ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಪಂಪಾಸರೋವರದ ಜಯಲಕ್ಷ್ಮಿ ದೇವಸ್ಥಾನದ ಗರ್ಭಗುಡಿ, ಪ್ರಾಂಗಣ ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ಸೋರುತ್ತಿತ್ತು. ಶನಿವಾರ ವಿಜಯದಶಮಿ ನಿಮಿತ್ತ ದೇವಿ ದರ್ಶನ ಪಡೆಯಲು ಆಗಮಿಸಿದ ಭಕ್ತರಿಗೆ ಸಮಸ್ಯೆ ಉಂಟಾಯಿತು.
2022ನೇ ಸಾಲಿನಲ್ಲಿ ಅಂದಿನ ಸಾರಿಗೆ ಸಚಿವ ಬಳ್ಳಾರಿ ಶ್ರೀರಾಮುಲು ರಾಜ್ಯ ಪ್ರಾಚ್ಯವಸ್ತು ಇಲಾಖೆಯಿಂದ ಪರವಾನಗಿ ಪಡೆದು, ₹2.8 ಕೋಟಿ ಸ್ವಂತ ಹಣ ಬಳಸಿ, ಪಂಪಾಸರೋವರ ಜಯಲಕ್ಷ್ಮಿ ದೇವಸ್ಥಾನ ಮತ್ತು ಸರೋವರ ಜೀರ್ಣೋದ್ಧಾರ ಕಾಮಗಾರಿ ಕೈಗೊಂಡಿದ್ದರು.
ಕಾಮಗಾರಿ ನಡೆಸುವ ಕೂಲಿಕಾರರು ಹಗಲು–ರಾತ್ರಿಯೆನ್ನದೇ ಜೀರ್ಣೋದ್ಧಾರ ಕೆಲಸ ನಡೆಸಿ, ಯಾವ ಅಧಿಕಾರಿಗಳ ಪರವಾನಗಿ ಪಡೆಯದೆ, ಸಿಸಿಟಿವಿ ಕ್ಯಾಮೆರಾ ಅಳವಡಿಸದೇ ಜಯಲಕ್ಷ್ಮಿ ದೇವಿ ಗರ್ಭಗುಡಿ ಅಗೆದು, ಮೂರ್ತಿ, ಶ್ರೀಚಕ್ರ ಸ್ಥಳಾಂತರಿಸಿ, ಅಗೆದ ಸ್ಥಳಕ್ಕೆ ಸಿಮೆಂಟ್ ಮಾಡಿ, ಕಲ್ಲುಬಂಡೆ ಹಾಕಿ ಮುಚ್ಚಿ, ವಿವಾದ ಸೃಷ್ಟಿಸಿದ್ದರು.
ಈ ಕಾರ್ಯ ನಿಧಿ ಆಸೆಗಾಗಿ ನಡೆದಿದೆ ಎಂದು ರಾಜ್ಯದಾದ್ಯತ ಸುದ್ದಿ ಹಬ್ಬಿ, ಪರ–ವಿರೋಧದ ಜತೆಗೆ ವಾದ–ವಿವಾದಗಳು ನಡೆದು, ಸಚಿವರ ಮೇಲೆ ನಿಧಿಗಳ್ಳತನ ಆರೋಪ ಕೇಳಿಬಂದಿತ್ತು. ತದನಂತರ ಮತ್ತೊಮ್ಮೆ ವಿವಿಧ ಪೂಜಾ ಕಾರ್ಯಕ್ರಮಗಳಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಜೀರ್ಣೋದ್ಧಾರ ಕಾಮಗಾರಿ ಅರೆಬರೆಯಾಗಿ ಮಾಡಿದ್ದು, ದೇವಸ್ಥಾನ ಸೋರುತ್ತಿದೆ.
ಮಳೆ ಬಂದರೆ ಸಾಕು, ಗರ್ಭಗುಡಿ, ಶಿವಲಿಂಗ ದೇವಸ್ಥಾನ, ಶಬರಿ ಮಾತೆ ಮೂರ್ತಿ ಸೇರಿ ದೇವಸ್ಥಾನದ ಪ್ರದಕ್ಷಿಣೆ ಮಾಡುವ ಸ್ಥಳದಲ್ಲಿ ಕಲ್ಲುಬಂಡೆಗಳಿಂದ ನೀರು ಸೋರಿ ಪ್ರಾಂಗಣದಲ್ಲಿ ನಿಲ್ಲುತ್ತಿವೆ. ಗಮನಿಸದೆ ಹೆಜ್ಜೆ ಇಟ್ಟರೆ ಕಾಲು ಜಾರಿ, ಆಸ್ಪತ್ರೆ ಸೇರಬೇಕಾದ ಸ್ಥಿತಿ ಪ್ರಾಂಗಣದ ಕೆಲ ಭಾಗದಲ್ಲಿ ಹಾಕಿದ ಟೈಲ್ಸ್ ಮೇಲಿದೆ.
ಮಳೆ ಬಂದಾಗಲೆಲ್ಲ ದೇವಸ್ಥಾನ ಸೋರುತ್ತಿದ್ದು, ತಾಲ್ಲೂಕು ಆಡಳಿತವಾಗಲಿ, ದೇವಸ್ಥಾನದ ಆಡಳಿತ ಸಿಬ್ಬಂದಿಯಾಗಲಿ ತಲೆ ಕೆಡೆಸಿಕೊಳ್ಳುತ್ತಿಲ್ಲ. ಮಳೆ ಬಂದಾಗಲೆಲ್ಲ ನೀರು ಸೋರಿ ನಿಂತರೆ, ಮಹಿಳೆಯೊಬ್ಬರು ಪೊರಕೆಯಿಂದ ನೀರು ಹೊರ ಹಾಕುತ್ತಿರುತ್ತಾರೆ. ಈ ಬಗ್ಗೆ ಯಾವ ಜನಪ್ರತಿನಿಧಿಯೂ, ಧಾರ್ಮಿಕ ದತ್ತಿ ಇಲಾಖೆಯೂ ಕಾಳಜಿವಹಿಸುತ್ತಿಲ್ಲ.
ದೇವಸ್ಥಾನದ ಅರ್ಚಕರು ಅನಿವಾರ್ಯವಾಗಿ ಸೋರುವ ಮಳೆ ನೀರಿನಲ್ಲಿ ದೇವಿಗೆ ಪೂಜೆ, ಅರ್ಚನೆ ಸೇರಿ ವಿಶೇಷ ಪೂಜೆಗಳನ್ನು ಮಾಡುತ್ತಾರೆ.
ಅರೆಬರೆ ಕಾಮಗಾರಿ: ದೇವಸ್ಥಾನ ಜೀರ್ಣೋದ್ಧಾರ ಕೆಲಸವು ಅರೆಬರೆಯಾಗಿ ಮಾಡಿದ್ದು, ದೇವಸ್ಥಾನ ಮತ್ತು ಪ್ರಾಂಗಣದಲ್ಲಿ ನಿರ್ಮಿಸಿದ ಕಲ್ಲುಬಂಡೆಗಳ ನಡುವೆ ಸರಿಯಾಗಿ ಸಿಮೆಂಟ್ ಮಾಡದ ಕಾರಣ ಸಿಕ್ಕಾಪಟ್ಟೆ ಮಳೆ ನೀರು ಸೋರುತ್ತಿವೆ. ದೇವಸ್ಥಾನ ಮೇಲ್ಭಾಗದಲ್ಲಿ ಸಿಮೆಂಟ್ ಕಾಂಕ್ರೀಟ್ ಒಂದು ಕಡೆಹಾಕಿ, ಮತ್ತೊಂದು ಕಡೆ ಹಾಗೇ ಬಿಡಲಾಗಿದೆ.
ಜಯಲಕ್ಷ್ಮಿ ದೇವಸ್ಥಾನ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಮಳೆ ಬಂದರೆ ನೀರು ಸೋರುತ್ತಿದೆ. ನೀರು ಸ್ವಚ್ಛ ಮಾಡುವವರೆಗೆ ಸಂಚರಿಸಲು ಆಗುವುದಿಲ್ಲ. ನೀರು ಸೋರದಂತೆ ಕಾಮಗಾರಿ ಮಾಡಬೇಕು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅರ್ಚಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪಂಪಾಸರೋವರ ದೇವಸ್ಥಾನದ ಮೇಲ್ಭಾಗದಲ್ಲಿ ನೀರು ಸೋರದಂತೆ ಕಾಂಕ್ರೀಟ್ ಹಾಕದಿರುವುದರಿಂದ ಮಳೆಗೆ ದೇವಸ್ಥಾನ ಸೋರುತ್ತಿದೆ. ಜೀರ್ಣೋದ್ಧಾರ ಕಾಮಗಾರಿ ಅಪೂರ್ಣವಾಗಿದೆ. ಈ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಅವರ ಆಪ್ತರಿಗೆ ಮಾಹಿತಿ ನೀಡಲಾಗಿದೆ. ಕಾಮಗಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಹಾಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.