ADVERTISEMENT

ಕೊಪ್ಪಳ | ‘ಅಜ್ಜನ ಜಾತ್ರೆಗೆ ಬನ್ನಿ ಎನ್ನುವುದೇ ಶಕ್ತಿ’

ಜಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಸುತ್ತೂರು ಮಠದ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 6:42 IST
Last Updated 28 ಜನವರಿ 2024, 6:42 IST
   

ಕೊಪ್ಪಳ: ‘ಗವಿಮಠ ಭವ್ಯವಾದ ಇತಿಹಾಸ ಹೊಂದಿದ್ದು, ಸ್ವಾಮೀಜಿ ಮಠದ ಸಮಗ್ರ ಅಭಿವೃದ್ಧಿಗೆ ತಮ್ಮ ಬದುಕು ಅರ್ಪಣೆ ಮಾಡಿದ್ದಾರೆ. ಜಗತ್ತಿಗೆ ಮಠದ ಕಾರ್ಯವನ್ನು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಮೈಸೂರಿನ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. 

ಬೆಟ್ಟದ ಮೇಲಿರುವ ಕೈಲಾಸ ಮಂಟಪದಲ್ಲಿ ಶನಿವಾರ ನಡೆದ ಜಾತ್ರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಅಜ್ಜನ ಜಾತ್ರೆಗೆ ಬನ್ನಿ ಎಂದು ಕರೆದರೆ ಸಾಕು ಲಕ್ಷಾಂತರ ಜನ ಬರುತ್ತಾರೆ ಎಂದರೆ ಅದು ಮಠ ಹಾಗೂ ಸ್ವಾಮೀಜಿ ಹೊಂದಿರುವ ಶಕ್ತಿಗೆ ಸಾಕ್ಷಿಯಂತಿದೆ. ಮನುಷ್ಯ ಬದುಕಲು ಗುರುಗಳು ಶಕ್ತಿ ನೀಡುತ್ತಾರೆ. ಗುರುಗಳು ಬದುಕಲು ಮನುಷ್ಯರು ಶಕ್ತಿ ತುಂಬುತ್ತಾರೆ. ಕೊಪ್ಪಳ ಜಾತ್ರೆಯನ್ನು ಕೇಳುವ ಬದಲು ನೋಡಿದಾಗ ಮಾತ್ರ ಜಾತ್ರೆಯ ಬಗ್ಗೆ ಗೊತ್ತಾಗುತ್ತದೆ’ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಘ್ ಮಾತನಾಡಿ ‘ಗವಿಮಠದ ಜಾತ್ರೆಯಲ್ಲಿ ಜನರನ್ನು ನೋಡಿ ಗಾಬರಿಯಾದೆ. ಇದರಿಂದ ಬ್ರಹ್ಮ ದರ್ಶನವಾಗಿದೆ. ಈ ಜಾತ್ರೆ  ಸಂಸ್ಕೃತಿಯ ಯಾತ್ರೆಯಾಗಿದ್ದು, ಹೃದಯ ಸ್ಪರ್ಶಿ ಕಾರ್ಯಕ್ರಮವೆನಿಸಿದೆ. ಇಂಥ ಮಠ ಹಾಗೂ ಜಾತ್ರೆಯಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಮೂಡುತ್ತದೆ’ ಎಂದು ಹೇಳಿದರು.

ADVERTISEMENT

ರಾಜಸ್ಥಾನದ ಗಂಗಾನಗರದ ಎಸ್‌ಪಿಯಾಗಿರುವ ರಮೇಶ ಕಂದಕೂರ ಮಾತನಾಡಿ ‘ಗವಿಮಠ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಬಡವರ ಸೇವೆ, ಧರ್ಮದ ಬೆಳಕನ್ನು ತೋರಿದೆ. ಗ್ರಾಮೀಣ ಪ್ರದೇಶದ ಓದಿದ ನಾನು, ಬಡತನದಿಂದ ಬೆಳೆದು ನಾನಾ ಸವಾಲುಗಳನ್ನು ಎದುರಿಸಿದ್ದೇನೆ. ಇವೆಲ್ಲವುಗಳಿಂದ ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎನ್ನುವ ಪಾಠ ಕಲಿತಿದ್ದೇನೆ’ ಎಂದರು.

ತ್ರಿಕೋಟದ ವಿರಕ್ತಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಿರೇಸಿಂದೋಗಿಯ ಚಿದಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.