ADVERTISEMENT

ಕಾಂಗ್ರೆಸ್‌ ಕಾರ್ಯಕರ್ತರಿಗೆ ಪೊಲೀಸರ ಕಿರುಕುಳ ಆರೋಪ: ಠಾಣೆ ಎದುರು ಶಾಸಕ ಧರಣಿ

ಕಾಂಗ್ರೆಸ್‌ ಕಾರ್ಯಕರ್ತರಿಗೆ ಪೊಲೀಸರ ಕಿರುಕುಳ: ಆರೋಪ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 2:28 IST
Last Updated 17 ಜುಲೈ 2022, 2:28 IST
ಕುಷ್ಟಗಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಯುತ್ತಿದ್ದ ವೇಳೆ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಎನ್‌.ಆರ್‌.ನಿಂಗಪ್ಪ ನಡುವೆ ವಗ್ವಾದ ನಡೆಯಿತು
ಕುಷ್ಟಗಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಯುತ್ತಿದ್ದ ವೇಳೆ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಎನ್‌.ಆರ್‌.ನಿಂಗಪ್ಪ ನಡುವೆ ವಗ್ವಾದ ನಡೆಯಿತು   

ಕುಷ್ಟಗಿ: ‘ಕಾಂಗ್ರೆಸ್‌ ಕಾರ್ಯಕರ್ತರಿಗೆ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಬೆಂಬಲಿಗರೊಂದಿಗೆ ಇಲ್ಲಿನ ಪೊಲೀಸ್ ಠಾಣೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸರ್ಕಲ್ ಇನ್‌ಸ್ಪೆಕ್ಟರ್‌ ಎನ್‌.ಆರ್‌.ನಿಂಗಪ್ಪ ಮತ್ತು ಸಬ್ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ ಅವರನ್ನು ತರಾಟೆ ತೆಗೆದುಕೊಂಡ ಬಯ್ಯಾಪುರ ಅವರು ಆವೇಶಗೊಂಡ ಕಾರಣ ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ
ನಿರ್ಮಾಣವಾಗಿತ್ತು.

‘ಕಾಂಗ್ರೆಸ್‌ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು 50 ಜನರ ವಿರುದ್ಧ ರೌಡಿಶೀಟ್‌ ತಯಾರಿಸಿದ್ದೀರಿ. ನಿಮ್ಮಿಂದಾ ಆಗುತ್ತಿರುವ ಅನ್ಯಾಯ ನೋಡಿಕೊಂಡು ಸುಮ್ಮನಿರಲು ಆಗದು. ಎಸ್‌ಪಿ ಮತ್ತು ಡಿವೈಎಸ್ಪಿ ಇಲ್ಲಿ ಬರುವವರೆಗೆ ಪ್ರತಿಭಟನೆ ಹಿಂಪಡೆಯೊಲ್ಲ’ ಎಂದು ಬಯ್ಯಾಪುರ ಪಟ್ಟು ಹಿಡಿದರು.

ADVERTISEMENT

ಆಗಿದ್ದೇನು: ‘ಹಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಜಿ.ಗಂಗನಾಳ ಗ್ರಾಮದ ಯಮನೂರಪ್ಪ ಎಂಬುವರು ಸಾಕ್ಷಿಯಾಗಿದ್ದರು. ಆದರೆ, ಕೋರ್ಟ್‌ಗೆ ಹಾಜರಾಗದ ಕಾರಣ ವಾರಂಟ್ ಹೊರಡಿಸಲಾಗಿತ್ತು. ಶನಿವಾರ ಬೆಳಿಗ್ಗೆ ಯಮನೂರಪ್ಪ ಅವರನ್ನು ಕರೆಸಿಕೊಳ್ಳಲಾಗಿತ್ತು. ಆದರೆ, ವಿನಾಕಾರಣ ಸಾಕ್ಷಿಯನ್ನಾಗಿ ಮಾಡಿಕೊಳ್ಳಲಾಗಿದೆಯೆಂದು ಯಮನೂರಪ್ಪ ಪೊಲೀಸರಿಗೆ ನಿಂದಿಸಿದರು’ ಎಂದು ಪೊಲೀಸರು ಘಟನೆ
ವಿವರಿಸಿದರು.

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ‘ಪಟ್ಟಣದಲ್ಲೇ ಇದ್ದ ಯಮನೂರಪ್ಪ ಕಾರ್ಯದ ನಿಮಿತ್ತ ಜಿ.ಗಂಗನಾಳ ಗ್ರಾಮಕ್ಕೆ ತೆರಳಿದ್ದರು. ಮನೆಗೆ ಬಂದ ಪೊಲೀಸರು ಯಮನೂರಪ್ಪ ಅವರ ಪತ್ನಿಯನ್ನು ಗದರಿಸಿದ್ದು ಸರಿಯಲ್ಲ. ಯಮನೂರಪ್ಪ ಅವರ ಕುಟುಂಬ ಸದಸ್ಯರನ್ನು ಬೆದರಿಸುವಂತಹ ಪರಿಸ್ಥಿತಿ ಇರಲಿಲ್ಲ’ ಎಂದರು.

‘ವಿನಾಕಾರಣ ಪ್ರಕರಣ ದಾಖಲಿಸಿಲ್ಲ. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಮಾತ್ರ ಕ್ರಮ ಜರುಗಿಸಿದ್ದೇವೆ. ಒಂದು ವೇಳೆ ಪೊಲೀಸರ ತಪ್ಪಿದ್ದರೆ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಎನ್‌.ಆರ್‌.ನಿಂಗಪ್ಪ ಸ್ಪಷ್ಟಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ವಕೀಲ ಫಕೀರಪ್ಪ ಚಳಗೇರಿ ಮಧ್ಯಸ್ಥಿಕೆ ವಹಿಸಿ, ಮನವೊಲಿಸಿದ ಬಳಿಕ ಪ್ರತಿಭಟನೆ ಕೊನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.