ADVERTISEMENT

ಕೊಪ್ಪಳ: ದೇವಮ್ಮನ ಬದುಕಿಗೆ ಆಸರೆಯಾಗುವುದೇ ಜಿಲ್ಲಾಡಳಿತ?

ಗಣೇಶ ನಗರದಲ್ಲಿ ಮನೆಗೆ ಹೊಕ್ಕ ಹಾವುಗಳು; ಮಳೆ ಅವಾಂತರದ ಬಳಿಕ ಎಚ್ಚೆತ್ತುಕೊಂಡ ಸ್ಥಳೀಯ ಆಡಳಿತ

ಪ್ರಮೋದ
Published 14 ಜೂನ್ 2024, 7:18 IST
Last Updated 14 ಜೂನ್ 2024, 7:18 IST
ಕೊಪ್ಪಳದ ಗಣೇಶ ನಗರದಲ್ಲಿ ಅಳಿದುಳಿದ ವಸ್ತುಗಳಿಗಾಗಿ ದೇವಮ್ಮ ಹಾಗೂ ಮೊಮ್ಮಗ ಗವಿಸಿದ್ದಪ್ಪನ ಹುಡುಕಾಟದ ಚಿತ್ರಣ –ಪ್ರಜಾವಾಣಿ ಚಿತ್ರ 
ಕೊಪ್ಪಳದ ಗಣೇಶ ನಗರದಲ್ಲಿ ಅಳಿದುಳಿದ ವಸ್ತುಗಳಿಗಾಗಿ ದೇವಮ್ಮ ಹಾಗೂ ಮೊಮ್ಮಗ ಗವಿಸಿದ್ದಪ್ಪನ ಹುಡುಕಾಟದ ಚಿತ್ರಣ –ಪ್ರಜಾವಾಣಿ ಚಿತ್ರ    

ಕೊಪ್ಪಳ: ಕಾಲಿಡಲೂ ಸಾಧ್ಯವಾಗದಷ್ಟು ಮಳೆ ನೀರು, ಮೊಣಕಾಲು ಆಳದಷ್ಟು ನಿಂತುಕೊಂಡಿದ್ದ ಆ ನೀರಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದಿನಬಳಕೆ ವಸ್ತುಗಳು, ಬಟ್ಟೆಗಳು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪುಸ್ತಕಗಳು ಹಾಗೂ ಮಳೆನೀರಿನ ಜೊತೆಗೆ ಮನೆ ಸೇರಿಕೊಂಡಿದ್ದ ಹಾವುಗಳು!

ಇದು ಇಲ್ಲಿನ ಗಣೇಶ ನಗರದಲ್ಲಿರುವ ದೇವಮ್ಮ ರಾಮಣ್ಣ ಕಿನ್ನಾಳ ಅವರ ಕಿರಿದಾದ ಮನೆಯಲ್ಲಿ ಕಂಡು ಬಂದ ಚಿತ್ರಣ. ಬುಧವಾರ ನಗರದಲ್ಲಿ ಎಂಟು ಸೆಂಟಿ ಮೀಟರ್‌ನಷ್ಟು ರಭಸದ ಮಳೆ ಸುರಿದು ಅರ್ಧ ದಿನ ಕಳೆದಿದ್ದರೂ ಅವರ ಮನೆಯಲ್ಲಿನ ನೀರು ಮಾತ್ರ ಮನೆಯಿಂದ ಹೊರಗೆ ಹೋಗಿರಲಿಲ್ಲ. ಮನೆಯ ಮುಂದಿರುವ ಚರಂಡಿಯ ನೀರು ವೇಗವಾಗಿ ಮನೆ ಹೊಕ್ಕುತ್ತಲೇ ಇತ್ತು. ಹಾವು, ಚೇಳಿನ ಭೀತಿಯ ನಡುವೆಯೇ ದೇವಮ್ಮ ಮನೆಯೊಳಗೆ ಹೋಗಿ ಅಳಿದುಳಿದ ವಸ್ತುಗಳಿಗಾಗಿ ತಡಕಾಡುತ್ತಿದ್ದರು.

ಮಾನವೀಯತೆ ಮರೆದ ಅಕ್ಕಪಕ್ಕದ ನಿವಾಸಿಗಳು ದೇವಮ್ಮ ಪ್ರಾಣಕ್ಕೆ ತೊಂದರೆಯಾಗದಿರಲೆಂದು ಕಾದಿದ್ದಾರೆ. ಬುಧವಾರ ರಾತ್ರಿ ಊಟ ಕೊಟ್ಟು, ಆಸರೆ ನೀಡಿದ್ದಾರೆ. ದೇವಮ್ಮಳ ಪುಟ್ಟದಾದ ಮನೆಯಲ್ಲಿ ಮೂವರು ಮೊಮ್ಮಕ್ಕಳು ಹಾಗೂ ಸೊಸೆ ಇರುತ್ತಾರೆ. ಇವರ ಕುಟುಂಬಕ್ಕೆ ಆಸರೆಯಾಗಿರುವ ಮಗ ಕಟ್ಟಡ ಕಾರ್ಮಿಕನಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಹೊಕ್ಕಿರುವ ನೀರು ಹೊರ ತೆಗೆಯಲು ಜನರಿಲ್ಲ, ಬಹುತೇಕ ಎಲ್ಲ ಸಾಮಗ್ರಿಗಳು ನೀರು ಪಾಲಾಗಿದ್ದು ಮುಂದಿನ ಬದುಕಿಗಾಗಿ ಏನಾದರೂ ಸಿಗುತ್ತದೆಯೇ ಎಂದು ಆಸೆಗಣ್ಣಿನಿಂದ ಕಣ್ಣೀರು ಹಾಕುತ್ತ ನೋಡುತ್ತಿದ್ದ ಚಿತ್ರಣ ಕಂಡುಬಂದಿತು.

ADVERTISEMENT

‘ಮನೆಯ ಬಾಗಿಲು ಬಳಿ ಇಟ್ಟಿದ್ದ ಟೇಬಲ್‌ ಫ್ಯಾನ್‌ ಹಾಲ್‌ನಲ್ಲಿ ಹೋಗಿ ಬಿದ್ದಿದೆ. ವಿದ್ಯುತ್‌ ಸಂಪರ್ಕ ಬಂದ್ ಮಾಡಲು ಹೋಗಿದ್ದಕ್ಕೆ ಶಾಕ್‌ ಹೊಡೆದಿದೆ. ಮನೆಯ ಮುಂದೆಯೇ ಇದ್ದ ಚರಂಡಿಯಿಂದ ಇಷ್ಟೆಲ್ಲ ಆವಾಂತರವಾಗಿದೆ. ಸಮಸ್ಯೆ ಪರಿಹರಿಸುವಂತೆ ಪರಿಪರಿಯಾಗಿ ಬೇಡಿಕೊಂಡರೂ ಯಾರೂ ಸ್ಪಂದಿಸಿಲ್ಲ. ಅಷ್ಟಿಷ್ಟು ಹಣ ಕೂಡಿಸಿ ಹೊಸ್ತಿಲು ಎತ್ತರಿಸಿಕೊಳ್ಳಲು ತಂದಿಟ್ಟಿದ್ದ ಸಿಮೆಂಟ್‌ ಕೂಡ ನೀರು ಪಾಲಾಗಿವೆ’ ಎನ್ನುತ್ತಿದ್ದಾಗ ದೇವಮ್ಮ ಅವರಿಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ.

ಇದೊಂದು ಉದಾಹರಣೆಯಷ್ಟೇ. ಇಂಥ ಸರಣಿ ಸಮಸ್ಯೆಗಳನ್ನು ಹೊದ್ದು, ಹೊತ್ತುಕೊಂಡು ಎರಡು ದಶಕಗಳಿಂದ ಗಣೇಶ ನಗರದಲ್ಲಿ ಬದುಕಿನ ಬಂಡಿ ಸಾಗಿಸುತ್ತಿರುವ ನೂರಾರು ಕುಟುಂಬಗಳಿವೆ. ಸಣ್ಣ ಮಳೆಯಾದರೆ ಸಾಕು ಎದೆಯಲ್ಲಿ ಢವ ಢವ. ಯಾವ ದಿಕ್ಕಿನಿಂದ ನೀರು ಬಡಾವಣೆಯೊಳಗೆ ನುಗ್ಗಿ ಬದುಕು ಸಂಕಷ್ಟಕ್ಕೆ ದೂಡುತ್ತದೆಯೊ? ಎನ್ನುವ ಅವ್ಯಕ್ತ ಭಯ ಅಲ್ಲಿನ ಜನರಲ್ಲಿ ಮನೆಮಾಡಿದೆ.

ಬುಧವಾರ ಸುರಿದ ಮಳೆಯಿಂದ ಆ ಬಡಾವಣೆಯ ಬಹುತೇಕ ಮನೆಗಳಲ್ಲಿ ನೀರು ಹೊಕ್ಕಿದೆ. ಚರಂಡಿ ನೀರು ರಸ್ತೆಯ ಮೇಲೆ ಓಡಾಡಿ ಹಾವುಗಳು ಓಡಾಡಿವೆ. ಪಾತ್ರೆ ಸಾಮಗ್ರಿ ಮನೆಯ ಮುಂದಿನ ಕಿರಿದಾದ ಚರಂಡಿ ಸೇರಿವೆ. ಕುಡಿಯುವ ನೀರಿಗಾಗಿ ನಿರ್ಮಿಸಿಕೊಂಡಿದ್ದ ಟ್ಯಾಂಕ್‌ಗಳಲ್ಲಿ ಚರಂಡಿ ನೀರು ತುಂಬಿಕೊಂಡಿವೆ. ಅದೊಂದು ರೀತಿಯಲ್ಲಿ ಜನರ ಬದುಕು ಯಾತನಾಮಯವಾಗಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಾಜಕಾಲುವೆ ನೀರು ಓಣಿಯೊಳಗೆ ಹೊಕ್ಕು ಸೃಷ್ಟಿಸುವ ಆವಾಂತರದ ಬಗ್ಗೆ ಗಂಭೀರವಾಗಿ ಕ್ರಮ ವಹಿಸಿಲ್ಲ ಎನ್ನುವ ಬೇಸರ ಅಲ್ಲಿನ ಜನರದ್ದು.

‘ರಾಜಕಾಲುವೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲ. ಮಳೆಬಂದರೆ ನೀರು ಹರಿಯುವ ಪಕ್ಕದ ನಾಲ್ಕು ಮನೆಗಳಿಗೆ ಮೊದಲು ಹಾನಿಯಾಗುತ್ತದೆ. 20 ವರ್ಷಗಳಿಂದ ಈ ಸಮಸ್ಯೆ ನಮಗೆ ಸಾಮಾನ್ಯವಾಗಿದೆ. ಚುನಾವಣೆ ಬಂದಾಗ ಮತ ಕೇಳಲು ಬರುವ ಜನಪ್ರತಿನಿಧಗಳು ಸಮಸ್ಯೆ ಪರಿಹಾರಕ್ಕೆ ಮಾತ್ರ ಕ್ರಮ ವಹಿಸಿಲ್ಲ’ ಎಂದು ಶೋಭಾ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.

ಅದೇ ಬಡಾವಣೆಯಲ್ಲಿರುವ ಭಾರತಿ ಜೋಶಿ ‘ನಮ್ಮ ಮನೆಯ ನಾಲ್ಕೂ ದಿಕ್ಕಿಗೂ ಚರಂಡಿ ನೀರು ನಿಂತಿದ್ದರಿಂದ ನಡುಗಡ್ಡೆಯಲ್ಲಿ ವಾಸವಾದಂತೆ ಆಗಿತ್ತು. ನಮ್ಮ ನೋವಿನ ಕೂಗು ಜನರಿಗೆ ಕೇಳಿಸುತ್ತಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

ವಾಡಿಕೆಗಿಂತಲೂ ಉತ್ತಮ ಮಳೆಯಾಗಿದೆ. ಇದರಿಂದಾಗಿ ಬಿತ್ತನೆಗೆ ಅನುಕೂಲವಾಗಲಿದೆ. ಮಳೆಯಿಂದಾದ ತೊಂದರೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.

–ರಾಜಶೇಖರ ಹಿಟ್ನಾಳ ಸಂಸದ

ಮೂಲ ನಕ್ಷೆಯ ಪ್ರಕಾರ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತದೆ. ಅವುಗಳನ್ನು ಯಾರೇ ಒತ್ತುವರಿ ಮಾಡಿದರು ತೆರವುಗೊಳಿಸಲಾಗುವುದು.

–ರಾಘವೇಂದ್ರ ಹಿಟ್ನಾಳ ಶಾಸಕ

ಪುಸ್ತಕಗಳು ನೀರು ಪಾಲು ಕೊಪ್ಪಳ: ದೇವಮ್ಮ ಅವರ ಮೊಮ್ಮಗ ಗವಿಸಿದ್ದಪ್ಪ ಬಳ್ಳಾರಿ ಜಿಲ್ಲೆಯಲ್ಲಿ ಮೊರಾರ್ಜಿ ದೇಸಾಯಿ ಶಾಲೆಗೆ ಆಯ್ಕೆಯಾಗಿದ್ದು ಶುಕ್ರವಾರ ತೆರಳಲು ಸಿದ್ಧತೆ ಮಾಡಿಕೊಂಡಿದ್ದ. ಇದಕ್ಕಾಗಿ ಚೆನ್ನಾಗಿದ್ದ ಬಟ್ಟೆಗಳನ್ನು ಇಸ್ತ್ರಿ ಮಾಡಿಸಿ ಚೀಲದಲ್ಲಿ ಮಟ್ಟಸವಾಗಿ ಜೋಡಿಸಿಯೂ ಇರಿಸಿದ್ದ. ಆದರೆ ಮಳೆಯಲ್ಲಿ ಆ ಬಟ್ಟೆಗಳು ಕೊಳಕಾಗಿ ಹೋಗಿವೆ. ಪುಸ್ತಕಗಳು ನೀರು ಪಾಲಾಗಿವೆ. ಶಾಲೆಗೆ ಹೇಗೆ ಹೋಗಬೇಕು ಎನ್ನುವ ಚಿಂತೆ ಆತನನ್ನು ಕಾಡುತ್ತಿತ್ತು.

ಜನಪ್ರತಿನಿಧಿಗಳ ವಿರುದ್ಧ ಮಹಿಳೆಯರ ಆಕ್ರೋಶ

ಕೊಪ್ಪಳ: ಮಳೆಯಿಂದ ಹಾನಿಗೆ ಒಳಗಾದ ಕುವೆಂಪು ನಗರ ಹಮಾಲರ ಕಾಲೊನಿ ಗಣೇಶ ತೆಗ್ಗು ಕಲ್ಯಾಣ ನಗರ  ಮತ್ತು ರೈಲ್ವೆ ನಿಲ್ದಾಣ ರಸ್ತೆಯ ಪ್ರದೇಶಗಳಲಿಗೆ ನೂತನ ಸಂಸದ ಕೆ. ರಾಜಶೇಖರ ಹಿಟ್ನಾಳ ಶಾಸಕ ರಾಘವೇಂದ್ರ ಹಿಟ್ನಾಳ ಮಾಜಿ ಸಂಸದ ಸಂಗಣ್ಣ ಕರಡಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಆದರೆ ಸಂಕಷ್ಟದಲ್ಲಿರುವ ಜನರ ಪೂರ್ಣ ನೋವು ಅವರು ಆಲಿಸಲಿಲ್ಲ ಎನ್ನುವ ಟೀಕೆ ವ್ಯಕ್ತವಾಗಿದೆ. ’ಜನಪ್ರತಿನಿಧಿಗಳು ಸಮಸ್ಯೆ ಆಲಿಸಿ ಹೋಗುತ್ತಾರೆ. ಹೀಗೆ ಕಾಲ ತಳ್ಳಿ ಎರಡು ದಶಕಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಇವೆಲ್ಲವೂ ಕಾಟಾಚಾರದ ಪರಿಶೀಲನೆ’ ಎಂದು ಗಣೇಶ ನಗರ ಮಹಿಳೆಯರು ಆಕ್ರೋಶ ಹೊರಹಾಕಿದರು.  ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರಪಾಷಾ ಪಲ್ಟನ್ ಸದಸ್ಯ ಅಮ್ಜದ್ ಪಟೇಲ್‌ ಸಿದ್ದಲಿಂಗಯ್ಯಸ್ವಾಮಿ ಹಿರೇಮಠ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಪೌರಾಯುಕ್ತ ಗಣಪತಿ ಪಾಟೀಲ ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗಲಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.