ಯಕ್ಕೆ ವರ್ಷಗಟ್ಟಲೆ‌ ಕಾಯುವಂತ ಸ್ಥಿತಿಯಿದೆ ಎಂದು ಸುಜಾತಾ ತಿಳಿಸಿದರು.

ಹುಲಿಹೈದರ ಗ್ರಾಮದ ದ್ಯಾಮಮ್ಮ ಅವರಿಗೆ ಪಿಂಚಣಿ ನೀಡುವ ಪ್ರಸ್ತಾವವನ್ನು ಇಲಾಖೆ ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ. ವಡಕಿಯ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಸೌಲಭ್ಯ ಕಲ್ಪಿಸಲಾಗುವುದು..
ಗ್ಯಾನನಗೌಡ, ಸಹಾಯಕ ನಿರ್ದೇಶಕ, ಪ.ಪಂ, ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.