ADVERTISEMENT

ನೀಟ್‌, ನೆಟ್‌ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 4:42 IST
Last Updated 5 ಜುಲೈ 2024, 4:42 IST
ಕೊಪ್ಪಳದಲ್ಲಿ ಬುಧವಾರ ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಕೊಪ್ಪಳದಲ್ಲಿ ಬುಧವಾರ ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ಕೊಪ್ಪಳ: ನೀಟ್‌ ಮತ್ತು ನೆಟ್‌ ಪರೀಕ್ಷೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ರದ್ದುಪಡಿಸಿ ರಾಜ್ಯಮಟ್ಟದಲ್ಲಿಯೇ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ ಎಐಡಿಎಸ್ಒ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. 

ಅಶೋಕ ವೃತ್ತದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ, ‘ನಮ್ಮ ಸಂಘಟನೆ ಅಖಿಲ ಭಾರತ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ದೇಶವ್ಯಾಪಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ನೀಟ್ ಯುಜಿಸಿಯಲ್ಲಿನ ಭ್ರಷ್ಟಾಚಾರವು ಹೊರ ಬಿದ್ದಿರುವ ಬೆನ್ನಲ್ಲೇ, ನೆಟ್‌ ಪರೀಕ್ಷೆಯನ್ನು ಶಿಕ್ಷಣ ಸಚಿವಾಲಯ ರದ್ದುಗೊಳಿಸಿದೆ. ಪರೀಕ್ಷೆ ನಡೆದ ಮರುದಿನವೇ ಈ ನಿರ್ಧಾರ ಕೈಗೊಂಡಿದೆ’ ಎಂದರು.

‘ನೀಟ್ ಮತ್ತು ನೆಟ್ ಪರೀಕ್ಷೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಟ್ಟಲೆ ಈ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ನೀಟ್ ಪರೀಕ್ಷೆಯಲ್ಲಿ ನಡೆದ ಗಂಭೀರ ಪ್ರಮಾಣದ ಅವ್ಯವಹಾರವನ್ನು ಚಿಕ್ಕದೆಂದು ಬಿಂಬಿಸಲು ಶಿಕ್ಷಣ ಸಚಿವಾಲಯ ಮತ್ತು ಎನ್‌ಟಿಎ ಪ್ರಯತ್ನಿಸುತ್ತಲೇ ಇವೆ. ನೆಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರಗಳು ಈ ಪ್ರಕರಣದ ತೀವ್ರತೆಯನ್ನು ಪ್ರತಿಬಿಂಬಿಸುತ್ತಿವೆ’ ಎಮದರು.

ADVERTISEMENT

‘ಪ್ರಕರಣ ತಾರ್ಕಿಕ ಅಂತ್ಯ ತಲುಪುವವರೆಗೂ ನೀಟ್ ಕೌನ್ಸಿಲಿಂಗ್ ತಡೆಹಿಡಿಯಬೇಕು. ನೆಟ್ ಮರುಪರೀಕ್ಷೆ ದಿನಾಂಕ ಕೂಡಲೇ ಪ್ರಕಟಿಸಿ ನೇರವಾಗಿ ಯುಜಿಸಿಯೇ ಪರೀಕ್ಷೆ ನಡೆಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಸಂಘಟನೆಯ ಪದಾಧಿಕಾರಿಗಳಾದ ಪ್ರದೀಪ್, ವೆಂಕಟೇಶ್, ಕೋಟೇಶ್, ಶ್ರೀಧರ್, ಮೆಹರಾಜ್, ಮಂಜುನಾಥ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.