ADVERTISEMENT

ಗಂಗಾವತಿ | ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸಿ

ಆನೆಗೊಂದಿ; 15ನೇ ಶತಮಾನದ ಕೋಟೆಯ ಗೋಡೆ ಕುಸಿ

ಶಿವಕುಮಾರ್ ಕೆ
Published 31 ಜುಲೈ 2020, 19:30 IST
Last Updated 31 ಜುಲೈ 2020, 19:30 IST
ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಮೇಗೋಟ ವಾಲಿಕಿಲ್ಲಾ ದೇಗುಲದ ಹತ್ತಿರ ಇರುವ 15 ನೇ ಶತಮಾನದಲ್ಲಿ ನಿರ್ಮಿಸಿದ್ದ ಆನೆ ಮತ್ತು ಒಂಟೆ ಸಾಲಿನ ಕೋಟೆಯ ಗೋಡೆ ಕುಸಿದಿರುವುದು
ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಮೇಗೋಟ ವಾಲಿಕಿಲ್ಲಾ ದೇಗುಲದ ಹತ್ತಿರ ಇರುವ 15 ನೇ ಶತಮಾನದಲ್ಲಿ ನಿರ್ಮಿಸಿದ್ದ ಆನೆ ಮತ್ತು ಒಂಟೆ ಸಾಲಿನ ಕೋಟೆಯ ಗೋಡೆ ಕುಸಿದಿರುವುದು   

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಕ್ಷೇತ್ರದ ಸುತ್ತಮುತ್ತ ಐತಿಹಾಸಿಕ ಸ್ಥಳಗಳು, ವಿಜಯನಗರ ಕಾಲದ ಸ್ಮಾರಕಗಳು ಸಾಕಷ್ಟು ಇವೆ. ಆದರೆ, ರಾಜ್ಯ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಸ್ಮಾರಕಗಳು ಹಾಳಾಗುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ.

ವಿಶ್ವ ಪರಂಪರೆಯ ತಾಣದ ಒಂದು ಭಾಗವಾಗಿರುವ ಆನೆಗೊಂದಿ ಭೌಗೋಳಿಕವಾಗಿ, ಐತಿಹಾಸಿಕವಾಗಿ ಮಹತ್ವ ಪಡೆದಿದೆ. ಆದರೆ, ಸ್ಮಾರಕಗಳ ಸಂರಕ್ಷಣೆ ಕಾರ್ಯ ವ್ಯವಸ್ಥಿತವಾಗಿ ಇದುವರೆಗೂ ಆಗಿಲ್ಲ. ಅವುಗಳನ್ನು ಮೂಲರೂಪದಲ್ಲಿ ಉಳಿಸುವಂತ ಕೆಲಸ ಆಗಬೇಕಾಗಿದೆ ಎಂಬುದು ಸ್ಥಳೀಯರ ಒತ್ತಾಯ.

ಕೆಲವು ಸ್ಮಾರಕಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಆದರೆ, ಅದು ಸರಿಯಾದ ರೀತಿಯಲ್ಲಿ ಆಗಿಲ್ಲ. ಕಳಪೆ ಗುಣಮಟ್ಟದಿಂದ ಆಗಿರುವುದಕ್ಕೆ ಆನೆಗೊಂದಿಯ ಮೇಗೋಟ ವಾಲಿಕಿಲ್ಲಾ ದೇಗುಲದ ಹತ್ತಿರ ಇರುವ 15 ನೇ ಶತಮಾನದಲ್ಲಿ ನಿರ್ಮಿಸಿದ್ದ ಆನೆ ಮತ್ತು ಒಂಟೆ ಸಾಲಿನ ಕೋಟೆಯ ಗೋಡೆ ಕುಸಿದಿರುವುದು ಅದಕ್ಕೆ ಸಾಕ್ಷಿ. ₹ 2 ಕೋಟಿ ವೆಚ್ಚದಲ್ಲಿ ಕೋಟೆಯ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕಳೆದ ವಾರ ಸುರಿದ ಮಳೆಗೆ ಕೋಟೆಯ ಗೋಡೆ ಕುಸಿದಿದೆ.

ADVERTISEMENT

ಕಳೆದ ವರ್ಷದ ಮಳೆಗೆ ರಾಂಪುರದ ಅಗಸಿಯೂ ಕುಸಿದಿತ್ತು. ಅದೇ ರೀತಿ ಗವಿ ರಂಗನಾಥ ದೇವಾಲಯ, ಮಲ್ಲೇಶ್ವರ ದೇವಾಲಯ, ಹಗ್ಗಮಾರು ಆಂಜನೇಯ ದೇವಾಲಯ, ಗದ್ದೆ ವೀರಭದ್ರೇಶ್ವರ ದೇವಾಲಯ, ಆನೆಸಾಲು ಕೋಟೆ, ಸುದರ್ಶನ ಚಕ್ರ ದೇವಾಲಯ, ಚಿಕ್ಕರಾಂಪುರ ವೀರಭದ್ರೇಶ್ವರ, ಸರಸ್ವತಿ ಮಠ ಸೇರಿದಂತೆ ಚಿಂಚಲಕೋಟೆ ನಾಗನಾಥ ದೇವಾಲಯವನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ.

ಚಿಂಚಲಕೋಟೆಯ ದೇಗುಲವನ್ನು ನಿಧಿಗಳ್ಳರು ಹಾಳು ಮಾಡಿದ್ದಾರೆ. ಜತೆಗೆ ಕೋಟೆಯ ಒಳಭಾಗದ ಪ್ರದೇಶವನ್ನು ಒತ್ತುವರಿ ಕೂಡ ಮಾಡಲಾಗಿದೆ.

‘ಆನೆಗೊಂದಿಯ ಸುತ್ತಮುತ್ತ ಇರುವ ಎಲ್ಲ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಕಾರ್ಯವನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕು. ಇಲ್ಲದೆ ಹೋದರೆ, ಸ್ಮಾರಕಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಸಾಧ್ಯತೆ ಇದೆ’ ಎಂದು ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್‌ ಕಳವಳ ವ್ಯಕ್ತಪಡಿಸಿದರು.

‘ಆನೆಸಾಲು ಕೋಟೆಯ ದುರಸ್ತಿ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ. ದುರಸ್ತಿ ಮಾಡಿದ ಕೆಲ ತಿಂಗಳಲ್ಲೇ ಗೋಡೆ ಕುಸಿದಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸ್ಮಾರಕಗಳನ್ನು ರಕ್ಷಣೆ ಮಾಡಬೇಕು’ ಎಂದು ಸ್ಥಳೀಯರಾದ ರಾಜೇಶ್ವರಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಪ್ರಾಚ್ಯ ವಸ್ತು ಇಲಾಖೆಯ ಸಹಾಯಕ ಎಂಜಿನಿಯರ್‌ ಕುಬೇರಪ್ಪ, ‘ಯಾವುದೇ ರೀತಿಯಲ್ಲಿ ಕಳಪೆ ಕಾಮಗಾರಿ ನಡೆದಿಲ್ಲ. ಕೋವಿಡ್‌ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸದ್ಯ ನಿಲ್ಲಿಸಲಾಗಿದ್ದು, ಶೀಘ್ರ ಪುನರ್‌ ನಿರ್ಮಾಣ ಮಾಡಲಾಗುವುದು. ಜತೆಗೆ ಆನೆಗೊಂದಿ ಭಾಗದ ಸ್ಮಾರಕಗಳ ರಕ್ಷಣೆಗೂ ಒತ್ತು ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.