ಕೊಪ್ಪಳ: ಆತ ಯುಕೆಜಿ ಓದುತ್ತಿದ್ದ ಬಾಲಕ, ಶಾಲಾ ಸಮವಸ್ತ್ರ ಧರಿಸಿ ಶಿಸ್ತಿನಿಂದ ಶಾಲೆಗೆ ಹೋಗುತ್ತಿದ್ದಾಗ ದಿಢೀರನೆ ನಾಲ್ಕೈದು ಬೀದಿ ನಾಯಿಗಳು ದಾಳಿ ನಡೆಸಿದವು. ಧರಿಸಿದ್ದ ಬಟ್ಟೆ ರಕ್ತಸಿಕ್ತವಾಗಿದ್ದು, ದೇಹದ ಕಿವಿಯ ಹಿಂಭಾಗ, ಕುತ್ತಿಗೆ ಮೇಲೆ ನಾಯಿ ಗಾಯಗೊಳಿಸಿದ್ದವು.
ಇಲ್ಲಿನ ಕನಕಗಿರಿ ಓಣಿಯಲ್ಲಿ ಇತ್ತೀಚೆಗೆ ನಡೆದ ಈ ಘಟನೆಯಲ್ಲಿ ಫರ್ಹಾನ್ ಎನ್ನುವ ಬಾಲಕ ನಾಯಿ ದಾಳಿಯಲ್ಲಿ ಗಾಯಗೊಂಡಿದ್ದ. ಈ ಘಟನೆ ನಡೆಯುವ ಹಿಂದಿನ ದಿನ 14 ವರ್ಷದ ಅಬ್ರಾರ್ ಎಂಬಾತನ ಮೇಲೂ ನಾಯಿ ದಾಳಿ ನಡೆಸಿವೆ. ದಿನ್ನಿ ಓಣಿ ಹತ್ತಿರ ಮಂಜು ಎಂಬ 35 ವರ್ಷದ ಯುವಕನನ್ನೂ ನಾಯಿ ಬಿಟ್ಟಿಲ್ಲ. ಹೀಗೆ ಮೇಲಿಂದ ಮೇಲೆ ನಗರದಲ್ಲಿ ಶ್ವಾನ ದಾಳಿ ನಡೆಸುತ್ತಿರುವ ಪ್ರಕರಣಗಳು ನಡೆಯುತ್ತಲೇ ಇದ್ದರೂ ಸ್ಥಳೀಯ ಆಡಳಿತ ಮಾತ್ರ ಎಚ್ಚೆತ್ತುಕೊಂಡಿಲ್ಲ.
ಜಿಲ್ಲಾ ಕೇಂದ್ರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಒಂದೇ ಕಡೆ ಎಂಟ್ಹತ್ತು ನಾಯಿಗಳು ವ್ಯಕ್ತಿ ಮೇಲೆ ದಾಳಿ ನಡೆಸುತ್ತಿವೆ. ರಾತ್ರಿ 10 ಗಂಟೆಯಾದ ಬಳಿಕ ಓಣಿಗಳಲ್ಲಿ ಓಡಾಡಿದರೆ ದಾಳಿ ನಡೆಸಿ ಬೆದರಿಸುತ್ತವೆ. ಶ್ವಾನಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿಲ್ಲ. ದಾಳಿಗಳ ನಿಯಂತ್ರಣಕ್ಕೂ ಸೂಕ್ತ ಕ್ರಮವಾಗುತ್ತಿಲ್ಲ ಎನ್ನುವುದು ಜನರ ಆರೋಪ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ 20ನೇ ಜಾನುವಾರು ಗಣತಿಯ ಪ್ರಕಾರ ಜಿಲ್ಲೆಯಲ್ಲಿ 22 ಸಾವಿರಕ್ಕೂ ಹೆಚ್ಚು ಶ್ವಾನಗಳಿವೆ.
ಕುಷ್ಟಗಿಯಲ್ಲಿ ಬೆಚ್ಚಿದ ಜನ: ಕುಷ್ಟಗಿ ಪಟ್ಟಣದಲ್ಲಿ ಕೆಲ ತಿಂಗಳ ಹಿಂದೆ ಮಗು ಸೇರಿದಂತೆ ಅನೇಕ ಜನರನ್ನು ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ನಾಲ್ಕೈದು ವರ್ಷದ ಬಾಲಕನೊಬ್ಬನ ಮಾಂಸಖಂಡಗಳು ಕಿತ್ತು ಬಂದಿದ್ದವು. ಬೀದಿ ನಾಯಿ ಕಡಿತಕ್ಕೆ ಒಳಗಾದ ಗಜೇಂದ್ರಗಡ ರಸ್ತೆಯಲ್ಲಿನ ಹೊಲಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಕಾಲಿನ ಹಿಮ್ಮಡಿಯೇ ಕಿತ್ತು ಬಂದು ಆತನ ಉದ್ಯೋಗಕ್ಕೆ ಕತ್ತರಿ ಬಿದ್ದಿತ್ತು. ಅಷ್ಟೇ ಅಲ್ಲ ತಿಂಗಳುಗಟ್ಟಲೇ ಗಾಲಿ ಕುಚ್ಚಿಯಲ್ಲಿಯೇ ಆಸ್ಪತ್ರೆಗೆ ಬಂದು ಹೋಗುವಂತಾಗಿತ್ತು. ಪ್ರವಾಸಿ ಮಂದಿರದ ಮುಂದೆ ನಾಯಿಗಳ ಹಿಂಡು ಇಬ್ಬರು ಮಹಿಳೆಯರನ್ನು ಬೆನ್ನಟ್ಟಿ ಹಣ್ಣುಗಾಯಿ ಮಾಡಿದ್ದನ್ನು ಜನ ಮರೆತಿಲ್ಲ.
ಪಟ್ಟಣದಲ್ಲಿ ಮಿತಿಮೀರಿರುವ ಬೀದಿನಾಯಿಗಳ ಉಪಟಳವನ್ನು ಸಾರ್ವಜನಿಕರು ನೆನಪಿಸಿಕೊಂಡಿದ್ದು ಹೀಗೆ. ಪ್ರವಾಸಿ ಮಂದಿರ, ಸಂತೆ ಮೈದಾನಕ್ಕೆ ಬರಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಳ್ಳುವಂತಾಗುತ್ತದೆ. ಹಗಲು ರಾತ್ರಿ ಭೇದವಿಲ್ಲದೆ ನಾಯಿಗಳ ಗುಂಪು ಅಲ್ಲಿ ನೆರೆದಿರುತ್ತದೆ. ಮುಖ್ಯರಸ್ತೆಯಲ್ಲಿ ಠಿಕಾಣಿ ಹೂಡಿರುವ ಕೋಳಿ, ಮಟನ್ ಮಾಂಸದ ಅಂಗಡಿಗಳು ಇರುವುದರಿಂದ ತ್ಯಾಜ್ಯಕ್ಕೆ ಬೀದಿ ನಾಯಿಗಳ ಹಿಂಡೇ ನೆರೆದಿರುತ್ತದೆ. ಮಕ್ಕಳು, ಮಹಿಳೆಯರಷ್ಟೇ ಅಲ್ಲ ಹಿರಿಯರನ್ನೂ ಕಚ್ಚಿ ಗಾಯಗೊಳಿಸುವುದು ಇಲ್ಲಿ ಸಾಮಾನ್ಯ. ಪುರಸಭೆ ಮುಂದೆಯೇ ಈ ಸಮಸ್ಯೆ ಇದ್ದರೂ ಅಧಿಕಾರಿಗಳಿಗೆ ಅದರ ಬಗ್ಗೆ ಚಿಂತೆ ಇಲ್ಲ. ಮಾಂಸದ ಅಂಗಡಿಗಳನ್ನು ಊರ ಹೊರಗೆ ಸಾಗಿಸಿದರೆ ಜನ ಕ್ಷೇಮದಿಂದ ಇರಲು ಸಾಧ್ಯ ಎನ್ನುತ್ತಾರೆ ಪಟ್ಟಣದ ನಾಗರಿಕರು.
ಕಾರಟಗಿಯಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಬಹುತೇಕ ಕಡೆ ನಾಯಿಗಳಿರುವುದು ಜನರಲ್ಲಿ ಭಯ, ಭೀತಿ ಸೃಷ್ಟಿಯಾಗಿದೆ. ಕೆಲವೆಡೆ ಬೀದಿ ನಾಯಿಗಳು ತಮಗೆ ಉಪಟಳ ನೀಡಿದವನ್ನು ಗುರುತಿಸಿ ಬೆನ್ನತ್ತಿ ಓಡಿಸಿದ ಉದಾಹರಣೆ ಇದೆ. ಆದರೆ ಹೊಸಬರು ಬಂದಾಗ ಬೊಗಳುವುದು, ಸುಮ್ಮನಾಗುವುದು ಸಹಜವಾಗಿದೆ. ಆದರೆ ಗಂಭೀರ ಗಾಯಗಳಾಗುವಂತೆ ಕಡಿದಿಲ್ಲ. ನಮ್ಮ ಭಾಗದಲ್ಲಿ ಬೀದಿ ನಾಯಿಗಳು ಉಪಟಳ ನೀಡಿಲ್ಲ, ಉಪಟಳ ನೀಡಿದವರ ಬಗ್ಗೆ ಸಹಿಸುವುದಿಲ್ಲ ಎಂಬ ಅಭಿಪ್ರಾಯ ದಲಾಲಿ ಬಜಾರ್‌ನ ಕೆಲವರಿಂದ ಕೇಳಿಬಂತು.
ಸಂತೆ ಮಾರುಕಟ್ಟೆ, ದಲಾಲಿ ಬಜಾರ್, ಕನಕದಾಸ ವೃತ್ತ, ಹಳೆಯ ಬಸ್ ನಿಲ್ದಾಣ, ಎಪಿಎಂಸಿ ಮೊದಲಾದ ಜನನಿಬಿಡ ಪ್ರದೇಶಗಳಲ್ಲಿ ನಾಯಿಗಳ ಹಿಂಡು ಇರುತ್ತದೆ. ನಸುಕಿನ ಜಾವ ವಾಯುವಿಹಾರಕ್ಕೆ ಹೋಗುವವರಿಗೆ ನಾಯಿಗಳ ಬಗ್ಗೆ ಆತಂಕ, ಭಯ ಸಹಜವಾಗಿದೆ. ಮೂಕ ಪ್ರಾಣಿಗಳು. ಯಾವಾಗ ಹೇಗೆ ವರ್ತಿಸುತ್ತವೋ ಹೇಳಲಾಗದು. ಇವುಗಳ ಹಾವಳಿ ತಗ್ಗಿಸಲು ಸ್ಥಳೀಯಾಡಳಿತ ಮುಂದಾಗಲಿ ಎಂಬುದು ಜನರ ಅಭಿಪ್ರಾಯ.
ಪೂರಕ ಮಾಹಿತಿ: ನಾರಾಯಣರಾವ್ ಕುಲಕರ್ಣಿ, ಕೆ. ಮಲ್ಲಿಕಾರ್ಜುನ, ಮೆಹಬೂಬ ಹುಸೇನ.
ಬೀದಿನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸಲು ಟೆಂಡರ್ ಕರೆಯಲಾಗಿದ್ದು ಈಗ ಆ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನು ಮುಂದೆ ನಾಯಿಗಳಿಗೆ ಕಡಿವಾಣ ಹಾಕಲಾಗುವುದುಗಣಪತಿ ಪಾಟೀಲ ಕೊಪ್ಪಳ ನಗರಸಭೆ ಪೌರಾಯುಕ್ತ
ಕೊಪ್ಪಳದಲ್ಲಿ ನಾಯಿಗಳ ಹಾವಳಿ ವ್ಯಾಪಕವಾಗಿದ್ದು ಸಣ್ಣ ಸಣ್ಣ ಮಕ್ಕಳು ಸ್ವತಂತ್ರವಾಗಿ ಬಡಾವಣೆಗಳಲ್ಲಿ ಓಡಾಡುವುದೇ ಕಷ್ಟವಾಗಿದೆ. ಇವುಗಳ ಉಪಟಳಕ್ಕೆ ಕಡಿವಾಣ ಹಾಕಬೇಕುನಾಗರಾಜ ನಾಯಕ ಕೊಪ್ಪಳ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.