ADVERTISEMENT

ಕೊಪ್ಪಳ | ಉತ್ತಮ ರಸ್ತೆಗಳಿಗೆ ಬರ: ಸವಾರರ ಜೀವ ಹಿಂಡುತ್ತಿವೆ ಗುಂಡಿಗಳು

ಪ್ರಮೋದ
Published 1 ಜುಲೈ 2024, 5:34 IST
Last Updated 1 ಜುಲೈ 2024, 5:34 IST
ಕೊಪ್ಪಳದ ಅಶೋಕ ವೃತ್ತದಿಂದ ಕಿನ್ನಾಳಕ್ಕೆ ಹೋಗುವ ರಸ್ತೆ ಮಧ್ಯಭಾಗದಲ್ಲಿರುವ ಗುಂಡಿ –ಪ್ರಜಾವಾಣಿ ಚಿತ್ರಗಳು/ಭರತ್‌ ಕಂದಕೂರ 
ಕೊಪ್ಪಳದ ಅಶೋಕ ವೃತ್ತದಿಂದ ಕಿನ್ನಾಳಕ್ಕೆ ಹೋಗುವ ರಸ್ತೆ ಮಧ್ಯಭಾಗದಲ್ಲಿರುವ ಗುಂಡಿ –ಪ್ರಜಾವಾಣಿ ಚಿತ್ರಗಳು/ಭರತ್‌ ಕಂದಕೂರ    

ಕೊಪ್ಪಳ: ‘ಜಿಲ್ಲಾ ಕೇಂದ್ರದ ರಸ್ತೆಗಳನ್ನಾದರೂ ಗುಣಮಟ್ಟದಿಂದ ನಿರ್ಮಿಸಬೇಕು, ಮಳೆಗಾಲಕ್ಕೂ ಮೊದಲು ಗುಂಡಿಗಳನ್ನು ಮುಚ್ಚಿ ಸವಾರರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲ. ನಮ್ಮ (ಸವಾರರ) ಮಾತಿಗೆ ಕಿಮ್ಮತ್ತು ಸಿಗದಿದ್ದ ಮೇಲೆ ಪದೇ ಪದೇ ಸಮಸ್ಯೆಯನ್ನು ಯಾರ ಮುಂದೆ ಹೇಳಿಕೊಳ್ಳಬೇಕು’

ಇಲ್ಲಿನ ಅಶೋಕ ವೃತ್ತದಿಂದ ಕಿನ್ನಾಳಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಮಂಜುನಾಥ ಇಟಗಿ ಅವರ ಪ್ರಶ್ನೆಯಿದು. ಮಂಜುನಾಥ ಅವರ ಹಿಂದೆ ಸಾಲುಸಾಲಾಗಿ ಬರುತ್ತಿದ್ದ ವಾಹನ ಸವಾರರು ತಮ್ಮೆದುರು ಆಳವಾಗಿ ಕಾಣುತ್ತಿದ್ದ ರಸ್ತೆಯ ಗುಂಡಿಯಲ್ಲಿ ಸವಾಕಾಶವಾಗಿ ವಾಹನ ಇಳಿಸಿ ಜೀವ ಕೈಯಲ್ಲಿ ಹಿಡಿದುಕೊಂಡು ಮುಂದಕ್ಕೆ ಸಾಗುತ್ತಿದ್ದರು.

ಕಿನ್ನಾಳ ರಸ್ತೆಯ ಮೂಲಕ ಕುಷ್ಟಗಿಗೆ ಹೋಗುವ ಮಾರ್ಗದಲ್ಲಿ (ಆರೋಗ್ಯ ಬಡಾವಣೆ ಸಮೀಪ), ಓಜನಹಳ್ಳಿ, ಭಾಗ್ಯನಗರ, ನಿತ್ಯ ಸಾವಿರಾರು ಜನ ಓಡಾಡುವ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆ ಹೀಗೆ ಅನೇಕ ಮಾರ್ಗಗಳು ಬೈಕ್‌ ಹಾಗೂ ನಾಲ್ಕು ಚಕ್ರಗಳ ವಾಹನಗಳ ಸವಾರರರನ್ನು ‘ನೃತ್ಯ’ ಮಾಡಿಸುತ್ತವೆ. ಜಿಲ್ಲಾ ಕೇಂದ್ರ ಎಲ್ಲ ಚಟುವಟಿಕೆಗಳ ಶಕ್ತಿಕೇಂದ್ರ. ಮಾರುಕಟ್ಟೆ, ಆಸ್ಪತ್ರೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ, ಹಲವಾರು ಕಾರ್ಯಕ್ರಮಗಳು ಹೀಗೆ ಒಂದಿಲ್ಲೊಂದು ಕಾರಣಕ್ಕಾಗಿ ನಿತ್ಯ ಲಕ್ಷಾಂತರ ಜನ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಾರೆ. ಹದಗೆಟ್ಟ ರಸ್ತೆಗಳಲ್ಲಿರುವ ಮೊಣಕಾಲ ಆಳೆತ್ತರದ ರಸ್ತೆ ಗುಂಡಿಗಳಲ್ಲಿ ಜನ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಲೇ ಓಡಾಡಬೇಕಾದ ಪರಿಸ್ಥಿತಿಯಿದೆ.

ADVERTISEMENT

ಒಂದು ಸಣ್ಣ ಮಳೆಯಾದರೂ ಗುಂಡಿಗಳು ತುಂಬುತ್ತವೆ. ಹಲವು ದಿನಗಳ ಹಿಂದೆ ಸುರಿದ ಬಿರುಸಿನ ಮಳೆಗೆ ರಸ್ತೆಗಳಲ್ಲಿ ಮತ್ತಷ್ಟು ಗುಂಡಿಗಳು ಉದ್ಭವವಾಗಿವೆ. ಈ ಸಮಸ್ಯೆಗಳು ಇಂದು, ನಿನ್ನೆ ಸೃಷ್ಟಿಯಾದವುಗಳಲ್ಲ. ಅನೇಕ ವರ್ಷಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿಈ ಸಮಸ್ಯೆ ಇದೆ. ಜಿಲ್ಲಾ ಕೇಂದ್ರಗಳಿಂದ ಸುತ್ತಮುತ್ತಲಿನ ಊರುಗಳಿಗೆ ಹೋಗುವವರಿಗೆ ಈ ರಸ್ತೆಗಳು ಜೀವಕ್ಕೆ ಕಂಟಕ ತಂದೊಡ್ಡುತ್ತಿವೆ.

ಬಸವೇಶ್ವರ ವೃತ್ತ (ಗಂಜ್‌ ಸರ್ಕಲ್‌) ಮಾರ್ಗದಿಂದ ಕುಷ್ಟಗಿ ರಸ್ತೆಗೆ ಹೋಗುವ ಮಾರ್ಗದಲ್ಲಿ ರೈಲ್ವೆ ಸಂಬಂಧಿತ ಕಾಮಗಾರಿಗಾಗಿ ರಸ್ತೆ ಬಂದ್ ಮಾಡಲಾಗಿದೆ. ಆದ್ದರಿಂದ ಬಸ್, ಲಾರಿಗಳು ಸೇರಿದಂತೆ ಬೃಹತ್‌ ವಾಹನಗಳು ಭಾಗ್ಯನಗರ ಸರ್ಕಲ್‌ ಮಾರ್ಗವಾಗಿಯೇ ತೆರಳುತ್ತವೆ. ಈ ಕ್ರಾಸ್‌ನಿಂದ ಕುಷ್ಟಗಿ ಮಾರ್ಗದ ರಸ್ತೆಗೆ ಹೋಗುವ ತನಕದ ಒಂದೂವರೆ ಕಿ.ಮೀ. ರಸ್ತೆಯಂತೂ ಸವಾರನ ಎದೆಯಲ್ಲಿ ಭಯ ಹುಟ್ಟಿಸುತ್ತದೆ.

ಇದೇ ರಸ್ತೆಯಲ್ಲಿ ಬೈಕ್‌ ಮೇಲೆ ಅಜ್ಜಿಯೊಬ್ಬರನ್ನು ಹಿಂಬದಿಯಲ್ಲಿ ಕೂಡಿಸಿಕೊಂಡು ಹೋಗುತ್ತಿದ್ದ ಬೈಕ್‌ ಸವಾರ ವೆಂಕಟೇಶ ನಾಯಕ ಎಂಬುವರನ್ನು ಮಾತಿಗೆಳೆದಾಗ ’ಕುಷ್ಟಗಿಯಿಂದ ಕೊಪ್ಪಳ ಸಮೀಪದ ತನಕ ಉತ್ತಮ ರಸ್ತೆಯಿದೆ. ಆದರೆ ಜಿಲ್ಲಾ ಕೇಂದ್ರ ಸಮೀಪ ಬರುತ್ತಿದ್ದಂತೆ ಭಯ ಶುರುವಾಗುತ್ತದೆ. ಒಂದೂವರೆ ಕಿ.ಮೀ. ಪ್ರಯಾಣ ಬೇಸತ್ತು ಹೋಗುವಂತೆ ಮಾಡುತ್ತದೆ. ನಗರದ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳಲ್ಲಾದರೂ ತೇಪೆ ಹಾಕಬೇಕಲ್ಲವೇ’ ಎಂದು ಪ್ರಶ್ನಿಸಿದರು.

ಕೇಂದ್ರೀಯ ಬಸ್ ನಿಲ್ದಾಣಕ್ಕೆ ಬರುವ ಸಾಕಷ್ಟು ಜನ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಾರೆ. ವರ್ಣೇಕರ್‌ ಕಾಂಪ್ಲೆಕ್ಸ್‌ ಮುಂಭಾಗದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಹೆಜ್ಜೆಗೊಂದು ಗುಂಡಿ ದಾಂಗುಡಿಯಿಡುತ್ತವೆ. ಈ ಪ್ರದೇಶ ಸದಾ ಜನಜಂಗುಳಿಯಿಂದ ತುಂಬಿರುತ್ತದೆ. ಗ್ರಾಮೀಣ ಪ್ರದೇಶಗಳಿಂದ ಬರುವವರ ಸಂಖ್ಯೆಯೂ ಹೆಚ್ಚು. ಈ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿದ್ದರೂ ಅದನ್ನು ಸರಿಪಡಿಸುವ ಕೆಲಸ ಮಾಡಿಲ್ಲ. ಮಳೆಗಾಲ ಆರಂಭವಾಗುವ ಮೊದಲೇ ಗುಂಡಿಗಳನ್ನು ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಬೇಕಿತ್ತು ಎಂದು ಜನ ಹೇಳುತ್ತಾರೆ. ಆದರೆ, ಮಾಡುವವರು ಯಾರು ಎನ್ನುವುದೇ ಯಕ್ಷಪ್ರಶ್ನೆ ಎನ್ನುತ್ತಾರೆ ಸಾರ್ವಜನಿಕರು.

‘ಕೊಪ್ಪಳ ಗ್ರಾಮೀಣ ಭಾಗದ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ. ಕೊಪ್ಪಳದಿಂದ ಪೂರ್ಣ ಕಿನ್ನಾಳದ ತನಕ ನಾನೇ ರಸ್ತೆ ಅಭಿವೃದ್ಧಿ ಮಾಡುವೆ’ ಎಂದು ಹಿಂದೊಮ್ಮೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದರು. ಆದರೆ ಕೆಲಸ ಮಾತ್ರ ಕಾರ್ಯರೂಪಕ್ಕೆ ಬಂದಿಲ್ಲ.

ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿರುವ ಗುಂಡಿಗಳು
ಕೊಪ್ಪಳದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆದ ಅನಾಹುತವನ್ನು ಎಲ್ಲರೂ ನೋಡಿದ್ದಾರೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ರಸ್ತೆಯ ಗುಂಡಿಗಳನ್ನಾದರೂ ಮುಚ್ಚುವ ಕೆಲಸ ತುರ್ತಾಗಿ ಆಗಬೇಕು
ರಮೇಶ ಒಂಕಲಕುಂಟಿ ಸ್ಥಳೀಯರು
ರಸ್ತೆ ದುರಸ್ತಿ ಮಾಡುವಂತೆ ಮತ್ತು ಕೊಪ್ಪಳ ನಗರದ ಗುಂಡಿಗಳಿಗೆ ತೇಪೆ ಹಾಕಿ ರಸ್ತೆಗಳನ್ನು ಸರಿಪಡಿಸುವಂತೆ ಅನೇಕ ಬಾರಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ. ಜನ ಕೂಡ ಈ ಸಮಸ್ಯೆ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಬೇಕು
ಶರಣು ಪಾಟೀಲ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ
ಕೊಪ್ಪಳಕ್ಕೆ ನಿತ್ಯ ಲಕ್ಷಾಂತರ ಜನ ಭೇಟಿ ನೀಡುತ್ತಿದ್ದರೂ ರಸ್ತೆಗಳ ಸ್ಥಿತಿ ಮಾತ್ರ ಸರಿಯಾಗಿಲ್ಲ. ಭಾರಿ ವಾಹನಗಳ ಓಡಾಟದ ಭಾರವೂ ಆಗುತ್ತಿದ್ದು ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ. ಇದು ಹೀಗೆಯೇ ಮುಂದುವರಿದರೆ ಹೋರಾಟ ಮಾಡಬೇಕಾಗುತ್ತದೆ.
ಎಸ್‌. ಮೈಲಾರಪ್ಪ ವಕೀಲ
‘ಭಾರಿ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಿ’
ಕೊಪ್ಪಳ: ನಗರದಲ್ಲಿ ಭಾರಿ ವಾಹನಗಳ ಓಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದು ಜನರ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನು ಜಿಲ್ಲಾಡಳಿತ ತಡೆಯಬೇಕು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್‌. ಮೈಲಾರಪ್ಪ ಆಗ್ರಹಿಸಿದರು. ‘ನಿಗದಿಗಿಂತಲೂ ಹೆಚ್ಚು ಲೋಡ್‌ ಮಾಡಿಕೊಂಡ ವಾಹನಗಳಿಗೆ ನಗರದೊಳಗೆ ಪ್ರವೇಶಕ್ಕೆ ಅವಕಾಶ ಕೊಡಬಾರದು. ಕಡ್ಡಾಯವಾಗಿ ದಾಖಲೆಗಳನ್ನು ಪರಿಶೀಲಿಸಬೇಕು. ವಾಹನ ಅಪಘಾತಕ್ಕೆ ಈಡಾದರೂ ಗಾಯಗೊಂಡ ವ್ಯಕ್ತಿಯ ಚಿಕಿತ್ಸೆಗೆ ಯಾರೂ ನಯಾ ಪೈಸೆ ಕೊಡುವುದಿಲ್ಲ. ಆದ್ದರಿಂದ ಭಾರಿ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಬೇಕು’ ಎಂದು ಭಾನುವಾರ ಪ‍ತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಬೈಪಾಸ್‌ ರಸ್ತೆಯಿದ್ದರೂ ನಗರದಲ್ಲಿ ಭಾರಿ ಗಾತ್ರದ ವಾಹನಗಳು ಓಡಾಡುತ್ತವೆ. ವೇಗದ ಮಿತಿ ಪ್ರತಿ ಗಂಟೆಗೆ 30ರಿಂದ 40 ಕಿ.ಮೀ. ಮಾತ್ರ ಇದ್ದರೂ ಯಾರೂ ಪಾಲನೆ ಮಾಡುತ್ತಿಲ್ಲ. ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.