ಅಳವಂಡಿ: ರಸ್ತೆಯುದ್ದಕ್ಕೂ ತಗ್ಗು ಗುಂಡಿಗಳದ್ದೇ ದರ್ಶನ. ಬೈಕ್ ಸವಾರರು ಸ್ವಲ್ಪ ಮೈಮರೆತರೇ ಇಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ...ಬಸ್‌ಗಳನ್ನೂ ಕೂಡ ಬಹಳ ಜಾಗರೂಕತೆಯಿಂದ ಓಡಿಸಬೇಕು... ಇದು ಕೊಪ್ಪಳ ತಾಲ್ಲೂಕಿನ ಹಲಗೇರಿ ಗ್ರಾಮದಿಂದ ವದಗನಾಳಕ್ಕೆ ಸಂಪರ್ಕಿಸುವ ರಸ್ತೆಯ ದುಸ್ಥಿತಿ.
ಹಲವು ತಿಂಗಳಿನಿಂದ ಈ ರಸ್ತೆ ಕಿತ್ತು ಹೋಗಿದ್ದು, ಇದರಿಂದ ಗ್ರಾಮೀಣ ಪ್ರದೇಶದ ರಸ್ತೆಗಳು ನಿರ್ವಹಣೆ ಇಲ್ಲದೇ ಸೊರಗಿರುವುದರಿಂದ ವಾಹನಗಳ ಸಂಚಾರ ದುಸ್ತರವಾಗಿದೆ.
ಕೊಪ್ಪಳ ಜಿಲ್ಲಾ ಕೇಂದ್ರದಿಂದ ಹಿರೇಸಿಂದೋಗಿ, ಅಳವಂಡಿ ಹಾಗೂ ಮುಂಡರಗಿ ನಗರಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು, ರಸ್ತೆ ಹದೆಗೆಟ್ಟಿರುವ ಪರಿಣಾಮ ನಿತ್ಯ ಈ ರಸ್ತೆಯಲ್ಲಿ ತೆರಳುವ ನೂರಾರು ವಾಹನಗಳ ಸವಾರರು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿಕೊಂಡೆ ಸಂಚರಿಸುತ್ತಿದ್ದಾರೆ.
ರಸ್ತೆಯದ್ದಕ್ಕೂ ಗುಂಡಿ, ಹೊಂಡಗಳೇ ತುಂಬಿವೆ. ರಸ್ತೆಯನ್ನು ಹುಡುಕಿಕೊಂಡು ವಾಹನ ಚಲಾಯಿಸಬೇಕು. ಇಲ್ಲವಾದರೆ ಅಪಘಾತ ಮಾತ್ರ ಕಟ್ಟಿಟ್ಟು ಬುತ್ತಿ. ಈ ರಸ್ತೆಯಲ್ಲಿ ಮರಳು ತುಂಬಿದ ಲಾರಿಗಳು ಹಾಗೂ ಸೋಲಾರ್, ಪ್ಯಾನ್ ಕಂಪನಿಯ ಬೃಹತ್ ತೂಕದ ವಸ್ತುಗಳನ್ನು ಹೇರಿ ಕೊಂಡು ಹೋಗುತ್ತವೆ. ಇದರಿಂದ ಈ ರಸ್ತೆ ಹಾಳಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ತಗ್ಗು ಗುಂಡಿಗಳಿಂದ ಕೂಡಿದ್ದ ರಸ್ತೆಯಲ್ಲಿ ಸಂಚರಿಸುವಾಗ ಬೈಕ್ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಆದರೂ ಕೂಡ ಯಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ. ಕನಿಷ್ಠ ಪಕ್ಷ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವ ಗೋಜಿಗೆ ಹೋಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಹದಗೆಟ್ಟಿರುವ ಕಾರಣ ಸಂಚಾರ ದುಸ್ತರವಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಮುಂದಾಗಬೇಕು.ದೇವೇಂದ್ರಗೌಡ ಜಿರ್ಲಿ, ವದಗನಾಳ ಗ್ರಾಮಸ್ಥ.
ಬೃಹತ್ ತೂಕದ ಲಾರಿಗಳಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ಈಗಾಗಿ ಇಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.ಗವಿಸಿದ್ದಪ್ಪ ಬನ್ನಿಕೊಪ್ಪ, ವದಗನಾಳ ಗ್ರಾಮಸ್ಥ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.