ಗಂಗಾವತಿ: ದೇವದಾಸಿ ಮಹಿಳೆಯರ ಮಾಸಾಶನ ಮತ್ತು ಸಹಾಯಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘಟನೆ ಕಾರ್ಯಕರ್ತರು ಮಂಗಳವಾರ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾಧ್ಯಕ್ಷೆ ಜಿ.ಹುಲಿಗೆಮ್ಮ ಮಾತನಾಡಿ ‘ಹಲವು ವರ್ಷಗಳಿಂದ ದೇವದಾಸಿ ಮಹಿಳೆಯರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಚುನಾವಣೆ ಬಂದಾಗ ಮಾತ್ರ ಸರ್ಕಾರಗಳು, ಜನಪ್ರತಿನಿಧಿಗಳು ಹುಸಿ ಭರವಸೆಗಳು ನೀಡಿ, ಚುನಾವಣೆ ಬಳಿಕ ನಮ್ಮ ಬೇಡಿಕೆಗಳನ್ನು ಮೂಲೆಗೆ ಹಾಕಿ, ದೇವದಾಸಿ ಮಹಿಳೆಯರಿಗೆ ಅನ್ಯಾಯ ಮಾಡಲಾಗುತ್ತಿದೆ. ಮಾಸಾಶನ ಹೆಚ್ಚು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ’ ಎಂದು ದೂರಿದರು.
‘ಹಲವು ತಿಂಗಳಿಂದ ಹೆಚ್ಚುವರಿ ಮಾಸಾಶನ ನೀಡದೆ ಬಾಕಿ ಉಳಿದುಕೊಂಡಿದೆ. ಇನ್ನೂ ಗಣತಿ ಪಟ್ಟಿಯಿಂದ ಹೋಗಿರುವ ದೇವದಾಸಿ ಮಹಿಳೆಯರನ್ನು ಗಣತಿ ಮಾಡಬೇಕೆಂದು ಹಲವು ಬಾರಿ ಮನವಿ ಮಾಡಲಾಗಿದೆ, ಈವರೆಗೆ ಪ್ರಯೋಜನ ಕಂಡಿಲ್ಲ. 2021-22ನೇ ಸಾಲಿನಲ್ಲಿ ಗುರುತಿಸಲಾದ ದೇವದಾಸಿ ಮಹಿಳೆಯರು ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದು, ಇವರೆಗೆ ಸಹಾಯಧನ ಬಿಡುಗಡೆಯಾಗಿಲ್ಲ. ಹಾಗಾಗಿ ದೇವದಾಸಿ ಮಹಿಳೆಯರ ಜೀವನೋಪಾಯಕ್ಕಾಗಿ ಕೃಷಿ ಮಾಡಲು ತಲಾ 5 ಎಕರೆ ನೀರಾವರಿ ಜಮೀನು ನೀಡುವ ಜತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ನಿರುಪಾದಿ ಬೆಣಕಲ್, ಹುಸೇನಪ್ಪ, ಮಂಜುನಾಥ ಡಗ್ಗಿ, ಗೌರಮ್ಮ, ಮಹಾದೇವಿ, ರೇಖಮ್ಮ, ರಾಮಮ್ಮ, ಅಂಬಮ್ಮ, ದುರ್ಗಮ್ಮ, ಯಮನಮ್ಮ, ತಾಯಮ್ಮ, ಕಮಲಮ್ಮ ಸೇರಿ ಮಾಜಿ ದೇವದಾಸಿ ಮಹಿಳೆಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.