ADVERTISEMENT

ಕೊಪ್ಪಳ | ಮೂರನೇ ಅವಕಾಶ; ನೂರಾರು ಸವಾಲು

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 4:45 IST
Last Updated 19 ಜೂನ್ 2023, 4:45 IST
ರಾಘವೇಂದ್ರ ಹಿಟ್ನಾಳ
ರಾಘವೇಂದ್ರ ಹಿಟ್ನಾಳ   

ಪ್ರಮೋದ

2013ರಲ್ಲಿ ಮೊದಲ ಬಾರಿಗೆ ಹಿಟ್ನಾಳ ಶಾಸಕರಾದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. 2018ರಲ್ಲಿ ಎರಡನೇ ಬಾರಿಗೆ ಆಯ್ಕೆಯಾದಾಗ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆಗ ಹಿಟ್ನಾಳ ‘ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲ. ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅನುದಾನವೇ ನೀಡುತ್ತಿಲ್ಲ’ ಎನ್ನುವ ಕಾರಣ ಮುಂದಿಡುತ್ತಿದ್ದರು. ಈಗ ಕ್ಷೇತ್ರದ ಮತದಾರರು ಮೂರನೇ ಬಾರಿಗೆ ಆಶೀರ್ವಾದ ಮಾಡಿದ್ದು, ಈ ಬಾರಿ ಕ್ಷೇತ್ರದಲ್ಲಿ ಬಾಕಿ ಉಳಿದ ಎಲ್ಲ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ.

ಕೊಪ್ಪಳ: ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ಇಬ್ಬರು ಅಭ್ಯರ್ಥಿಗಳ ಪ್ರಬಲ ಸವಾಲು ಎದುರಿಸಿ, ಹಿಂದಿನ ಎರಡು ಅವಧಿಯಲ್ಲಿನ ಕೆಲಸಗಳನ್ನು ಜನರ ಮುಂದಿಟ್ಟು ಮತ ಕೇಳಿದ ರಾಘವೇಂದ್ರ ಹಿಟ್ನಾಳ ಸತತ ಮೂರನೇ ಬಾರಿಗೆ ಶಾಸಕರಾಗಿದ್ದಾರೆ. ಈಗ ಅವರ ಮುಂದೆ ಕ್ಷೇತ್ರದ ಅಭಿವೃದ್ಧಿಯ ನೂರಾರು ಸವಾಲುಗಳು ಇವೆ.

2013ರಲ್ಲಿ ಮೊದಲ ಬಾರಿಗೆ ಹಿಟ್ನಾಳ ಶಾಸಕರಾದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. 2018ರಲ್ಲಿ ಎರಡನೇ ಬಾರಿಗೆ ಆಯ್ಕೆಯಾದಾಗ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆಗ ಹಿಟ್ನಾಳ ‘ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲ. ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅನುದಾನವೇ ನೀಡುತ್ತಿಲ್ಲ’ ಎನ್ನುವ ಕಾರಣ ಮುಂದಿಡುತ್ತಿದ್ದರು. ಈಗ ಕ್ಷೇತ್ರದ ಮತದಾರರು ಮೂರನೇ ಬಾರಿಗೆ ಆಶೀರ್ವಾದ ಮಾಡಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಬಹುಮತಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ನೀಡಿ ಗಟ್ಟಿಬಲದ ಸರ್ಕಾರಕ್ಕೆ ಕಾರಣರಾಗಿದ್ದಾರೆ. ಹೀಗಾಗಿ ಹಿಟ್ನಾಳ ಈ ಬಾರಿ ಕ್ಷೇತ್ರದಲ್ಲಿ ಬಾಕಿ ಉಳಿದ ಎಲ್ಲ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಬೇಕು. ಮುಖ್ಯವಾಗಿ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ದಡ ಮುಟ್ಟಿಸಬೇಕು ಎನ್ನುವ ಆಗ್ರಹ ಜನರದ್ದು.

ADVERTISEMENT
ಹಿಟ್ನಾಳ ಹೋಬಳಿ ಮಟ್ಟದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಬಾಕಿ ಇವೆ. ನೀರಾವರಿ ಉದ್ದೇಶಕ್ಕಾಗಿ ಕೆರೆ ತುಂಬಿಸುವ ಯೋಜನೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಕಾಲೇಜು ಸ್ಥಾಪನೆ ಮತ್ತು ವಿದ್ಯಾರ್ಥಿಗಳ ಪ್ರಯಾಣಿಸಲು ಬಸ್ ಸೌಕರ್ಯ ಬೇಕಾಗಿದೆ. ಇಲ್ಲಿನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಬೇಕು
ಹನುಮಂತಪ್ಪ ಬಸಿರಾಳ, ಲಿಂಗದಹಳ್ಳಿ

ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆ, ಬಹದ್ದೂರ್ ಬಂಡಿ ನವಕಲ್ ಏತ ನೀರಾವರಿ, ತುಂಗಭದ್ರಾ ಎಡದಂಡೆ ಕಾಲುವೆ ಮತ್ತು ಡಿಸ್ಟ್ರಿಬ್ಯೂಟರ್ ಆಧುನೀಕರಣ, ಸಿಂಗಟಾಲೂರು ಯೋಜನೆ ಪೂರ್ಣಗೊಳಿಸಬೇಕಾಗಿದೆ. ಈ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಹಣ ಸುರಿದರೂ ಹನಿ ನೀರು ಹರಿದಿಲ್ಲ.  ಕೊಪ್ಪಳಕ್ಕೆ ₹135 ಕೋಟಿ ವೆಚ್ಚದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ಮಾಣ ಮಾಡಲಾಗಿದೆಯಾದರೂ ಸಿಬ್ಬಂದಿ ಕೊರತೆ ಕಾಡುತ್ತಿದೆ. ಸೌಲಭ್ಯವಿದ್ದು ಸಿಬ್ಬಂದಿ ಇಲ್ಲದಿದ್ದರೆ ಯಾರಿಗೂ ಅನುಕೂಲವಿಲ್ಲ.

ಅಳವಂಡಿ ವ್ಯಾಪ್ತಿಯ ಕವಲೂರು ಬೆಟಗೇರಿ ಗ್ರಾಮದಲ್ಲಿ ಪಿಯು ಕಾಲೇಜು ಪ್ರಾರಂಭವಾಗಬೇಕು. ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯ ಹೆಚ್ಚಾಗಬೇಕು. ಉತ್ತಮ ರಸ್ತೆ ಅಭಿವೃದ್ಧಿಗೆ ಶ್ರಮಿಸಬೇಕು
ಶಾರದಾ ಕುರಿ, ವಿದ್ಯಾರ್ಥಿನಿ

ಕೊಪ್ಪಳದಿಂದ–ಅಳವಂಡಿಗೆ ಹೋಗುವ ಮಾರ್ಗದಲ್ಲಿ ರಸ್ತೆ ದುರಸ್ತಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಈ ರಸ್ತೆಯಲ್ಲಿ ಹೋಗುವವರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ. ರಸ್ತೆ ದುರಸ್ತಿ ಮಾಡಿ ಎಂದು ಗ್ರಾಮಸ್ಥರು ಅಳವಂಡಿಯಿಂದ ಕೊಪ್ಪಳದ ತನಕ ಪಾದಯಾತ್ರೆ ಮಾಡಿದ ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಕೊಪ್ಪಳ ವಿ.ವಿ.ಗೆ ಜಿಲ್ಲಾ ಕೇಂದ್ರದಲ್ಲಿ ಜಾಗದ ವ್ಯವಸ್ಥೆ ಮಾಡಬೇಕು. ಅಲ್ಲಿ ಸೌಲಭ್ಯಗಳನ್ನು ಕಲ್ಪಿಸಬೇಕು. ಕೊಪ್ಪಳದಲ್ಲಿ ಇನ್ನೊಂದು ಪದವಿ ಕಾಲೇಜು ಆರಂಭಿಸಬೇಕಾಗಿದೆ. ಹಾಸ್ಟೆಲ್‌ಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕಾಗಿದೆ
ಗಂಗರಾಜ ಅಳ್ಳಳ್ಳಿ, ಎಐಡಿಎಸ್‌ಒ ಜಿಲ್ಲಾ ಸಂಚಾಲಕ
ಹುಲಿಗಿ ದೇವಸ್ಥಾನ ಮತ್ತು ಸುತ್ತಲಿನ ಪರಿಸರ ಸುಧಾರಿಸಬೇಕು. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಬಸ್ ನಿಲ್ದಾಣ ಶೌಚಾಲಯ ಸ್ನಾನಗೃಹ ಕೊರತೆ ಇದೆ. 10-14 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಸ್ಮಶಾನದ ವ್ಯವಸ್ಥೆ ಇಲ್ಲ ವಾರದ ಸಂತೆಗೆ ಜಾಗದ ಕೊರತೆಯಿಂದ ಮುಖ್ಯರಸ್ತೆಯಲ್ಲಿ ಸಂತೆ ನಡೆಯುತ್ತಿದೆ ಇದಕ್ಕೆ ನಿರ್ದಿಷ್ಟ ಸ್ಥಳ ಗುರುತಿಸಬೇಕು
ಈ.ವೀರೇಶ್ ಹುಲಿಗಿ

ಕೆರೆ ತುಂಬಿಸುವ ಯೋಜನೆ, ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆಗೆ ಭೂಮಿ ನೀಡಿದ ರೈತರಿಗೆ ಇದುವರೆಗೂ ಭೂಸ್ವಾಧೀನದ ಪರಿಹಾರ ಸಿಕ್ಕಿಲ್ಲ. ಅಳವಂಡಿ ಹೋಬಳಿ ವ್ಯಾಪ್ತಿಯ ನೀರಾವರಿ ವಂಚಿತ ಹನ್ನೊಂದು ಗ್ರಾಮಗಳಿಗೆ ಕಲ್ಲಳ್ಳಿ ಆಂಜನೇಯ ಏತ ನೀರಾವರಿ ಯೋಜನೆ ಜಾರಿ ಮಾಡಿಲ್ಲ. ಕೊಪ್ಪಳ ತಾಲ್ಲೂಕಿನ ರಾಜ್ಯ ಹೆದ್ದಾರಿ 23 ಕಲ್ಮಲಾ–ಶಿಗ್ಗಾವಿ ರಸ್ತೆ ಕುಂಟುತ್ತಾ ಸಾಗಿದೆ.

ಅಳವಂಡಿ ವ್ಯಾಪ್ತಿಯ ಅನೇಕ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿವೆ. ಅವುಗಳನ್ನು ಸರಿಪಡಿಸುವ ಕೆಲಸವಾಗಬೇಕು. ಬಡವರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ಒದಗಿಸಬೇಕು
ನಾಗರಾಜ್ ಕಗ್ಗಲ್, ಕವಲೂರು

ಇವೆಲ್ಲವೂ ಗ್ರಾಮೀಣ ಭಾಗದ ಪ್ರಮುಖ ಸಮಸ್ಯೆಗಳಾದರೆ ಜಿಲ್ಲಾ ಕೇಂದ್ರ ಕೊಪ್ಪಳದ ಪ್ರಮುಖ ಬಡಾವಣೆಗಳಲ್ಲಿಯೇ ಒಳಚರಂಡಿ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ ಕೊಡಬೇಕಿದೆ. ಆಡಳಿತದ ವೈಖರಿಗೆ ಚುರುಕು ಮುಟ್ಟಿಸಿದರೆ ಜನರು ಪದೇ ಪದೇ ಸರ್ಕಾರಿ ಕಚೇರಿ ಅಲೆದಾಡುವುದು ತಪ್ಪಿಸಬೇಕಾಗಿದೆ.

ಈ ಎರಡು ಕೆಲಸಕ್ಕೆ ಬೇಕಿದೆ ಮೊದಲ ಆದ್ಯತೆ

ಹಿಂದಿನ ಬಿಜೆಪಿ ಸರ್ಕಾರ ಕೊಪ್ಪಳ ವಿಶ್ವವಿದ್ಯಾಲಯವನ್ನು ಆರಂಭ ಮಾಡಿದ್ದು ಕೊಪ್ಪಳದಲ್ಲಿ ಜಾಗ ಸಿಗದ ಕಾರಣ ಕುಕನೂರು ತಾಲ್ಲೂಕಿನ ತಳಕಲ್‌ನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಿ.ವಿ. ಆರಂಭ ಮಾಡಿದೆ. ಯಲಬುರ್ಗಾದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವಿದೆ. ವಿ.ವಿ.ಯಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವ ಕಾರಟಗಿ ಹಾಗೂ ಗಂಗಾವತಿ ಭಾಗದ ವಿದ್ಯಾರ್ಥಿಗಳು ದೂರದ ತಳಕಲ್‌ಗೆ ಹೋಗಬೇಕಾದ ಅನಿವಾರ್ಯತೆಯಿದೆ. ಜಿಲ್ಲಾ ಕೇಂದ್ರದಲ್ಲಿಯೇ ವಿ.ವಿ. ಕಾರ್ಯಗತಗೊಂಡರೆ ಜಿಲ್ಲೆಯ ಎಲ್ಲಾ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎನ್ನುವುದು ಇಲ್ಲಿನ ಶಿಕ್ಷಣ ತಜ್ಞರ ಹಾಗೂ ಜನರ ಒತ್ತಾಸೆ. ಅದಕ್ಕಾಗಿ ಕೊಪ್ಪಳ ನಗರದಲ್ಲಿ ಹಲವು ಕಡೆ ಜಾಗ ಪರಿಶೀಲಿಸಿದ್ದರೂ ಅಂತಿಮಗೊಂಡಿಲ್ಲ.

ಈ ಬಾರಿ ನಮ್ಮ ಪಕ್ಷದ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ನೀರಾವರಿ ಸೇರಿದಂತೆ ಕ್ಷೇತ್ರದಲ್ಲಿ ಬಾಕಿ ಉಳಿದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು.
ರಾಘವೇಂದ್ರ ಹಿಟ್ನಾಳ, ಶಾಸಕ

ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಭಕ್ತರನ್ನು ಒಳಗೊಂಡಿರುವ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಈ ಸಂಖ್ಯೆ ಲಕ್ಷ ದಾಟುತ್ತದೆ. ಹುಲಿಗೆ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಕಾರಣ ಭಕ್ತರು ನೀಡಿದ ಕಾಣಿಕೆಯ ಹಣವೇ ಕೋಟಿಗಟ್ಟಲೆ ಇದೆ. ಇದನ್ನೇ ಬಳಸಿಕೊಂಡು ಆ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡಬೇಕಾಗಿದೆ. ಸಾರ್ವಜನಿಕ ಶೌಚಾಲಯ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ತುಂಗಭದ್ರಾ ನದಿ ದಂಡೆಯಲ್ಲಿ ಮಹಿಳೆಯರು ಬಟ್ಟೆ ಬದಲಿಸಲು ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಈ ಎರಡು ಕೆಲಸಗಳು ತುರ್ತಾಗಿ ಆಗಬೇಕಾಗಿವೆ.

ಪೂರಕ ಮಾಹಿತಿ: ಗುರುರಾಜ ಅಂಗಡಿ,  ಜುನಾಸಾಬ್‌ ವಡ್ಡಟ್ಟಿ.

ಕೊಪ್ಪಳದ ಮಿಟ್ಟಿಕೇರಿಯ ಹಿಂಭಾಗದಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹಗೊಂಡಿರುವ ಕಲುಷಿತ ನೀರು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ನೀರಾವರಿ ಯೋಜನೆಗಾಗಿ ಕಾಲುವೆ ನಿರ್ಮಿಸಿದರೂ ಅಳವಂಡಿ ಭಾಗದಲ್ಲಿ ಹನಿ ನೀರು ಹರಿದಿಲ್ಲ 
ನಿತ್ಯ ಸಾವಿರಾರು ಜನ ಬರುವ ಹುಲಿಗೆಮ್ಮ ದೇವಿ ದೇವಸ್ಥಾನದ ಸಮೀಪ ಮೂಲ ಸೌಕರ್ಯ ಕಲ್ಪಿಸಲು ಸಿಗಬೇಕಿದೆ ಆದ್ಯತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.