ADVERTISEMENT

ನನಗೇನೂ ಬೇಡ್ರಪ್ಪ, ಮಗನ್ ವಾಪಸ್ ತಂದುಕೊಡ್ರಿ: ಮೃತ PSI ಪರಶುರಾಮ್ ಪೋಷಕರ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 7:41 IST
Last Updated 4 ಆಗಸ್ಟ್ 2024, 7:41 IST
<div class="paragraphs"><p>ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿ ಮೃತ ಪಿಎಸ್ಐ ಪರಶುರಾಮ್ ಪೋಷಕರ ಆಕ್ರಂದನ</p></div>

ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿ ಮೃತ ಪಿಎಸ್ಐ ಪರಶುರಾಮ್ ಪೋಷಕರ ಆಕ್ರಂದನ

   

ಸೋಮನಾಳ: ‘ನಂಗೆ ಸರ್ಕಾರದಿಂದ ಪರಿಹಾರನೂ ಬೇಡ, ನೌಕ್ರಿನೂ ಬೇಕಿಲ್ಲ. ನೀವೆಲ್ಲ ಬಂದಿದ್ದೀರಿ, ನನ್ನ ಮಗನನ್ನೂ ಕರೆದುಕೊಂಡು ಬರ್ರೀ ಅಷ್ಟ ಸಾಕು’.

ಯಾದಗಿರಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಪಿಎಸ್ಐ ಪರಶುರಾಮ್ ಅವರ ತಾಯಿ ಗಂಗಮ್ಮ ಹಾಗೂ ತಂದೆ ಜನಕಮುನಿ ಅವರ ಕಣ್ಣೀರು ಸುರಿಸುತ್ತ ಆಡಿದ ಮಾತುಗಳು ಇವು‌.

ADVERTISEMENT

ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿ ನೆಲೆಸಿರುವ ಪರಶುರಾಮ್ ಅವರ ಪೋಷಕರು ಮಗನ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಭಾನುವಾರ ಬೆಳಿಗ್ಗೆಯಿಂದಲೇ ಸಾಂತ್ವನ ಹೇಳಲು ಬರುತ್ತಿರುವ ಪರಶುರಾಮ್ ‌ಅವರ‌ ಸ್ನೇಹಿತರು ಹಾಗೂ ಸಂಬಂಧಿಕರಿಗೆ 'ನನ್ನ ಮಗನನ್ನು ವಾಪಸ್ ತಂದು ಕೊಡ್ರಿ...' ಎಂದು ಅಂಗಲಾಚುತ್ತಿದ್ದಾರೆ.

ಪರಶುರಾಮ್ ಅವರಿಗೆ ಮಹಾದೇವಪ್ಪ ಹಾಗೂ ಹನುಮಂತಪ್ಪ ಎಂಬ ಇಬ್ಬರು ಸಹೋದರರು ಇದ್ದು, ಅವರು ಸೋಮನಾಳ ಗ್ರಾಮದಲ್ಲಿ ಕೃಷಿ ಕಾಯಕದಲ್ಲಿ ‌ತೊಡಗಿದ್ದಾರೆ. ಇವರ ಕುಟುಂಬದಲ್ಲಿ ಚೆನ್ನಾಗಿ ಓದಿ ಸರ್ಕಾರಿ ನೌಕರಿಗಳನ್ನು ಪಡೆದಿದ್ದು ಪರಶುರಾಮ್ ಮಾತ್ರ. ಓದಿನಲ್ಲಿಯೂ ಬುದ್ದಿವಂತರಾಗಿದ್ದರಿಂದ ಊರಿನಲ್ಲಿಯೂ ಅಪಾರ ಜನರನ್ನು ಸಂಪಾದಿಸಿದ್ದರು. ಒಟ್ಟು ಎಂಟು ಸರ್ಕಾರಿ ‌ನೌಕರಿಗಳನ್ನು ಪಡೆದುಕೊಂಡಿದ್ದರು.

ಪರಶುರಾಮ್ ತಾಯಿ ಗಂಗವ್ವ ಕಣ್ಣೀರು ಸುರಿಸುತ್ತಲೇ 'ಕೆಲವೇ ದಿನಗಳಲ್ಲಿ ವರ್ಗಾವಣೆ ಆಗುತ್ತದೆ ಎಂದು‌ ಮಗ ಹೇಳಿದ್ದ, ಹಣದ ವಿಚಾರದ ‌ಬಗ್ಗೆ ನನ್ನೊಂದಿಗೆ ಮಾತನಾಡಿರಲಿಲ್ಲ' ಎಂದರು.

ಅವರ ತಂದೆ ಜನಕಮುನಿ 'ಮಗ ಸಾಯುವುದಕ್ಕೂ‌ ನಾಲ್ಕೈದು ದಿನಗಳ ಮೊದಲು ಜ್ವರದಿಂದ ‌ಬಳಲುತ್ತಿದ್ದ. ಮೃತಪಟ್ಟ ದಿನ ಮುಖ ಬಹಳಷ್ಟು ಸಪ್ಪೆಯಾಗಿತ್ತು. ಯಾಕೆ ಹೀಗಿದ್ದೀಯಾ ಎಂದು ಕೇಳಿದರೂ ಯಾವ ವಿಷಯವನ್ನೂ ನಮಗೆ ಹೇಳಿರಲಿಲ್ಲ' ಎಂದರು.

ಮೃತಪಟ್ಟ ದಿನ ಮಗನೇ ತರಕಾರಿ ಹೆಚ್ಚಿ ಚಿತ್ರನ್ನ ಮಾಡಿಕೊಟ್ಟಿದ್ದ. ಸ್ವಲ್ಪ ‌ಹೊತ್ತು‌ ಮಲಗುತ್ತೇನೆ ಎಂದು ಹೇಳಿ ಮಲಗಿದ‌ ಮತ್ತೆ ಏಳಲೇ ಇಲ್ಲ. ಕೆಲವೇ ಹೊತ್ತಿನಲ್ಲಿ ದೇಹ ತಣ್ಣಗಾಗಿತ್ತು ಎಂದು ಜನಕಮುನಿ ತಿಳಿಸಿದರು.

ನನ್ನ ಮಗನಿಗೆ ಆದ ನೋವು ಯಾರಿಗೂ ಆಗಬಾರದು, ಸರ್ಕಾರ ಮಗನ ಸಾವಿಗೆ ಪರಿಹಾರ ಕೊಡಬೇಕು, ನೌಕರಿ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.