ಕೊಪ್ಪಳ: ‘ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಜನಸ್ನೇಹಿಯಾಗಿರುವುದು ಅಗತ್ಯ. ಗ್ರಾಮೀಣ ಪ್ರದೇಶದಲ್ಲಿ ಬೀಟ್ ವ್ಯವಸ್ಥೆ ಬಲಗೊಳಿಸಿದರೆ ಮಾತ್ರ ದುರ್ಘಟನೆಗಳನ್ನು ತಡೆಯಲು ಸಾಧ್ಯವಾಗುತ್ತದೆ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ) ಅಲೋಕ್ ಕುಮಾರ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಸಾರ್ವಜನಿಕರೊಂದಿಗೆ ಅವರು ಸಭೆ ನಡೆಸಿದಾಗ ಅನೇಕ ದೂರುಗಳು ಕೇಳಿಬಂದವು.
ಕೊಪ್ಪಳ ಗ್ರಾಮೀಣ ಠಾಣೆ ವ್ಯಾಪ್ತಿಯ ಬಹದ್ದೂರ್ ಬಂಡಿ ಗ್ರಾಮದಲ್ಲಿ ಗಾಂಜಾ ಹಾಗೂ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು, ನನ್ನ ಮಗಳಿಗೆ ಸೈಬರ್ ವಂಚನೆಯಾಗಿದ್ದು ಆನ್‌ಲೈನ್ ಮೂಲಕ ದೂರು ದಾಖಲಿಸಲಾಗಿದ್ದು ಕ್ರಮ ಕೈಗೊಳ್ಳಬೇಕು, ಬುದಗುಂಪಾದಲ್ಲಿ ಪೊಲೀಸ್ ಠಾಣೆ ಆರಂಭಿಸಬೇಕು, ಸಿಬ್ಬಂದಿ ಕೊರತೆಯಿದ್ದು ಅದನ್ನು ಸರಿಪಡಿಸಬೇಕು ಎನ್ನುವ ಬೇಡಿಕೆಗಳನ್ನು ಜನರು ಎಡಿಜಿಪಿ ಅವರ ಮುಂದಿಟ್ಟರು.
ಈ ಎಲ್ಲಾ ಬೇಡಿಕೆಗಳನ್ನು ಆಲಿಸಿ ಸಂಬಂಧಿಸಿದ ಪೊಲೀಸ್ ಠಾಣೆ ಇನ್‌ಸ್ಟೆಕ್ಟರ್‌ಗಳಿಗೆ ಮಾಹಿತಿ ಪಡೆದು ಅಲ್ಲೇ ಉತ್ತರ ನೀಡಿದರು. ಕೆಲ ಪ್ರಕರಣಗಳಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬಳಿಕ ಮಾತನಾಡಿದ ಅಲೋಕ್ ಕುಮಾರ್ ‘ಗಾಂಜಾ ಹಾವಳಿ ಮತ್ತು ಮದ್ಯ ಅಕ್ರಮ ಮಾರಾಟದ ವಿರುದ್ಧ ನಾವು ಕಠಿಣ ಕ್ರಮಗಳ ಮೂಲಕ ಹೋರಾಡಬೇಕಾಗಿದೆ. ಬೀಟ್ ವ್ಯವಸ್ಥೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪರಿಣಾಮಕಾರಿಯಾಗಬೇಕು. ಬೀಟ್ ಪೊಲೀಸರು ತಪ್ಪೆಸಗಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರಿಗೆ ಸೂಚಿಸಿದರು.
‘ಕಾರಟಗಿ ಹಾಗೂ ಹುಲಿಹೈದರ ಗ್ರಾಮದಲ್ಲಿ ಹಿಂದೆ ನಡೆದ ಘಟನೆಗಳು ಮರುಕಳಿಸಬಾರದು. ಜಿಲ್ಲೆಯಲ್ಲಿ ಎಲ್ಲಿಯೂ ಕೋಮುಗಲಭೆ, ಜಾತಿ ಸಂಘರ್ಷ ಹಾಗೂ ವೈಷಮ್ಯಕ್ಕೆ ಅವಕಾಶವಿಲ್ಲದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು. ಕೋಮುಸೌಹಾರ್ದ ಕದಡುವ ಸಂದರ್ಭಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಇದಕ್ಕೆ ಪೊಲೀಸರ ಶ್ರಮದ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಕೂಡ ಅಗತ್ಯವಾಗಿದೆ’ ಎಂದು ಹೇಳಿದರು.
‘ವಿನಾಕಾರಣ ಕೋಮು ವೈಷಮ್ಯ ಬೆಳೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಂಗಾವತಿ ಭಾಗದಲ್ಲಿ ಈ ರೀತಿಯ ಘಟನೆಯನ್ನು ಬೆಳೆಸುವವರ ಬಗ್ಗೆ ಪಟ್ಟಿ ಸಿದ್ಧಪಡಿಸಿಕೊಂಡು ಶುಕ್ರವಾರ ನಡೆಯುವ ಸಭೆಗೆ ತರಬೇಕು’ ಎಂದು ನಿರ್ದೇಶನ ನೀಡಿದರು.
ಬಳ್ಳಾರಿ ವಲಯದ ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್, ಎಸ್‌ಪಿ ಯಶೋಧಾ ವಂಟಗೋಡಿ ವೇದಿಕೆ ಮೇಲಿದ್ದರು.
ಎಡಿಜಿಪಿ ಆದ ಬಳಿಕ ಮೊದಲ ಬಾರಿಗೆ ಕೊಪ್ಪಳಕ್ಕೆ ಭೇಟಿ ಪೊಲೀಸ್ ಸಿಬ್ಬಂದಿ ಕೊರತೆ ಬಗ್ಗೆಯೂ ಚರ್ಚೆ ಹೊಸ ಠಾಣೆಗಳ ಅಗತ್ಯತೆ; ಪ್ರಸ್ತಾವಕ್ಕೆ ಎಸ್‌ಪಿಗೆ ಸೂಚನೆ
ಗಂಗಾವತಿಯಲ್ಲಿ ಮುಸ್ಲಿಂ ವೃದ್ಧನ ಮೇಲೆ ಹಲ್ಲೆ ನಡೆದ ಘಟನೆಯ ಬಗ್ಗೆ ವಿವರವಾದ ಮಾಹಿತಿ ತನ್ನಿ. ಶುಕ್ರವಾರದ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸೋಣ.ಅಲೋಕ್ ಕುಮಾರ್ ಎಡಿಜಿಪಿ (ತರಬೇತಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.