ಮುನಿರಾಬಾದ್: ರಾಜ್ಯ ಸರ್ಕಾರದ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿ ಬೆನ್ನಲ್ಲೆ ಆಧಾರ್ ತಿದ್ದುಪಡಿಗೆ ಜನರು ಮುಗಿಬಿದ್ದಿದ್ದಾರೆ.
ಇಲ್ಲಿಗೆ ಸಮೀಪದ ಹಿಟ್ನಾಳ ನಾಡಕಚೇರಿ ಮುಂದೆ ನಿತ್ಯವೂ ಸಾರ್ವಜನಿಕರು ಆಧಾರ್ ತಿದ್ದುಪಡಿಗೆ ಸಾಲುಗಟ್ಟುತ್ತಿದ್ದಾರೆ.
ಸಾಲುಗಟ್ಟಿ ನಿಂತಿರುವ ಹೋಬಳಿ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರು ಆಧಾರ್ ತಿದ್ದುಪಡಿಗೆ ಪ್ರತಿದಿನ ಹೆಣಗಾಡುತ್ತಿದ್ದಾರೆ.
ಸರ್ಕಾರದ ವಿವಿಧ ಯೋಜನೆಗಳಿಗೆ ನೋಂದಾಯಿಸಿಕೊಳ್ಳಲು ಆಧಾರ್ ಕಡ್ಡಾಯವಾಗಿದೆ. ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್‌ಗೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಬರುತ್ತದೆ. ಈ ಪ್ರಕ್ರಿಯೆಗೆ ಫಲಾನುಭವಿಯ ಆಧಾರ್ ಸಂಖ್ಯೆಗೆ ನಿರ್ದಿಷ್ಟ ಮೊಬೈಲ್ ಸಂಖ್ಯೆ ಇರಲೇಬೇಕು. ಈ ಮುಂಚೆ ಆಧಾರ್ ನೋಂದಣಿ ಸಮಯದಲ್ಲಿ ನೀಡಲಾದ ಮೊಬೈಲ್ ಸಂಖ್ಯೆ ಬದಲಾವಣೆ ಆಗಿರುತ್ತದೆ. ಇಲ್ಲವೇ ಮೊಬೈಲ್ ಸಂಖ್ಯೆ ಜೋಡಣೆ ಆಗಿರುವುದಿಲ್ಲ. ಹೀಗಾಗಿ ಆಧಾರ್ ತಿದ್ದುಪಡಿಗೆ ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ.
‘ಒಬ್ಬೊಬ್ಬರ ಕೆಲಸಕ್ಕೂ ಸಾಕಷ್ಟು ಸಮಯ ಹಿಡಿಯುತ್ತಿದೆ. ಜನರ ಸಮಸ್ಯೆ ತ್ವರಿತವಾಗಿ ಸ್ಪಂದಿಸಲು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂಬ ಆರೋಪಗಳು ಕೇಳಿಬಂದಿವೆ.
ಏಕೈಕ ಕೇಂದ್ರ
ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ನಾಡಕಚೇರಿಯ ಉಪತಹಶೀಲ್ದಾರ್ ರೇಖಾ ದೀಕ್ಷಿತ್, ‘ಹೋಬಳಿಯಲ್ಲಿರುವ ಆಧಾರ್ ತಿದ್ದುಪಡಿಯ ಇದು ಏಕೈಕ ಕೇಂದ್ರ ಇದಾಗಿದೆ. ಸರ್ಕಾರದ ಯೋಜನೆಗೆ ಆಧಾರ್ ಜೋಡಣೆ ಕಡ್ಡಾಯ ಇರುವುದರಿಂದ ಸಣ್ಣ ಪುಟ್ಟ ಬದಲಾವಣೆಗೆ ಸಾರ್ವಜನಿಕರು ಏಕಕಾಲಕ್ಕೆ ಬರುತ್ತಿದ್ದಾರೆ. ಕಳೆದೊಂದು ವಾರದಿಂದ ಸಮಸ್ಯೆ ಆಗಿದೆ. ಕೇವಲ ಹತ್ತತ್ತು ಜನರಂತೆ ತಂಡ ಮಾಡಿ ಒಳಗೆ ಕರೆದು ಕೆಲಸ ಮಾಡಿಕೊಡುತ್ತಿದ್ದೇವೆ. ನಮ್ಮ ಸಿಬ್ಬಂದಿ ದಿನವೂ ಬಿಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಕೇವಲ ಒಬ್ಬ ಆಪರೇಟರ್ ಇದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡುತಿದ್ದೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.