ಕೊಪ್ಪಳ: ಜಿಲ್ಲೆಯಲ್ಲಿ ಅವಧಿ ಪೂರ್ವ ಮುಂಗಾರು ಅಕಾಲಿಕ ಮಳೆ ಜಿಲ್ಲೆಯಾದ್ಯಂತ ಸುರಿದ ಪರಿಣಾಮ ಕೃಷಿ, ತೋಟಗಾರಿಕೆ ಬೆಳೆಗಳು ಸೇರಿದಂತೆ5708 ಹೆಕ್ಟೇರ್ ಬೆಳೆ ನಾಶವಾಗಿದ್ದು, ₹8.29 ಕೋಟಿ ಹಾನಿಯನ್ನು ಅಂದಾಜಿಸಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಜಿಲ್ಲೆಯ ಕೊಪ್ಪಳ, ಗಂಗಾವತಿ, ಕಾರಟಗಿ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಬಹುತೇಕ ಕೊಯ್ಲಿಗೆ ಬಂದಿದ್ದ ಭತ್ತ ಗಾಳಿ ಮಳೆಗೆ ನೆಲಕಚ್ಚಿದೆ. ತೋಟಗಾರಿಕೆ ಬೆಳೆಗಳಾದ ಮಾವು, ಪಪ್ಪಾಯಿ, ಎಲೆ ಬಳ್ಳಿ, ಹೂವು, ತರಕಾರಿ, ಬಾಳೆ ಮಳೆಗೆ ನೆಲಕಚ್ಚಿದೆ. ಬೇಸಿಗೆಯ ಪ್ರಮುಖ ಬೆಳೆಯಾದ ಮಾವು ಅವಧಿ ನಂತರ ಹೂವು, ಕಾಯಿ ಕಟ್ಟಿದ್ದು ಮಳೆಗೆ ನೆಲಕ್ಕೆ ಬಿದ್ದಿವೆ.
ಈ ಸಾರಿ ಬಂಪರ್ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಮತ್ತು ಭತ್ತ ಬೆಳೆಯುವರೈತರಿಗೆ ನಿರಾಶೆಯಾಗಿದೆ.
ಮಳೆಯ ಪ್ರಮಾಣ:ಜಿಲ್ಲೆಯಲ್ಲಿ ಈ ಏಳು ದಿನದಲ್ಲಿ 6.8 ಮಿಮೀ ಮಳೆ ನಿರೀಕ್ಷೆ ಮಾಡಲಾಗಿತ್ತು. ಆದರೆ 7.3 ಮಿಮೀ ಮಳೆಯಾಗಿದೆ. ಕೊಪ್ಪಳ ತಾಲ್ಲೂಕಿನ ಒಂದರಲ್ಲಿಯೇ 16.05 ಮಿ.ಮೀ ಮಳೆಯಾಗಿದೆ. ಯಲಬುರ್ಗಾ 4.4 ಮಿಮೀ, ಕುಷ್ಟಗಿ 4.8 ಮಿಮೀ, ಕುಕನೂರ, 7.8 ಮಿಮೀ, ಗಂಗಾವತಿ 7.0 ಮಿಮೀ ಮಳೆಯಾಗಿದೆ. ಕಾರಟಗಿ ತಾಲ್ಲೂಕಿನಲ್ಲಿ ಅಲ್ಪ ಪ್ರಮಾಣದ ಮಳೆಯಾದರೆ, ಕನಕಗಿರಿ ತಾಲ್ಲೂಕಿನಲ್ಲಿ ಮಳೆಯಾಗಿಲ್ಲ.
ವಾಡಿಕೆ ಮಳೆಗಿಂತಲೂ ಈ ಸಾರಿ ಹೆಚ್ಚಾಗಿದೆ ಅಲ್ಲದೆ ಅವಧಿ ಮುಂಚೆಯೇ ಮಳೆ ಬಂದಿರುವುದರಿಂದ ಹಿಂಗಾರಿ ಹಂಗಾಮಿನ ದೀರ್ಘಾವಧಿ ಬೆಳೆಗಳಾದ ಭತ್ತ, ಹತ್ತಿ, ಮಾವಿಗೆ ತೊಂದರೆಯಾಗಿದೆ.
ಕೃಷಿ ಚಟುವಟಿಕೆಗೆ ಪೂರಕ: ಈ ಅವಧಿಪೂರ್ವ ಮಳೆಗಳು ತೋಟಗಾರಿಕೆ ಮತ್ತು ನೀರಾವರಿ ಬೆಳೆಗೆ ಹಾನಿ ಉಂಟು ಮಾಡಿದರೆ ಒಣ ಬೇಸಾಯದ ಜಮೀನುಗಳ ಕೃಷಿ ಚಟಿವಟಿಕೆ ಕೈಗೊಳ್ಳಲು ಪೂರಕವಾಗಿವೆ ಎನ್ನುತ್ತಾರೆ ಕೃಷಿ ತಜ್ಞರು.
ಬಿತ್ತನೆ ಪೂರ್ವದಲ್ಲಿ ಹೊಲವನ್ನು ಹರಗಿ ಸ್ವಚ್ಛವಾಗಿಟ್ಟುಕೊಂಡು ನಂತರ ಬಿಸಿಲಿಗೆ ಮತ್ತಷ್ಟು ಫಲವತ್ತಗೊಳ್ಳುತ್ತವೆ. ನಂತರ ಬರುವ ಭಾರಿ ಮಳೆಯಿಂದ ತೇವಾಂಶ ಹೆಚ್ಚಾಗಿ ಬಿತ್ತನೆಗೆ ಅನುಕೂಲವಾಗುತ್ತದೆ. ಇದು ಬಿತ್ತನೆ ಯೋಗ್ಯ ಮಳೆಯಲ್ಲದಿದ್ದರೂ ಪೂರ್ವ ತಯಾರಿಗೆ ಅನುಕೂಲ ಎನ್ನುತ್ತಾರೆ ರೈತರು.
ಹಾನಿಯ ಅಂದಾಜು: ಕಳೆದ 15 ದಿನಗಳ ಹಿಂದೆಯಾದ ಮಳೆಯಿಂದ ಬುಧವಾರದವರೆಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ನಡೆಸಿವೆ. ತೋಟಗಾರಿಕೆ ಇಲಾಖೆ ಇನ್ನೂ ಸಮೀಕ್ಷೆ ನಡೆಸಿದೆ. ಬಿಸಿಲಿನ ಪ್ರಖರತೆ ಕೂಡಾ ಕಡಿಮೆಯಾಗಿದ್ದು, ಮೋಡ ಕವಿದ ವಾತಾವರಣದಿಂದ ಮಳೆಯಾಗುವ ಮುನ್ಸೂಚನೆ ಇನ್ನೂ ಇದೆ.
ಕಳೆದ ಏಳು ದಿನಗಳ ಹಿಂದೆಯಾದ ಅಕಾಲಿಕ ಮಳೆಗೆ ತೀವ್ರ ಹಾನಿಯಾಗಿದೆ. ಗಂಗಾವತಿ, ಕಾರಟಗಿ ಕೊಪ್ಪಳದ ಅರ್ಧ ಭಾಗದ ಭತ್ತದ ಬೆಳೆಗೆ ಹಾನಿಯಾಗಿದ್ದರೆ, ಇರಕಲ್ಲಗಡಾ, ಅಳವಂಡಿ, ತಾವರಗೇರಾ, ಹನಮಸಾಗರ ಹೋಬಳಿಗಳಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.