ADVERTISEMENT

ಕನಕಗಿರಿ: ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ

ಕನಕಗಿರಿ: ಸಂತೆ ಮಾರುಕಟ್ಟೆಯಲ್ಲಿ ಗ್ರಾಹಕರಿಗಾಗಿ ಕಾದು ಕುಳಿತ ರೈತರು

ಮೆಹಬೂಬ ಹುಸೇನ
Published 14 ಮಾರ್ಚ್ 2024, 5:38 IST
Last Updated 14 ಮಾರ್ಚ್ 2024, 5:38 IST
ಕನಕಗಿರಿಯ ಸಂತೆ ಮಾರುಕಟ್ಟೆಯಲ್ಲಿ ಗ್ರಾಹಕರಿಗಾಗಿ ಕಾದು ಕುಳಿತಿದ್ದ ರೈತರು
ಕನಕಗಿರಿಯ ಸಂತೆ ಮಾರುಕಟ್ಟೆಯಲ್ಲಿ ಗ್ರಾಹಕರಿಗಾಗಿ ಕಾದು ಕುಳಿತಿದ್ದ ರೈತರು   

ಕನಕಗಿರಿ: ಎರಡು–ಮೂರು ತಿಂಗಳುಗಳ ಹಿಂದೆ ಕೆಜಿಗೆ ₹100 ಗೆ ಮಾರಾಟವಾಗಿದ್ದ ಈರುಳ್ಳಿ ಬೆಲೆ ಕಳೆದ ತಿಂಗಳಿಂದಲೂ ಪಾತಾಳಕ್ಕೆ ಕುಸಿದಿದೆ. ರೈತರ ಕಣ್ಣಲ್ಲಿ ನೀರು ತರಿಸಿದೆ.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಬುಧವಾರ ನಡೆದ ಸವಾಲಿನಲ್ಲಿ ಈರುಳ್ಳಿ ಖರೀದಿಸಲು ವರ್ತಕರು ಬರಲಿಲ್ಲ. ಕಳೆದ ಶುಕ್ರವಾರ ಒಂದು ಕ್ವಿಂಟಲ್ ಈರುಳ್ಳಿ ₹1,500 ಗೆ ಮಾರಾಟವಾಗಿದ್ದರೆ ಇಂದು ಕೆಜಿಗೆ ₹12 ಗೆ ಮಾರಾಟವಾಯಿತು. ರೈತರು ತಾವು ತಂದಿದ್ದ ಈರುಳ್ಳಿ ಚೀಲದ ಮೇಲೆ ಕುಳಿತು ವರ್ತಕರು ಹಾಗೂ ಗ್ರಾಹಕರಿಗಾಗಿ ಕಾದರು.

ಕೊಪ್ಪಳ ತಾಲ್ಲೂಕಿನ ಇಂದರಗಿ, ಚಿಲವಾಡಗಿ, ಕನಕಗಿರಿ ಪಟ್ಟಣದ ರೈತಾಪಿ ವರ್ಗ ಸೇರಿದಂತೆ ತಾಲ್ಲೂಕಿನ ಅಡವಿಬಾವಿ ಚಿಕ್ಕತಾಂಡಾ, ಅಡವಿಬಾವಿ ದೊಡ್ಡ ತಾಂಡಾ, ಚಿಕ್ಕ ಮಾದಿನಾಳ, ಮುಸಲಾಪುರ ಸೇರಿದಂತೆ ಇತರೆ ಗ್ರಾಮಗಳ ಹೆಚ್ಚಿನ ರೈತರು ಈರುಳ್ಳಿ ಬೆಳೆದ ಪರಿಣಾಮ ದರ ಕುಸಿದಿದೆ.

ADVERTISEMENT

ಬಾಕ್ಸ್ ಬದನೆಕಾಯಿಗೆ ₹50: ಕಳೆದ ತಿಂಗಳು ಒಂದು ಬಾಕ್ಸ್ ಬದನೆಕಾಯಿಗೆ (18 ಕೆಜಿ) ₹300 ರಿಂದ ಆರಂಭವಾಗಿ ₹600 ಗೆ ಮಾರಾಟವಾಗಿದ್ದ ಬದನೆಕಾಯಿಯನ್ನು ಬುಧವಾರ ಮಾರುಕಟ್ಟೆಯಲ್ಲಿ ಖರೀದಿಸುವವರಿರಲಿಲ್ಲ. ರೈತರು ತಂದಿದ್ದ ಹತ್ತಾರು ಬಾಕ್ಸ್ ಬದನೆಕಾಯಿ ಹಾಗೆ ಉಳಿದುಕೊಂಡಿತ್ತು.

ಕಮಿಷನ್ ಏಜೆಂಟರು ಒಂದು ಬಾಕ್ಸ್ ಬದನೆಕಾಯಿ ಮಾರಾಟಕ್ಕೆ ₹10 ರೂಪಾಯಿ ನೀಡುವ ಕುರಿತು ಸವಾಲು ಕೂಗಿದರು. ಕೊನೆಗೆ ₹50 ಗೆ ಒಂದು ಬಾಕ್ಸ್ ಬದನೆಕಾಯಿ ಕೊಡಲಾಗುವುದು ಅಂತ ಘೋಷಣೆ ಮಾಡಿದರೂ ಖರೀದಿಸುವವರಿರಲಿಲ್ಲ. ಅನಿವಾರ್ಯ ಎನ್ನುವಂತೆ ತಂದ ಬದನೆಕಾಯಿ ಬಾಕ್ಸ್‌ಗಳಲ್ಲಿ ಬಾಡಿಗೆ ವಾಹನದಲ್ಲಿ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮನೆಗೆ ತೆಗೆದುಕೊಂಡು ಹೋದರು.

ಹೊಲದಲ್ಲಿ ಬೆಳೆದ ಬದನೆಕಾಯಿ ಕೀಳಲು ಒಂದು ಕೂಲಿ ಆಳಿಗೆ ₹250 ಕೂಲಿ ಹಾಗೂ ₹50 ವಾಹನ ಬಾಡಿಗೆ ನೀಡಿ ಕರೆದುಕೊಂಡು ಬರಬೇಕಾಗುತ್ತದೆ. ಇಲ್ಲಿ ನೋಡಿದರೆ ಬದನೆಕಾಯಿಗೆ ಬೆಲೆ ಸಿಗುತ್ತಿಲ್ಲ. ಕನಿಷ್ಠ ಕೂಲಿ ಆಳುಗಳಿಗೆ ಹಣ ನೀಡುವಷ್ಟೂ ದರ ಸಿಕ್ಕಿಲ್ಲ ಎಂದು ಅಡವಿಬಾವಿ ಚಿಕ್ಕತಾಂಡಾದ ರೈತ ಶರಣಪ್ಪ ಬಳೂಟಗಿ ಅಳಲು ತೋಡಿಕೊಂಡರು.

ಚೌಳಿಕಾಯಿ ಮನೆಗೆ: ಮಾರುಕಟ್ಟೆಯಲ್ಲಿ ಚೌಳಿಕಾಯಿ ಬೆಳೆದ ರೈತನ ಪಾಡು ಹೇಳತೀರದಾಗಿತ್ತು. ತಾಲ್ಲೂಕಿನ ಬೈಲಕ್ಕುಂಪುರ ಗ್ರಾಮದ ರೈತ ಶಾಮಣ್ಣ ಅವರು ತಂದಿದ್ದ ಆರೇಳು ಚೀಲ (ಒಂದು ಚೀಲದಲ್ಲಿ 16 ಕೆಜಿ) ಚೌಳಿಕಾಯಿಯನ್ನು ಮನೆಗೆ ತೆಗೆದುಕೊಂಡು ಹೋದರು. ಒಂದು ಕೆಜಿಗೆ ₹35 ದರ ಸಿಕ್ಕಿದ್ದ ಚೌಳಿಯನ್ನು ಕೆಜಿಗೆ ₹10 ಗೆ ನೀಡುವುದಾಗಿ ಕೂಗಿದರೂ ಗ್ರಾಹಕರು ಖರೀದಿಗೆ ಮುಂದೆ ಬರಲಿಲ್ಲ. ಹೀಗಾಗಿ ಮನೆಗಳಿಗೆ ತೆಗೆದುಕೊಂಡು ಹೋಗಿ ದನಕರುಗಳಿಗೆ ಹಾಕುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟೊಮೊಟೊ ದರ ಸಹ ಸ್ವಲ್ಪ ಮಟ್ಟಿಗೆ ಕುಸಿದಿರುವುದು ಕಂಡುಬಂತು. ಹಣ್ಣುಗಳ ಗುಣಮಟ್ಟದ ಮೇಲೆ ಒಂದು ಬಾಕ್ಸ್‌ಗೆ ₹50 ಯಿಂದ ₹150 ವರೆಗೆ ಮಾರಾಟವಾದವು. ₹150 ಗೆ ಒಂದು ಚೀಲ ಮಾರಾಟವಾಗಿದ್ದ ಹೂಕೋಸು ₹10 ಗೆ ಮಾರಾಟವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.