ಕೊಪ್ಪಳ: ರೈಲು ನಿಲ್ದಾಣಗಳಲ್ಲಿ ಟಿಕೆಟ್ ಪಡೆಯುವಾಗ ಆಗುವ ಚಿಲ್ಲರೆ ಸಮಸ್ಯೆಯನ್ನು ಕಡಿಮೆ ಮಾಡಲು ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಇತ್ತೀಚೆಗೆ ತನ್ನ ವ್ಯಾಪ್ತಿಯ ಎಲ್ಲ ಪ್ರಮುಖ ನಿಲ್ದಾಣಗಳಲ್ಲಿ ಡಿಜಿಟಲ್ ವಹಿವಾಟಿನ ಮೊರೆ ಹೋಗಿದ್ದು, ನಗರದ ರೈಲು ನಿಲ್ದಾಣದಲ್ಲಿಯೂ ಕ್ಯು.ಆರ್. ಕೋಡ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆದುಕೊಳ್ಳುವ ವ್ಯವಸ್ಥೆ ಜಾರಿಗೆ ತಂದಿದೆ.
ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ 87 ರೈಲು ನಿಲ್ದಾಣಗಳಲ್ಲಿ 102 ಕ್ಯು.ಆರ್. ಕೋಡ್ ಯಂತ್ರಗಳನ್ನು ಇರಿಸಲಾಗಿದೆ. ಇವುಗಳಲ್ಲಿ ಸಾಮಾನ್ಯ ದರ್ಜೆ, ಮುಂಗಡ ಬುಕ್ಕಿಂಗ್ ಅಲ್ಲದ ಟಿಕೆಟ್ ಮತ್ತು ಪ್ಲಾಟ್ ಫಾರ್ಮ್ ಟಿಕೆಟ್‌ಗಳನ್ನು ಪಡೆಯಲು ಸೌಲಭ್ಯ ಕಲ್ಪಿಸಲಾಗಿದೆ.
ಟಿಕೆಟ್ ನೀಡುವ ಕೌಂಟರ್‌ಗಳ ಮುಂಭಾಗದಲ್ಲಿ ಕ್ಯು.ಆರ್. ಕೋಡ್ ಸ್ಕ್ಯಾನರ್ ಇರಿಸಲಾಗಿದ್ದು, ಎಲ್ಲ ಯುಪಿಐ ವೇದಿಕೆ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯಬಹುದು. ಇವುಗಳ ಜೊತೆಗೆ ಇಲ್ಲಿನ ರೈಲು ನಿಲ್ದಾಣದಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳು (ಎಟಿವಿಎಂ) ಯಂತ್ರವೂ ಇರಲಿದೆ.
ಹಲವು ರೈಲು ನಿಲ್ದಾಣಗಳಲ್ಲಿ ಎಟಿವಿಎಂ ಯಂತ್ರಗಳ ನೆರವಿನಿಂದ ಯುಪಿಎ ಮೂಲಕವೇ ಟಿಕೆಟ್ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಸದ್ಯಕ್ಕೆ ಇದು ಇಲ್ಲಿನ ರೈಲು ನಿಲ್ದಾಣದಲ್ಲಿ ಅನುಷ್ಠಾನವಾಗಿಲ್ಲ.
ಬೇಕಿದೆ ವೇಗ: ಕ್ಯು.ಆರ್. ಕೋಡ್ ಸೌಲಭ್ಯ ಆರಂಭಿಸಿರುವುದರಿಂದ ಚಿಲ್ಲರೆ ಸಮಸ್ಯೆ ಪರಿಹಾರವಾಗುತ್ತದೆ. ವಿಶೇಷವಾಗಿ ಬೆಳಗಿನ ಜಾವದಲ್ಲಿ ಹೊರಡುವ ಮುಂಗಡ ಟಿಕೆಟ್ ಬುಕ್ಕಿಂಗ್ ರಹಿತ ರೈಲುಗಳ ಪ್ರಯಾಣಿಕರು ಚಿಲ್ಲರೆಗಾಗಿ ಪರದಾಡಬೇಕಾಗುತ್ತಿತ್ತು. ಈಗ ಇದರ ಸಮಸ್ಯೆ ಇರುವುದಿಲ್ಲ. ಆದರೆ ಏಕಕಾಲಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಟಿಕೆಟ್ ಪಡೆಯಲು ಬಂದಾಗ ಸರ್ವರ್ ಸಮಸ್ಯೆ ಕಾಡುತ್ತಿದ್ದು, ಇದರ ಪರಿಹಾರಕ್ಕೂ ರೈಲ್ವೆ ಇಲಾಖೆ ಆದ್ಯತೆ ಕೊಡಬೇಕಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯಕ್ಕೂ ಈ ಸೌಲಭ್ಯ ವಿಸ್ತರಣೆ ಮಾಡಬೇಕಾಗಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಯಿಂದಾಗಿ ಚಿಲ್ಲರೆ ಸಮಸ್ಯೆ ನೀಗಿದರೂ ಕೆಲವು ಬಾರಿ ಸರ್ವರ್ ಸಮಸ್ಯೆ ಕಾಡುತ್ತದೆ. ಆಗ ಅನಿವಾರ್ಯವಾಗಿ ನಗದು ಪಡೆದುಕೊಂಡೇ ಟಿಕೆಟ್ ನೀಡಬೇಕಾಗುತ್ತದೆ. ಆದ್ದರಿಂದ ಇನ್ನಷ್ಟು ವೇಗದ ಸರ್ವರ್ ಅಳವಡಿಕೆ ಅಗತ್ಯವಿದೆ ಎಂದು ಇಲ್ಲಿನ ರೈಲು ನಿಲ್ದಾಣದ ಸಿಬ್ಬಂದಿಯೊಬ್ಬರು ಹೇಳಿದರು.
ಗದಗಕ್ಕೆ ತೆರಳುತ್ತಿದ್ದ ಪ್ರಯಾಣಿಕ ಬಸವರಾಜ ಪಾಟೀಲ ‘ಚಿಲ್ಲರೆ ಸಮಸ್ಯೆ ಕಾರಣಕ್ಕೆ ಟಿಕೆಟ್ ಪಡೆದುಕೊಳ್ಳದೆ ಹಲವು ಬಾರಿ ವಾಪಸ್ ಹೋಗಿದ್ದೇನೆ. ಈಗ ಒಂದು ಕಪ್ ಚಹಾ ಕುಡಿದರೂ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಹೀಗೆ ಯುಪಿಎ ಮೊರೆ ಹೋಗುತ್ತೇವೆ. ರೈಲು ನಿಲ್ದಾಣದಲ್ಲಿಯೂ ಡಿಜಿಟಲ್ ಪಾವತಿಗೆ ವ್ಯವಸ್ಥೆ ಮಾಡಿದ್ದು ಖುಷಿನೀಡಿದೆ. ಸರ್ವರ್ ವೇಗ ಮತ್ತು ಮುಂಗಡ ಟಿಕೆಟ್ ಪಡೆಯುವಾಗಲೂ ಈ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ಕ್ಯು.ಆರ್. ಕೋಡ್ ಮೂಲಕ ಪಾವತಿಸಿದರೆ ತ್ವರಿತವಾಗಿ ಪ್ರಯಾಣಿಕರಿಗೆ ಟಿಕೆಟ್ ನೀಡಲು ಸಾಧ್ಯವಾಗುತ್ತದೆ. ಚಿಲ್ಲರೆ ಸಮಸ್ಯೆಯೂ ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಈ ಸೌಲಭ್ಯ ಆರಂಭಿಸಲಾಗಿದೆ.ಸಂತೋಷ ಹೆಗ್ಡೆ ವಿಭಾಗೀಯ ಹಿರಿಯ ವ್ಯವಸ್ಥಾಪಕ (ವಾಣಿಜ್ಯ) ಹುಬ್ಬಳ್ಳಿ
ಡಿಜಿಟಲ್ ವಹಿವಾಟಿಗೆ ಆದ್ಯತೆ ನೀಡಿ ಪ್ರಯಾಣಿಕ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಡಿಜಿಟಲ್ ಪಾವತಿಯಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.ಹರ್ಷ ಖರೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.