ಕುಷ್ಟಗಿ: ಮಕ್ಕಳಲ್ಲಿ ಕೀಳರಿಮೆ ಬೆಳೆಯದಂತೆ ಮತ್ತು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.
ಇಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮಕ್ಕಳು ಸದಾ ಶಿಕ್ಷಕರ ನಡೆಯನ್ನು ಅನುಕರಿಸುತ್ತಾರೆ. ಹೀಗಾಗಿ ಮೊದಲು ಶಿಕ್ಷಕರು ದುಶ್ಚಟಗಳಿಂದ ದೂರ ಉಳಿದರೆ, ಮಕ್ಕಳಲ್ಲಿ ಸಕಾರಾತ್ಮಕ ಆಲೋಚನೆಗಳು ಬೆಳೆಯುತ್ತವೆ. ಬಹುಸಂಸ್ಕೃತಿ, ಆಚಾರ, ವಿಚಾರಗಳಿಂದ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ಭಾರತದ ವೈವಿಧ್ಯಮಯ ಪರಪಂರೆಯನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕು ಎಂದು ಹೇಳಿದರು.
‘ತುಂಗಭದ್ರಾ ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ ಮಾತನಾಡಿ, ‘ಶಾಲಾ ಹಂತದಲ್ಲಿ ಮಕ್ಕಳಲ್ಲಿನ ಪ್ರತಿಭೆ, ಕಲಿಕೆಯಲ್ಲಿನ ಉತ್ಸಾಹಗಳನ್ನು ಗುರುತಿಸಿ ಪ್ರೋತ್ಸಾಹಿಸಿ, ಅವಕಾಶ ಕಲ್ಪಿಸಿದರೆ ಭವಿಷ್ಯದಲ್ಲಿ ಅವರು ಉತ್ತಮ ಪ್ರಜೆಗಳಾಗಿ ಬದುಕು ರೂಪಿಸಿಕೊಳ್ಳುತ್ತಾರೆ’ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಮಾತನಾಡಿ, ‘ಪ್ರತಿಭಾ ಕಾರಂಜಿ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.
ಪುರಸಭೆ ಸದಸ್ಯ ವಸಂತ ಮೇಲಿನಮನಿ, ಶಿಕ್ಷಕ ಮಲ್ಲಪ್ಪ ಕುದರಿ ಇತರರು ಮಾತನಾಡಿದರು. ತಾ.ಪಂ ಯೋಜನಾ ನಿರ್ದೇಶಕಿ ಸುವರ್ಣ, ಡಯಟ್ ಉಪನ್ಯಾಸಕ ರಾಜೇಂದ್ರ ಬೆಳ್ಳಿ, ದೈಹಿಕ ಶಿಕ್ಷಣಾಧಿಕಾರಿ ಎಂ.ಸರಸ್ವತಿ, ಶಿವಾನಂದ, ನಿಂಗಪ್ಪ ಗುನ್ನಾಳ, ನೀಲನಗೌಡ ಹೊಸಗೌಡ್ರ, ಎಂ.ಎಂ. ಗೊಣ್ಣಾಗರ, ನಿಂಗನಗೌಡ ಪಾಟೀಲ, ಜಗದೀಶ ಸೂಡಿ, ಎಸ್.ಜಿ. ಕಡೆಮನಿ, ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ತುಮ್ಮರಗುದ್ದಿ, ಶರಣಪ್ಪ ವಡ್ಡರ, ಶ್ರೀಧರ ದೇಸಾಯಿ ಸೇರಿ ಅನೇಕ ಪ್ರಮುಖರು ಹಾಜರಿದ್ದರು. ಬಿಆರ್‌ಸಿ ಸಮನ್ವಯಾಧಿಕಾರಿ ಎಂ.ಜಗದೀಶಪ್ಪ ಸ್ವಾಗತಿಸಿದರು. ತಾಲ್ಲೂಕಿನ 20 ಕ್ಲಸ್ಟರ್‌ಗಳ ಮಟ್ಟದಲ್ಲಿನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ತಡವಾಗಿ ಕಾರ್ಯಕ್ರಮ ಆರಂಭ: ಬೆಳಿಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ವೇದಿಕೆ ಕಾರ್ಯಕ್ರಮ 12 ಗಂಟೆಗೆ ಆರಂಭಗೊಂಡಿತು. ಧ್ವನಿವರ್ಧಕದ ಅವ್ಯವಸ್ಥೆಯಿಂದ ಯಾರು ಏನು ಮಾತನಾಡಿದರು ಎಂಬುದೇ ತಿಳಿಯದೆ ಮಕ್ಕಳು, ಶಿಕ್ಷಕರು ಗದ್ದಲದಲ್ಲಿ ಮುಳುಗಿದ್ದರು. 1.30ಕ್ಕೆ ವೇದಿಕೆ ಕಾರ್ಯಕ್ರಮ ಮುಗಿದು ಮಕ್ಕಳು ಊಟ ಮುಗಿಸಿದ ನಂತರ ಸ್ಪರ್ಧೆಗಳು ಆರಂಭಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.