ಕಾರಟಗಿ: ಧರ್ಮದ ಹೆಸರಲ್ಲಿಎಲ್ಲಡೆ ಕೋಮು ಸಾಮರಸ್ಯ ಕದಡಲಾಗುತ್ತಿದೆ. ಅನ್ಯ ಧರ್ಮಗಳ ನಡುವೆ ಸೌಹಾರ್ದತೆ ಬೆಳಸುವ ಆಶಯದಿಂದ ಮುಸ್ಲಿಂ ಬಾಂಧವರಿಗೆ ಇಪ್ತಾರ್ ಕೂಟ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಈಚೆಗೆ ತಮ್ಮ ನಿವಾಸದಲ್ಲಿ ರಂಜಾನ್ ಅಂಗವಾಗಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಿ ಅವರು ಮಾತನಾಡಿದರು.
ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದಂತಹ ಘಟನೆಗಳಿಂದ ಕೋಮು ಸಾಮರಸ್ಯ ಹಾಳಾಗುತ್ತಿದೆ. ಪ್ರತಿ ವರ್ಷ ಮಸೀದಿಯಲ್ಲಿ ನಡೆಸುತ್ತಿದ್ದ ಇಫ್ತಾರ್ ಕೂಟವನ್ನು ನಮಗೂ ಪುಣ್ಯ ಲಭಿಸಲಿ ಎಂಬ ಆಶಯದಿಂದ ನಮ್ಮ ನಿವಾಸದಲ್ಲಿ ಆಯೋಜನೆ ಮಾಡಲಾಗಿದೆ ಎಂದು.
ಶ್ರಾವಣ ಮಾಸ ಹಿಂದೂಗಳಿಗೆ ಹಾಗೂ ರಂಜಾನ್ ತಿಂಗಳು ಮುಸ್ಲಿಂ ಸಮಾಜದವರಿಗೆ ಪವಿತ್ರವಾದ ದಿನಗಳು. ಧರ್ಮ ಮತ್ತು ಆಚರಣೆಗಳು ಭಿನ್ನವಾಗಿ ಇದ್ದರೂ ನಾವೆಲ್ಲಾ ಮನುಷ್ಯರು ಎಂಬ ಸಂದೇಶ ಸಾರಲು ರೋಜಾದಲ್ಲಿ ಇರುವ ಮುಸ್ಲಿಮರನ್ನು ಸತ್ಕರಿಸಲಾಯಿತು ಎಂದು ಹೇಳಿದರು.
ಮುಸ್ಲಿಂ ಸಮಾಜದ ಮುಖಂಡರಾದ ಸಿರಾಜ್, ಖಾಜಾ ಹುಸೇನ್ ಮುಲ್ಲಾ, ಬಾಬುಸಾಬ್ ಬಳಿಗೇರ ಮಾತನಾಡಿದರು.
ಪ್ರಮುಖರಾದ ಶಶಿಧರಗೌಡ, ಅಯ್ಯಪ್ಪ ಉಪ್ಪಾರ, ಗನಿಸಾಬ, ಮಹಮದ್ ರಫಿ ಇತರರು ಇದ್ದರು.
‘ಕೋಮು ವದಂತಿಗೆ ಕಿವಿಗೊಡದಿರಿ’
ಗಂಗಾವತಿ: ‘ಧರ್ಮದ ಹೆಸರಿನಲ್ಲಿ ದೇಶ ವಿಭಜಿಸಲು ಯತ್ನಿಸುತ್ತಿರುವವರಿಗೆ ಹಿಂದೂ-ಮುಸ್ಲಿಮರು ಭಾವೈಕ್ಯದ ಸಂಕೇತ ಎಂಬುದು ತಿಳಿಯುವಂತೆ ಒಗ್ಗೂಡಿ ಬದುಕಬೇಕು‘ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ ಹೇಳಿದರು.
ನಗರದಲ್ಲಿ ಈಚೆಗೆ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸಿ ಮಾತನಾಡಿದ ಅವರುರು, ’ಧಾರ್ಮಿಕ ವಿಭಜನೆ ಮೂಡಿಸಿ, ಜನರ ನಡುವೆ ವೈಷಮ್ಯ ಬೆಳೆಸುವ ಕೆಲಸಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಕೋಮು ಗಲಭೆಯ ವದಂತಿಗಳಿಗೆ ಜನರು ಕಿವಿಗೊಡದೆ, ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಬೇಕು‘ ಎಂದರು.
‘ಎಲ್ಲರಲ್ಲಿ ಹರಿಯುವ ರಕ್ತ ಒಂದೇ. ಎಲ್ಲರಲ್ಲಿನ ಸಹೋದರತ್ವ ಭಾವನೆ ಕಂಡು ಬದುಕಬೇಕು. ಮಾಜಿ ಸಂಸದ ಎಚ್.ಜಿ ರಾಮುಲು ಅವರ ಕುಟುಂಬ ನಿರಂತರವಾಗಿ ಮುಸ್ಲಿಂ ಸಮಾಜವನ್ನು ಬೆಂಬಲಿಸಿಕೊಂಡು ಬರುತ್ತಿದೆ‘ ಎಂದು ಹೇಳಿದರು. ಎಚ್.ಎಸ್ ಭರತ್, ಮುಸ್ಲಿಂ ಸಮಾಜದ ಮುಖಂಡ ಡಾ.ಇಲಿಯಾಸ್ ಬಾಬ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.