ಅಳವಂಡಿ: ಇಲ್ಲಿನ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಅಮಿತಾ ಕಾತರಕಿ ಅವರು ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 592 (ಶೇ 98.66) ಗಳಿಸಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾರೆ.
ಮೊದಲು ಪ್ರಕಟವಾದ ಫಲಿತಾಂಶದಲ್ಲಿ ಅಮಿತಾ ಅವರು ಕನ್ನಡಕ್ಕೆ 98, ಇಂಗ್ಲಿಷ್ 94, ಇತಿಹಾಸಕ್ಕೆ 100, ಸಮಾಜಶಾಸ್ತ್ರ 100, ರಾಜ್ಯಶಾಸ್ತ್ರ 98, ಶಿಕ್ಷಣ ಶಾಸ್ತ್ರ 100 ಅಂಕಗಳನ್ನು ಪಡೆದಿದ್ದರು. ನಂತರ ಮರು ಮೌಲ್ಯಮಾಪನದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ವಿಷಯದಲ್ಲಿ ತಲಾ ಒಂದು ಅಂಕವನ್ನು ಹೆಚ್ಚು ಪಡೆದುಕೊಂಡಿದ್ದಾರೆ. ಮೊದಲು ಜಿಲ್ಲೆಗೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.
ಅಮಿತಾ ಅವರ ತಂದೆ ತಾಯಿ ವ್ಯವಸಾಯ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕುಟುಂಬದ ಸದಸ್ಯರು ಅಮಿತಾ ಓದಿಗೆ ಬೆನ್ನುಲುಬಾಗಿ ನಿಂತಿದ್ದಾರೆ.
‘ಪ್ರಜಾವಾಣಿ’ ಜೊತೆ ಮಾತನಾಡಿದ ಅಮಿತಾ, ‘ಮೊದಲು 590 ಅಂಕ ಪಡೆದಿದ್ದೆ, ಮೌಲ್ಯಮಾಪನದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ವಿಷಯದಲ್ಲಿ ತಲಾ ಒಂದು ಅಂಕ ಹೆಚ್ಚು ಪಡೆದುಕೊಂಡು 592 ಅಂಕ ಪಡೆದಿದ್ದೇನೆ. ಹೆಚ್ಚಿನ ಅಂಕ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ದಿನದ ಪಾಠವನ್ನು ಅದೇ ದಿನ ಅಭ್ಯಾಸ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಿದ್ದೆ ಶ್ರಮಪಟ್ಟು ಓದಿದ ಪ್ರತಿಫಲವೇ ರಾಜ್ಯಕ್ಕೆ ಐದನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಯಿತು. ಮುಂದೆ ಉನ್ನತ ಅಧಿಕಾರಿಯಾಗುವ ಕನಸು ಹೊಂದಿದ್ದೇನೆ’ ಎಂದು ಹೇಳಿದರು.
ವಿದ್ಯಾರ್ಥಿನಿಯ ಸಾಧನೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಗದೀಶ, ಜಿಲ್ಲೆಯ ಪ್ರಾಚಾರ್ಯರು ಹಾಗೂ ಉಪನ್ಯಾಸಕರು, ಸಂಸ್ಥೆಯ ಆಡಳಿತ ಮಂಡಳಿ, ಕಾಲೇಜಿನ ಉಪನ್ಯಾಸಕರು, ಪೋಷಕರು ಹಾಗೂ ಸ್ನೇಹಿತರು ಅಭಿನಂದಿಸಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.