ADVERTISEMENT

ನಿರಂತರ ಮಳೆ | ಹಳ್ಳಗಳಾದ ರಸ್ತೆ: ಸವಾರರ ಸಾಹಸ

ತುಂಗಭದ್ರಾ ನದಿ ಪಾತ್ರದ ಗ್ರಾಮಗಳ ಜನರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 5:18 IST
Last Updated 19 ಅಕ್ಟೋಬರ್ 2024, 5:18 IST
ಗಂಗಾವತಿಯಿಂದ ಹುಲಿಗಿಗೆ ತೆರಳುವ ಮಾರ್ಗದಲ್ಲಿ ರಸ್ತೆ ಮೇಲೆ ಹರಿದ ಮಳೆ ನೀರು 
ಗಂಗಾವತಿಯಿಂದ ಹುಲಿಗಿಗೆ ತೆರಳುವ ಮಾರ್ಗದಲ್ಲಿ ರಸ್ತೆ ಮೇಲೆ ಹರಿದ ಮಳೆ ನೀರು    

ಮುನಿರಾಬಾದ್‌: ಕೊಪ್ಪಳ ತಾಲ್ಲೂಕಿನ ಹುಲಿಗೆ ಗ್ರಾಮಕ್ಕೆ ಗಂಗಾವತಿಯಿಂದ ಸಂಪರ್ಕಿಸುವ ರಸ್ತೆ ಶುಕ್ರವಾರ ಮಳೆಯಿಂದ ಜಲಾವೃತವಾಗಿತ್ತು. ರಸ್ತೆಯ ಮೇಲೆಯೇ ನೀರು ಹರಿದಿದ್ದರಿಂದ ಸರಿಯಾಗಿ ದಾರಿ ಕಾಣದೇ ವಾಹನಗಳ ಸವಾರರು ಪರದಾಡಿದರು. 

ಕಾರಟಗಿ ಮತ್ತು ಗಂಗಾವತಿ ಭಾಗದಿಂದ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಬರುವ ಲಘು ವಾಹನಗಳು ಬಸಾಪುರ, ಬಂಡಿಹರ್ಲಾಪುರ, ಶಿವಪುರದಿಂದ ಹುಲಿಗೆಗೆ ಬರುತ್ತವೆ. ಮುನಿರಾಬಾದ್ ಸಂಪರ್ಕಿಸುವ ವಾಹನಗಳು ಇದೇ ರಸ್ತೆಯಲ್ಲಿ ತೆರಳುತ್ತವೆ. ಗಿಣಿಗೇರಾ ಕೆರೆಯಿಂದ ಬಸಿದು ಬರುವ ನೀರು ಗಿಣಿಗೇರಾ–ಶಿವಪುರ ಮಧ್ಯೆ ಹರಿಯುತ್ತದೆ. ಈ ಭಾಗದಲ್ಲಿ ಹೆಚ್ಚು ಮಳೆಯಾದರೆ ತುಂಬಿ ಹರಿಯುವ ಈ ಹಳ್ಳದಿಂದಾಗಿ ಜನರು ಪರದಾಡುವಂತಾಗುತ್ತದೆ.

‘ಮಳೆಗಾಲ ಮುಗಿಯುತ್ತಿದ್ದಂತೆ ಎಲ್ಲರೂ ಈ ಸಮಸ್ಯೆ ಮರೆತು ಬಿಡುತ್ತಾರೆ. ಹಳ್ಳ ದಾಟಿಸಲು ಹೆಣಗಾಡುವ ದ್ವಿಚಕ್ರ ವಾಹನಗಳ ಸವಾರರು, ಬೈಕ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುವ ಸವಾರರಿಗೆ ಇದು ಮೃತ್ಯುಕೂಪವಾಗಿದೆ’ ಎಂದು ಶಿವಪುರ ಗ್ರಾಮದ ಮುಖಂಡ ಚನ್ನಬಸಯ್ಯ ಹಿರೇಮಠ ಹಾಗೂ ಹನುಮಂತಪ್ಪ ಬಂಡಿಹರ್ಲಾಪುರ ಬೇಸರ ವ್ಯಕ್ತಪಡಿಸಿದರು.

ADVERTISEMENT

ಶಹಾಪುರದ ಬಳಿ ರಾಷ್ಟ್ರೀಯ ಹೆದ್ದಾರಿಯ ಹತ್ತಿರ ಹರಿಯುವ ಇದೇ ಹಳ್ಳ ಮುಂದೆ ಶಿವಪುರ ಗ್ರಾಮ ಬಳಸಿ ತುಂಗಭದ್ರಾ ನದಿ ಸೇರುತ್ತದೆ. ಇದೇ ಹಳ್ಳಕ್ಕೆ ಶಿವಪುರ ಗ್ರಾಮದ ಬಳಿ ಜಾರು ಸೇತುವೆ ನಿರ್ಮಿಸಲಾಗಿದೆ. ದೊಡ್ಡ ಸೇತುವೆ ನಿರ್ಮಿಸುವಂತೆ ನಾಲ್ಕೈದು ಗ್ರಾಮಗಳ ಸಾರ್ವಜನಿಕರ ಬೇಡಿಕೆಗೆ ಮನ್ನಣೆ ಸಿಗುತ್ತಿಲ್ಲ. ಬೇವಿನಹಳ್ಳಿ ಮತ್ತು ಲಿಂಗದಹಳ್ಳಿ ಮಧ್ಯ ಹರಿಯುವಾಗಲೂ ಇದೇ ಸಮಸ್ಯೆ ಕಾಡುತ್ತದೆ.

ಹಿಟ್ನಾಳ ವ್ಯಾಪ್ತಿಯಲ್ಲಿ 8.27 ಸೆಂ.ಮೀ. ಮಳೆ ಶುಕ್ರವಾರದ ಬೆಳಿಗ್ಗೆಗೂ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಕೊಪ್ಪಳ ತಾಲ್ಲೂಕಿನ ಹಿಟ್ನಾಳ ವ್ಯಾಪ್ತಿಯಲ್ಲಿ 8.274 ಸೆಂ.ಮೀ. ಮಳೆಯಾಗಿದೆ. ಕಿನ್ನಾಳ 6.52 ಕೊಪ್ಪಳ 3.68 ಇರಕಲ್ಲಗಡ 3.22 ಕಾರಟಗಿ 3.42 ಸಿದ್ದಾಪುರ 3.43 ಅಳವಂಡಿ 1.94 ಮರಳಿ 2.73 ವಡ್ಡರಹಟ್ಟಿ 2.60 ಹಾಗೂ ನವಲಿ ಹೋಬಳಿ ವ್ಯಾಪ್ತಿಯಲ್ಲಿ 3.64 ಸೆಂ.ಮೀ.ನಷ್ಟು ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.