ADVERTISEMENT

ಪ್ರಜಾವಾಣಿ ವರದಿ ಪರಿಣಾಮ | ದುರಸ್ತಿಯಾಯಿತು ಅಳವಂಡಿ ಶಾಲೆಯ ಶೌಚಾಲಯ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 12:22 IST
Last Updated 29 ನವೆಂಬರ್ 2023, 12:22 IST
   

ಅಳವಂಡಿ (ಕೊಪ್ಪಳ ಜಿಲ್ಲೆ): ಜಿಲ್ಲೆಯ ಅಳವಂಡಿಯ ಮುದುಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ಇಲ್ಲದೇ ವಿದ್ಯಾರ್ಥಿನಿಯರಿಗೆ ಹಾಗೂ ಶಿಕ್ಷಕರಿಗೆ ಶೌಚಕ್ಕೆ ಬಯಲೇ ಆಸರೆಯಾಗಿತ್ತು.

ಈ ಕುರಿತು ಪ್ರಜಾವಾಣಿ ನ.23 ರಂದು ‘ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಕ್ಕೆ ಬಯಲೇ ಗತಿ’ ತಲೆಬರಹದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬಳಿಕ ಪ್ರಧಾನ ಜಿಲ್ಲಾ ಮತ್ತು ಸಷೆನ್ಸ್‌ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಅವರ ನಿರ್ದಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್‌ ಅವರು ಅಂದೇ ಶಾಲೆಗೆ ಭೇಟಿ ನೀಡಿ ಶೌಚಾಲಯ ಅವ್ಯವಸ್ಥೆ ಪರಿಶೀಲಿಸಿ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ 10ರ ವರೆಗೆ 305 ವಿದ್ಯಾರ್ಥಿನಿಯರು ಓದುತ್ತಿದ್ದು ಅವರಿಗೆ ಶೌಚಾಲಯದ ಕೊರತೆಯಾಗಿದ್ದರಿಂದ ಬಯಲಲ್ಲಿ ಶೌಚಕ್ಕೆ ಹೋಗಬೇಕಾಗಿತ್ತು.

ADVERTISEMENT

ನ್ಯಾಯಾಧೀಶರ ಸೂಚನೆ ಬಳಿಕ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿಯು ಒಂದು ವಾರದಲ್ಲಿ ಪ್ರೌಢಶಾಲೆಯಲ್ಲಿ ಶೌಚಾಲಯ ನಿರ್ಮಿಸಿ ಕಾಮಾಗಾರಿ ಪೂರ್ಣಗೊಳಿಸಿದೆ. ಶೌಚಾಲಯಕ್ಕೆ ನೀರು ಪೂರೈಕೆಗೆ ಬೋರ್‌ವೆಲ್‌ಗೆ ಮೋಟರ್ ಅಳವಡಿಸಿ ಪೈಪ್‌ಲೈನ್ ಕಾಮಗಾರಿ ಮಾಡಲಾಗಿದೆ.

‘ನಿತ್ಯ ಶೌಚಾಲಯ ಇಲ್ಲದೇ ಪರದಾಡುವಂತಾಗಿತ್ತು. ಯಾರೂ ಶೌಚಾಲಯ ಸಮಸ್ಯೆ ಬಗೆಹರಿಸಲು ಮುಂದಾಗಿರಲಿಲ್ಲ. ಪ್ರಜಾವಾಣಿ ವರದಿ ಪ್ರಕಟಿಸಿದ ಬಳಿಕ ನಮ್ಮ ಶಾಲೆಯಲ್ಲಿ ಶೌಚಾಲಯ ನಿರ್ಮಾಣವಾಗಿದೆ. ಪತ್ರಿಕೆಗೆ ಧನ್ಯವಾದಗಳು’ ಎಂದು ವಿದ್ಯಾರ್ಥಿನಿಯರು ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.