ಗಂಗಾವತಿ: ಕನಕಗಿರಿ ತಾಲ್ಲೂಕಿನ ಹುಲಿಹೈದರ ಗುಡದೂರು,ಹಿರೇಖೇಡ ಸೇರಿ ಇತರೆ ಗ್ರಾಮಗಳಲ್ಲಿ ಕೆಲ ದಿನಗಳ ಹಿಂದೆ ಸುರಿದ ಮಳೆಯ ತೇವಾಂಶದಿಂದ ಕಾಯಿ ಕೊರಕ ಕೀಟಬಾಧೆಗೆ ತುತ್ತಾದ ಜಮೀನುಗಳಿಗೆ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ನೇತೃತ್ವದಲ್ಲಿ ಕೃಷಿ ಮತ್ತು ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕೀಟಶಾಸ್ತ್ರಜ್ಞ ಡಾ.ಸುಜಯ್ ಹುರುಳಿ ಮಾತನಾಡಿ, ‘ತೊಗರಿ ಬೆಳೆಯಲ್ಲಿ ಕಾಯಿಕೊರಕ ಹುಳವಿನ ಹೆಣ್ಣುಪತಂಗ ಮೊಗ್ಗು, ಕುಡಿ, ಹೂವು, ಎಳೆ ಕಾಯಿಗಳ ಮೇಲೆ 500-1000 ಮೊಟ್ಟೆಗಳನ್ನು ಬಿಡಿ ಬಿಡಿಯಾಗಿ ಇಡುತ್ತದೆ. ಮರಿ ಹುಳುಗಳು ಆರಂಭದಲ್ಲಿ ಹಸಿರು ಭಾಗ ತಿನ್ನುತ್ತ ನಂತರ ಹೂವು, ಮೊಗ್ಗು, ಕಾಯಿಗಳನ್ನು ಕೊರೆಯುತ್ತವೆ. ಇದರಿಂದ ಹೂವು, ಮೊಗ್ಗುಗಳು ಉದುರಿ ಕಾಯಿ ಕಟ್ಟುವುದು ಕಡಿಮೆಯಾಗುತ್ತದೆ. ಇನ್ನೂ ಬಲಿತ ಹುಳಗಳು ದೇಹದ ಅರ್ಧ ಭಾಗವನ್ನು ಕಾಯಿಯೊಳಗೆ ತೂರಿಸಿ ತಿನ್ನುತ್ತವೆ. ಇದರ ನಿರ್ವಹಣೆಗೆ ರೈತರು ಹೂವಾಡುವ ಹಂತದಲ್ಲಿ ತತ್ತಿನಾಶಕವಾದ ಪ್ರೋಫೇನೋ ಪಾಸ್-50 ಅನ್ನು 2ಮಿ.ಲೀ ಅಥವಾ ಮಿಥೋಮಿಲ್ (ಲ್ಯಾನೇಟ್) 0.6ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು’ ಎಂದರು.
‘2ನೇ ಸಿಂಪರಣೆಯಾಗಿ ಸಂಪೂರ್ಣ ಹೂವು ಬಿಡುವ ಹಂತದಲ್ಲಿ ಮರಿ ಹುಳಗಳನ್ನು ನಾಶಪಡಿಸಲು ಕೋರಾಜಿನ್ 0.15ಮಿ.ಲೀ ಅಥವಾ ಶೇ.5ರಷ್ಟು ಬೇವಿನ ಗಿಡದ ಕಷಾಯ 2.0ಮಿ.ಲೀ ಅಥವಾ ನವಲುರಾನ್ 0.75 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 3ನೇ ಸಿಂಪರಣೆಯಾಗಿ ತೊಗರಿ ಕಾಯಿ ಕಟ್ಟುವ ಹಂತದಲ್ಲಿದ್ದಾಗ ಕಾಯಿ ಕೊರಕದ ನಿಯಂತ್ರಣಕ್ಕಾಗಿ ಇಮಾಮೆಕ್ಟಿನ್ ಬೆಂಜೋಎಟ್ 5 ಎಸ್.ಜಿ 100 ಗ್ರಾಂ ಪ್ರತಿ ಎಕರೆಗೆ ಅಥವಾ ಪ್ಲೋಬೆಂಡಿಯೊಮೈಡ್ 100 ಮೀ.ಲಿ ಪ್ರತಿ ಎಕರೆಗೆ, ಅಥವಾ ಕ್ಲೋರಾಂಟ್ರಿನಿಲ್‌ಪ್ರೋಲ್ 60 ಮೀ.ಲಿ ಪ್ರತಿ ಎಕರೆಗೆ ಸಿಂಪಡಿಸಬೇಕು. ಮೆಕ್ಕೆಜೋಳದ ಬೆಳೆಯಲ್ಲಿ ಸೈನಿಕ ಹುಳು ನಿರ್ವಹಣೆಗೆ ಇಮಾಮೆಕ್ಟಿನ್ ಬೆಂಜೋಎಟ್ 60 ಗ್ರಾಂ ಪ್ರತಿ ಎಕರೆಗೆ ಅಥವಾ ಸ್ಪೈನೋಟೋರಾಮ್ 100 ಮೀ.ಲಿ ಪ್ರತಿ ಎಕರೆಗೆ ಸಿಂಪಡಿಸಬೇಕು’ ಎಂದು ರೈತರಿಗೆ ತಿಳಿಸಿದರು.
ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ, ಹುಲಿಹೈದರ ಹೋಬಳಿ ಕೃಷಿ ಅಧಿಕಾರಿ ನವೀನ್.ಕೆ, ರೈತರಾದ ಶರಣಪ್ಪ ಗದ್ದಿ, ಭೀಮನಗೌಡ ಜೀರಾಳ, ಬಾಳಪ್ಪ ನಾಡಗೇರ, ಸೋಮನಾಥ ನಾಯಕ, ಹನುಮಂತಪ್ಪ ಬೇವಿನಗಿಡ, ಶಿವ ಕುಮಾರ ಬಡಿಗೇರ, ನಿಂಗಪ್ಪ ಹುಡೆಜಾಲಿ, ಮರಿಸ್ವಾಮಿ, ಹನುಮೇಶ ಪೂಜಾರ ಸೇರಿ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.