ಕಾರಟಗಿ: ಮಾದಿಗ ಸಮಾಜದ ನಿರಂತರ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿ, ರಾಜ್ಯ ಸರ್ಕಾರಕ್ಕೆ ಮೀಸಲಾತಿ ಜಾರಿಗೊಳಿಸುವ ಅಧಿಕಾರವಿದೆ ಎಂದಿದೆ. ರಾಜ್ಯ ಸರ್ಕಾರ ತಕ್ಷಣದಿಂದಲೇ ಒಳಮೀಸಲಾತಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಘಟಕ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು. ಬಳಿಕ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಎಂ. ಕುಮಾರಸ್ವಾಮಿಗೆ ಸಮಿತಿಯ ಮುಖಂಡರು ಮನವಿ ಸಲ್ಲಿಸಿದರು.
ವಿಶೇಷ ಎಪಿಎಂಸಿ ಆವರಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಹಳೆಯ ಬಸ್ ನಿಲ್ದಾಣ, ಆರ್‌ಜಿ ರಸ್ತೆ ಮಾರ್ಗವಾಗಿ ಕನಕದಾಸ ವೃತ್ತದವರೆಗೆ ನಡೆಯಿತು. ಮಾನವ ಸರಪಳಿ ನಿರ್ಮಿಸಿ, ಒಳ ಮೀಸಲಾತಿಗೆ ಆಗ್ರಹಿಸುವ ಘೋಷಣೆಗಳನ್ನು ಕೂಗಲಾಯಿತು.
ಮುಖಂಡರಾದ ಅಂಬಣ್ಣ ಹರಿಗೋಲ, ಎಚ್.ಎನ್. ಬಡಿಗೇರ ಮಾತನಾಡಿ, ‘ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು ಒಳಮೀಸಲಾತಿ ಜಾರಿಗೆ ಮುಂದಾಗಬೇಕು. ವಿಳಂಬ ನೀತಿ ಅನುಸರಿಸಿ, ಪರ್ಯಾಯ ಕ್ರಮದ ಹೆಸರಲ್ಲಿ ಜಾರಿಯ ನಿರ್ಧಾರ ಮುಂದೂಡುವುದನ್ನು ಕೈಬಿಡಬೇಕು. ನಮ್ಮ ಹಕ್ಕಿಗಾಗಿ ನಿರಂತರ ಹೋರಾಟ ಮಾಡಲಾಗಿದ್ದು, ಜಾರಿ ವಿಳಂಬವಾದರೆ ರಾಜ್ಯದಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಸಿದರು.
‘ಹರಿಯಾಣದಲ್ಲಿ ಒಳಮೀಸಲಾತಿ ಜಾರಿಗೊಳಿಸಲಾಗಿದೆ. ತೆಲಂಗಾಣ ರಾಜ್ಯ ಸರ್ಕಾರ ಜಾರಿಗೆ ನಿರ್ಣಯ ಕೈಗೊಂಡು ಸಚಿವ ಸಂಪುಟದ ಉಪ ಸಮಿತಿ ರಚಿಸಿದೆ. 2 ತಿಂಗಳಲ್ಲಿ ಮೀಸಲಾತಿ ಜಾರಿಯ ಭರವಸೆ ನೀಡಿದೆ. ಅಲ್ಲಿಯವರೆಗೆ ನೇಮಕಾತಿಯನ್ನು ತಡೆಹಿಡಿಯಲಾಗಿದೆ. ಇದೇ ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸಬೇಕು. ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ಅಧಿಸೂಚನೆ ಕೈಬಿಡಬೇಕು. ಒಳ ಮೀಸಲಾತಿ ಜಾರಿಗೊಳಿಸಿದ ಬಳಿಕ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು. ಕೆಐಎಡಿಬಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ತಡೆಯಬೇಕು’ ಎಂದು ಒತ್ತಾಯಿಸಲಾಗಿದೆ.
ಕುಕನೂರು-ಇಟಗಿಯ ಮರುಳಸಿದ್ಧೇಶ್ವರ ಪುಣ್ಯಾಶ್ರಮದ ಶಿವಶರಣ ಗದಿಗೆಪ್ಪ ನೇತೃತ್ವ ವಹಿಸಿದ್ದರು. ಮೌನೇಶ ದಢೇಸೂಗೂರು ಮೊದಲಾದ ಜಾಕೀಯ ಮುಖಂಡರು ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡಿದ್ದರು.
ಸಮಿತಿಯ ಪ್ರಮುಖರಾದ ಲಕ್ಷ್ಮಣ, ವೀರೇಶ ವಕೀಲ, ಯಲ್ಲಪ್ಪ ಕಟ್ಟೀಮನಿ, ಶಿವಪ್ಪ ಮ್ಯಾಗಡೆಮನೆ, ಮರಿಸ್ವಾಮಿ ಪೂಜಾರಿ ಗುಂಡೂರ, ಚಿದಾನಂದಪ್ಪ ಚೌಡ್ಕಿ, ಮರಿಯಪ್ಪ ನಾಗನಕಲ, ದುರುಗಪ್ಪ ನಂದಾಪುರ, ಮುತ್ತಣ್ಣ ಹುಡಾ ಸಿದ್ದಾಪುರ, ದೊಡ್ಡ ಗಾಳೇಶ ಮ್ಯಗಡೆಮನೆ, ಜಮದಗ್ನಿ ಚೌಡಕಿ, ಪುರಸಭೆ ಸದಸ್ಯ ಆನಂದ ಎಂ., ಭೀಮೇಶ ಬೂದಗುಂಪಾ, ಮೌನೇಶ ಭಜರಂಗಿ, ದುರುಗೇಶ ಕೆಂಗೇರಿ, ಸಣ್ಣ ಗಾಳೇಶ ಇಂದಿರಾನಗರ, ಪರಶುರಾಮ ನಂದಿಹಳ್ಳಿ, ಸ್ವಾಮಿ ಬೂದಗುಂಪಾ, ಗಾದಿಲಿಂಗಪ್ಪ ಪನ್ನಾಪುರ, ಸಣ್ಣ ರಾಮಣ್ಣ ಹಳೆಕೇರಿ, ಶರಣಪ್ಪ ವಣಗೇರಿ ಸೋಮನಾಳ, ನೀಲಪ್ಪ ಗುಂಡೂರು ಉಪಸ್ಥಿತರಿದ್ದರು.
ತಾಲ್ಲೂಕಿನ ವಿವಿಧ ಗ್ರಾಮಗಳ ಸಮಾಜದವರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.