ADVERTISEMENT

ಕುಷ್ಟಗಿ | ಸ್ವಯಂ ಸೇವಾ ಸಂಸ್ಥೆಗೆ ಬಿಸಿಯೂಟ ಜವಾಬ್ದಾರಿಗೆ ವಿರೋಧ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 14:40 IST
Last Updated 25 ಅಕ್ಟೋಬರ್ 2024, 14:40 IST
ಕುಷ್ಟಗಿ ತಾಲ್ಲೂಕು ಪಂಚಾಯಿತಿ ಬಳಿ ನಡೆದ ಅಕ್ಷರ ದಾಸೋಹ ನೌಕರರ ಧರಣಿ ಸ್ಥಳಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿದರು
ಕುಷ್ಟಗಿ ತಾಲ್ಲೂಕು ಪಂಚಾಯಿತಿ ಬಳಿ ನಡೆದ ಅಕ್ಷರ ದಾಸೋಹ ನೌಕರರ ಧರಣಿ ಸ್ಥಳಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿದರು   

ಕುಷ್ಟಗಿ: ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಕ್ಷರದಾಸೋಹ ಯೋಜನೆಯಲ್ಲಿನ ಮಧ್ಯಾಹ್ನದ ಬಿಸಿಯೂಟದ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗೆ ವಹಿಸಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಅಕ್ಷರದಾಸೋಹ ನೌಕರರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ಧರಣಿ ನಡೆಸಿದ ಬಿಸಿಯೂಟ ಅಡುಗೆದಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಬಿಸಿಯೂಟದ ಜವಾಬ್ದಾರಿ ತಮಗೆ ಬೇಡ ಎಂದು ಶಿಕ್ಷಕರು ಮನವಿ ಸಲ್ಲಿಸಿದ್ದನ್ನು ನೆಪ ಮಾಡಿಕೊಂಡು ಅಧಿಕಾರಿಗಳು ಖಾಸಗಿ ಸಂಸ್ಥೆಗೆ ಬಿಸಿಯೂಟದ ಹೊಣೆಯನ್ನು ವಹಿಸಲು ಮುಂದಾಗಿರುವುದು ಸರಿಯಲ್ಲ. ಇದು ಕರ್ತವ್ಯದಲ್ಲಿ ತೊಡಗಿದ ಅಡುಗೆ ಸಿಬ್ಬಂದಿಯನ್ನು ಬೀದಿಗೆ ತಳ್ಳುವುದು ಸರಿಯಲ್ಲ. ಶೀಘ್ರ ಖಾಸಗಿ ಸಂಸ್ಥೆಗೆ ವಹಿಸುವ ನಿರ್ಧಾರ ಕೈ ಬಿಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

ನಂತರ ಸ್ಥಳಕ್ಕೆ ಬಂದ ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ,‘ಒತ್ತಡದಲ್ಲಿ ಕೆಲಸ ನಿರ್ವಹಿಸುವುದರಿಂದ ಶೈಕ್ಷಣಿಕ ಪ್ರಗತಿಗೆ ಹಿನ್ನೆಡೆಯಾಗುತ್ತದೆ ಎಂದು ಶಿಕ್ಷಕರು ಬಿಸಿಯೂಟ ಯೋಜನೆಯಿಂದ ವಿಮುಕ್ತರನ್ನಾಗಿಸಲು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಅಕ್ಷರದಾಸೋಹ ಕೆಲಸಗಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ, ಅಕ್ಷರ ದಾಸೋಹ ಯೋಜನೆ ಪ್ರಭಾರ ಸಹಾಯಕ ನಿರ್ದೇಶಕ ಸೋಮನಗೌಡ ಪಾಟೀಲ, ಬಿಆರ್‌ಸಿ ಸಮನ್ವಯಾಧಿಕಾರಿ ಜಗದೀಶಪ್ಪ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ನಿರುಪಾದಿ, ಪ್ರಮುಖರಾದ ಆರ್‌.ಕೆ.ದೇಸಾಯಿ, ಕಲಾವತಿ ಮೆಣೆದಾಳ, ಕಾಸೀಂ ಸರ್ದಾರ, ಲಕ್ಷ್ಮಿದೇವಿ, ಹಲೀಮಾ, ಅನ್ನಪೂರ್ಣ, ರಂಗಪ್ಪ, ರೇಣುಕಾ, ಗಂಗಮ್ಮ, ಲಕ್ಷ್ಮಿ, ದೊಡನಗೌಡ ಪಾಟೀಲ, ಶಿವನಗೌಡ ಪಾಟೀಲ, ಮಲ್ಲೇಶಗೌಡ, ಹನುಮಂತ ನೀರಲೂಟಿ, ಶಾಂತಮ್ಮ, ಚಂದ್ರಕಲಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.