ADVERTISEMENT

ಕೊಪ್ಪಳ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ‘ದಂಡ’ದ ಶಿಕ್ಷೆ, ಸಮಾಜದಿಂದ ಬಹಿಷ್ಕಾರ

ಪ್ರಮೋದ
Published 7 ಮಾರ್ಚ್ 2024, 6:05 IST
Last Updated 7 ಮಾರ್ಚ್ 2024, 6:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೊಪ್ಪಳ: ತಮ್ಮ ಸಮುದಾಯದ ಯುವಕ ಅಂತರ್ಜಾತಿ ವಿವಾಹವಾಗಿದ್ದಾನೆ ಎನ್ನುವ ಕಾರಣಕ್ಕೆ ಅವರ ಕುಟುಂಬದವರನ್ನೇ ಸಮಾಜದ ಎಲ್ಲ ಚಟುವಟಿಕೆಗಳಿಂದ ಹೊರಗಿಟ್ಟ ಘಟನೆ ಇಲ್ಲಿಗೆ ಸಮೀಪದ ಭಾಗ್ಯನಗರದಲ್ಲಿ ನಡೆದಿದೆ.

ಅಷ್ಟೇ ಅಲ್ಲ; ಈ ತಪ್ಪಿಗೆ ದಂಡ ಕಟ್ಟಿದರೆ ಮಾತ್ರ ಸಮಾಜದ ಒಳಗೆ ಸೇರಿಸಿಕೊಳ್ಳುವುದಾಗಿ ಸಮುದಾಯದವರು ಹೇಳುತ್ತಿರುವುದು ಅಂತರ್ಜಾತಿ ವಿವಾಹವಾದ ಯುವಕನ ಪೋಷಕರ ಸಂಕಷ್ಟಕ್ಕೆ ಕಾರಣವಾಗಿದೆ. ಅಂತರ್ಜಾತಿ ವಿವಾಹವಾದರೆ ಸರ್ಕಾರವೇ ಸಹಕಾರ ನೀಡುತ್ತಿದೆ. ಜೊತೆಗೆ ಪ್ರೋತ್ಸಾಹ ಧನವನ್ನೂ ಕೊಡುತ್ತಿದೆ. ಆದರೆ, ಇಲ್ಲಿ ದಂಡ ಕಟ್ಟಬೇಕಾದ ‘ಶಿಕ್ಷೆ’ ವಿಧಿಸಲಾಗುತ್ತಿದೆ.

ADVERTISEMENT

ಕಾರ್ಪೆಂಟರ್‌ ವೃತ್ತಿ ಮಾಡಿ ಬದುಕು ಸಾಗಿಸುತ್ತಿರುವ ಶಂಕರಪ್ಪ ಬೇವಿನಹಳ್ಳಿ ಅವರ ಮಗ ಎರಡು ವರ್ಷಗಳ ಹಿಂದೆ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಶಂಕರಪ್ಪ ಅವರ ಮಗ, ಸೊಸೆ ಹಾಗೂ ಕುಟುಂಬದವರು ಮೊದಲ ದಿನದಿಂದಲೂ ಸಂತೋಷದಿಂದ ಬದುಕು ಸಾಗಿಸುತ್ತಿದ್ದಾರೆ.

ಆದರೆ, ನಾಯಕ ಸಮುದಾಯದ ಶಂಕರಪ್ಪ ಅವರಿಗೆ ‘ನಿನ್ನ ಮಗ ಮಾಡಿದ ತಪ್ಪಿಗೆ ನೀನು ₹1 ಲಕ್ಷ ದಂಡ ಕಟ್ಟಬೇಕು’ ಎಂದು ಸಮುದಾಯದ ಕೆಲವು ನಾಯಕರು ಒತ್ತಾಯಿಸುತ್ತಿದ್ದಾರೆ. ಇದೇ ರೀತಿಯ ಹಲವು ಪ್ರಕರಣಗಳು ಭಾಗ್ಯನಗರ ವ್ಯಾಪ್ತಿಯಲ್ಲಿ ನಡೆದಿದ್ದರೂ ಕೆಲವರು ದಂಡ ಕಟ್ಟಿ ಸುಮ್ಮನಾಗಿದ್ದಾರೆ. ಇನ್ನೂ ಕೆಲವರು ವಿರೋಧಿಸುತ್ತಿರುವ ಕಾರಣ ಈಗಲೂ ಅವರಿಗೆ ಸಮಾಜದ ಒಳಗಡೆ ಅವಕಾಶ ಸಿಗುತ್ತಿಲ್ಲ.

ಕೆಲ ದಿನಗಳ ಹಿಂದೆ ಈ ಪ್ರಕರಣ ಇಲ್ಲಿನ ಪೊಲೀಸ್‌ ಠಾಣೆಯ ಮೆಟ್ಟಿಲೇರಿತ್ತು. ಆಗ ಸಮಾಜದ ಮುಖಂಡರು ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರಿಂದ ಪೊಲೀಸರು ಸುಮ್ಮನಾಗಿದ್ದರು. ಆದರೆ, ಶಂಕರಪ್ಪ ಅವರಿಗೆ ಕನಿಷ್ಠ ₹21 ಸಾವಿರ ದಂಡ ಕಟ್ಟಲೇಬೇಕು ಎನ್ನುವ ಒತ್ತಡ ಹೇರುತ್ತಿರುವ ಕಾರಣ ಸಮಸ್ಯೆ ಉಲ್ಬಣಗೊಂಡಿದೆ.

’ಅಂತರ್ಜಾತಿ ವಿವಾಹ ಮಾಡಿಕೊಂಡು ನನ್ನ ಮಗ ಹಾಗೂ ಸೊಸೆ ಜೊತೆ ನಾವೆಲ್ಲರೂ ಸಂತೋಷವಾಗಿದ್ದೇವೆ. ಆದರೆ, ಹಣ ಕೊಡುವ ತನಕ ಸಮಾಜದ ಒಳಗೆ ಸೇರಿಸಿಕೊಳ್ಳದೇ ಬಹಿಷ್ಕಾರ ಹಾಕಲಾಗುತ್ತಿದೆ. ನಮ್ಮ ಸಮುದಾಯದವರು ಯಾರೂ ನಮ್ಮನ್ನು ಯಾವ ಕಾರ್ಯಕ್ರಮಕ್ಕೂ ಕರೆಯುತ್ತಿಲ್ಲ’ ಎಂದು ಶಂಕರಪ್ಪ ಆರೋಪಿಸಿದರು.

ಈ ಗಂಭೀರ ವಿಷಯದ ಬಗ್ಗೆ ಚರ್ಚಿಸಲು ಸಮುದಾಯದ ನಾಯಕರ ನಡುವೆ ಮೂರು ಸುತ್ತಿನ ಸಭೆ ನಡೆದರೂ ಒಮ್ಮತ ಮೂಡಿಲ್ಲ. ಕೆಲವರು ’ಈಗಿನ ಕಾಲ ಸಾಕಷ್ಟು ಮುಂದುವರಿದಿದೆ. ಸಾಮಾಜಿಕವಾಗಿ ಏನೇ ತಪ್ಪುಗಳು ನಡೆದರೂ ಅನುಸರಿಸಿಕೊಂಡು ಹೋಗಬೇಕು ಎಂದು ಬುದ್ಧಿವಾದ ಹೇಳಿದರೆ, ಇನ್ನೂ ಕೆಲವರು ಅಂತರ್ಜಾತಿ ವಿವಾಹವಾದವರನ್ನು ಯಾವ ಕಾರಣಕ್ಕೂ ಸಮಾಜದ ಒಳಗೆ ಬಿಟ್ಟುಕೊಳ್ಳುವುದು ಬೇಡ’ ಎನ್ನುವ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಆರು ವರ್ಷ ಸಮಾಜದಿಂದ ಹೊರಗಿಡಬೇಕು ಎನ್ನುವ ಸಲಹೆಯನ್ನೂ ಕೊಟ್ಟಿದ್ದಾರೆ.

ಇದರಿಂದ ಬೇಸತ್ತು ಹೋಗಿರುವ ಶಂಕರಪ್ಪ ’ನನ್ನ ವೃತ್ತಿಯಿಂದ ನನಗೆ ದೈನಂದಿನ ಬದುಕು ನಡೆಸುವುದೇ ಕಷ್ಟ. ಇಂಥ ಸಂಕಷ್ಟದ ಸಮಯದಲ್ಲಿ ದಂಡ ಕಟ್ಟುವಂತೆ ಹೇಳಿದರೆ ನಾನು ಹೇಗೆ ಕಟ್ಟಬೇಕು’ ಎಂದು ಪ್ರಶ್ನಿಸಿದ್ದಾರೆ.

‘ಬೇಸತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’

‘ಸಮಾಜದ ಆಂತರಿಕ ಪದ್ಧತಿಗೆ ಅನುಗುಣವಾಗಿ ದೈವಕ್ಕೆ ಊಟ ಕೊಡಬೇಕು ಎನ್ನುವ ಕಾರಣಕ್ಕೆ ಅಂತರ್ಜಾತಿ ವಿವಾಹ ಮಾಡಿಕೊಂಡವರಿಂದ ಹಣ ಪಡೆದುಕೊಳ್ಳಬೇಕು ಎಂದು ಸಮುದಾಯದ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ, ಇದು ಸರಿಯಲ್ಲವೆಂದು ನನ್ನ ನಿರ್ಧಾರ ಹೇಳಿದರೂ ಯಾರೂ ಅದನ್ನು ಕೇಳುತ್ತಿಲ್ಲ. ಆದ್ದರಿಂದ ಬೇಸತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘ ಭಾಗ್ಯನಗರ ಘಟಕದ ಅಧ್ಯಕ್ಷ ಪರಶುರಾಮ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.