ADVERTISEMENT

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 16:07 IST
Last Updated 29 ಫೆಬ್ರುವರಿ 2024, 16:07 IST
ಕೊಪ್ಪಳದಲ್ಲಿ ಗುರುವಾರ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು
ಕೊಪ್ಪಳದಲ್ಲಿ ಗುರುವಾರ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು   

ಕೊಪ್ಪಳ: ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. 

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪಕ್ಷದ ನಾಯಕ ಶರಣಪ್ಪ ಉದ್ಬಳ್ ‘ಜಿಲ್ಲೆಯಲ್ಲಿ ತೀವ್ರವಾದ ಬರಗಾಲವಿದೆ. ರೈತರು, ಕೃಷಿಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರವಾಗಲಿ ಬರ ಪರಿಹಾರ ನೀಡಿಲ್ಲ. ತೀವ್ರ ಬರಗಾಲವಿರುವುದರಿಂದ ಬರಗಾಲ ಕಾಮಗಾರಿ ಆರಂಭಿಸಿ ಕೂಲಿ ಕಾರ್ಮಿಕರ ಗುಳೆ ತಪ್ಪಿಸಬೇಕು. ಜಾನುವಾರುಗಳಿಗೆ ಮೇವು ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಜನ ಕುಡಿಯುವ ನೀರಿಗೆ ಹಾಹಾಕಾರ ಪಡಬೇಕಾಗಿದೆ. ಕೊಪ್ಪಳ ನಗರದಲ್ಲಿ ಈಗ ಐದು ದಿನಕೊಮ್ಮೆ ನೀರು ಬಿಡಲಾಗುತ್ತಿದೆ. ಹಳ್ಳಿಗಳ ನೀರಿನ ವ್ಯವಸ್ಥೆಯಂತೂ ಅಯೋಮಯವಾಗಿದೆ. ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಕಸ ವಿಲೇವಾರಿ, ಚರಂಡಿ ಸ್ವಚ್ಛತೆ, ರಾಜಕಾಲುವೆಗಳ ಸ್ವಚ್ಛತೆ ನಿರಂತರವಾಗಿ ನಡೆಯುತ್ತಿಲ್ಲ. ಈ ಎಲ್ಲ ಕೆಲಸಗಳನ್ನು ಆದ್ಯತೆ ಮೇಲೆ ಮಾಡಬೇಕು’ ಎಂದರು.

ADVERTISEMENT

ಎಸ್‌ಯುಸಿಐ ಪಕ್ಷದ ಜಿಲ್ಲಾ ಮುಖಂಡ ಶರಣು ಗಡ್ಡಿ ‘ಜಿಲ್ಲಾಸ್ಪತ್ರೆಯಲ್ಲಿ  ತಜ್ಞವೈದ್ಯರ ನೇಮಕ ಮಾಡಬೇಕು. ಸಕಲ ಚಿಕಿತ್ಸೆ ಹಾಗೂ ಔಷಧಿಗಳು ಉಚಿತವಾಗಿ ಎಲ್ಲರಿಗೂ ನಿರಂತರವಾಗಿ ಸಿಗುವಂತಾಗಬೇಕು. ಅವೈಜ್ಞಾನಿಕವಾಗಿ  ಹಾಕಿರುವ ಹಿಟ್ನಾಳ್ ಟೋಲ್ ಪ್ಲಾಜಾ ತೆರವು ಮಾಡಬೇಕು. ಜಿಲ್ಲೆಯ ಗ್ರಾಮೀಣ ಭಾಗದ ಶಾಲಾ ಕಾಲೇಜುಗಳಲ್ಲಿ ಬೋಧಕರ ಕೊರತೆ ತೀವ್ರವಾಗಿದ್ದು, ಅದನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ಸದಸ್ಯರಾದ ಶರಣು ಪಾಟೀಲ್, ಗಂಗರಾಜ, ದೇವರಾಜ, ಸಿದ್ದಲಿಂಗರೆಡ್ಡಿ, ಶಾರದಾ, ಮಂಜುಳಾ, ಮೌನೇಶ, ಸಾರ್ವಜನಿಕರಾದ ಮುದಿಯಪ್ಪ, ಉಮೇಶ್, ದುರ್ಗಮ್ಮ, ದ್ಯಾಮಣ್ಣ ರೇಣುಕಮ್ಮ, ಯಮನೂರಪ್ಪ, ವಿರೂಪಾಕ್ಷಿ, ಬಸರಾಜಪ್ಪ, ಶಂಕ್ರಮ್ಮ ಬಸವರಾಜಪ್ಪ, ಮಂಗಳೇಶ್ ರಾಠೋಡ್, ಅಬ್ದುಲ್ ವಾಹಿದ್ ಮುದಿಯಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.