ಕೊಪ್ಪಳ: ಒಂದು ತಿಂಗಳು ಉಪವಾಸ ಮಾಡಿದ್ದ ಮುಸ್ಲಿಂ ಸಮುದಾಯದ ಜನ ಗುರುವಾರ ಸಂಭ್ರಮದಿಂದ ರಂಜಾನ್ ಆಚರಿಸಿದರು.
ಹಳೆ ಜಿಲ್ಲಾಸ್ಪತ್ರೆ ಪಕ್ಕದಲ್ಲಿ ಮತ್ತು ಹೂಲಿಕೆರೆ ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಳಿಕ ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು. ಮಕ್ಕಳು, ಹಿರಿಯರು ಅನೇಕರು ಹೊಸಬಟ್ಟೆ, ಟೋಪಿ ಧರಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು. ಬಿಸಿಲಿನ ತಾಪ ಹೆಚ್ಚಿದ್ದ ಕಾರಣ ಅನೇಕ ಹಿರಿಯರು ಕೊಡೆ ಹಿಡಿದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಕ್ಕಳಿಗೂ ನೆರಳಿನ ಆಸರೆ ನೀಡಿದರು.
’ಈದ್ ಉಲ್ ಫಿತ್ರ್’ ಅಂಗವಾಗಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮನೆಯಲ್ಲಿ ತರಹೇವಾರಿ ಅಡುಗೆ ಮಾಡಲಾಗಿತ್ತು. ಸ್ನೇಹಿತರು, ಸಂಬಂಧಿಕರು ಮತ್ತು ಆತ್ಮೀಯರನ್ನು ಕರೆದು ಊಟದ ವ್ಯವಸ್ಥೆ ಮಾಡಿದ್ದರು. ಹಣ್ಣು, ಸಿಹಿ ನೀಡಲಾಯಿತು.
ಬೆಳಿಗ್ಗೆ 10 ಗಂಟೆಗೆ ಪ್ರಾರ್ಥನೆ ಆರಂಭವಾಯಿತು. ಈ ವೇಳೆಗಾಗಲೇ ಬಿಸಿಲು ಹೆಚ್ಚಾಗಿದ್ದರಿಂದ ಪ್ರಾರ್ಥನೆ ಮುಗಿಸಿಕೊಂಡು ಹೋಗುವಾಗ ಜನ ತಂಪುಪಾನೀಯ ಮೊರೆ ಹೋದರು. ಬೇರೆ ಬೇರೆ ಸಮುದಾಯಗಳ ಜನ ಬಂದು ಮುಸ್ಲಿಮರನ್ನು ಆಲಂಗಿಸಿ ಶುಭಾಶಯ ಕೋರಿದರು.
ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು, ಶಾಸಕ ರಾಘವೇಂದ್ರ ಹಿಟ್ನಾಳ, ಮಾನ್ವಿ ಪಾಷಾ, ಕಾಟನ್ ಪಾಷಾ, ಬಿಜೆಪಿ ಬಳ್ಳಾರಿ ವಿಭಾಗದ ಸಹ ಪ್ರಭಾರಿ ಚಂದ್ರಶೇಖರ ಪಾಟೀಲ ಹಲಗೇರಿ, ಸುನಿಲ್ ಹೆಸರೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಭಾಗ್ಯನಗರ: ಇಲ್ಲಿಗೆ ಸಮೀಪದ ಭಾಗ್ಯನಗರದಲ್ಲಿಯೂ ಸಂಭ್ರಮದಿಂದ ರಂಜಾನ್ ಆಚರಿಸಲಾಯಿತು. ಭೀಕರ ಬರಗಾಲ ಕಾಡುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಭಾಗ್ಯನಗರದ ಈದ್ಗಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗ್ಯನಗರ ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಇಬ್ರಾಹಿಂಸಾಬ್ ಬಿಸರಳ್ಳಿ, ಪ್ರಮುಖರಾದ ಹೊನ್ನೂರುಸಾಬ್ ಬೈರಾಪುರ, ಮೌಲಾ ಹುಸೇನ್ ಹಣಗಿ, ಕಬೀರಸಾಬ್ ಬೈರಾಪುರ, ರಶೀದ್ ಸಾಬ್, ಪಿ. ಶರೀಫ್‌ಸಾಬ್, ಎಫ್.ಎ. ನೂರಭಾಷಾ, ಹಾಜಿ ಋತಬುದ್ದೀನ್ ಸಾಬ್, ಮೆಹಬೂಬ್ ಬಳಿಗಾರ, ಬಾಬಾ ಪಟೇಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.