ADVERTISEMENT

ಕುದ್ರೆಲ್ಲೇಶ್ವರ ಜಾತ್ರೆ: ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 15:45 IST
Last Updated 11 ಏಪ್ರಿಲ್ 2024, 15:45 IST
ಯಲಬುರ್ಗಾ ತಾಲ್ಲೂಕು ಹುಲೆಗುಡ್ಡ ಗ್ರಾಮದ ಕುದ್ರೆಲ್ಲೇಶ್ವರ ಜಾತ್ರೋತ್ಸವದ ಪ್ರಯುಕ್ತ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತು
ಯಲಬುರ್ಗಾ ತಾಲ್ಲೂಕು ಹುಲೆಗುಡ್ಡ ಗ್ರಾಮದ ಕುದ್ರೆಲ್ಲೇಶ್ವರ ಜಾತ್ರೋತ್ಸವದ ಪ್ರಯುಕ್ತ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತು   

ಯಲಬುರ್ಗಾ: ತಾಲ್ಲೂಕಿನ ಹುಲೆಗುಡ್ಡ ಗ್ರಾಮದ ಕುದ್ರೆಲ್ಲೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತು.

ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ಸಭೆ, ಹಾಲೋಕಳಿ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ಮನುಷ್ಯ ಮನುಷ್ಯರ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಒಡಮೂಡಿ ಎಲ್ಲರೂ ಒಂದೇ ಎಂದು ಭಾವಿಸಿ ಜೀವನ ನಡೆಸಿದರೆ ಮಾತ್ರ ಸೌಹಾರ್ದಯುತ ಮತ್ತು ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯವಿದೆ’ ಎಂದು ಹೇಳಿದರು.

ADVERTISEMENT

ಕುಕನೂರಿನ ಅನ್ನದಾನೇಶ್ವರ ಮಠದ ಮಹಾದೇವ ಸ್ವಾಮೀಜಿ ಮಾತನಾಡಿ, ‘ಮಕ್ಕಳಿಗೆ ವಿದ್ಯೆಯ ಜತೆಗೆ ಒಳ್ಳೆಯ ಸಂಸ್ಕಾರಗಳನ್ನು ಕಲಿಸಿಕೊಡುವುದು ಮುಖ್ಯವಾಗಿದೆ. ಈಚೆಗೆ ದುಶ್ಚಟಗಳನ್ನು ಫ್ಯಾಷನ್ ರೀತಿಯಲ್ಲಿ ಕಲಿತುಕೊಳ್ಳುತ್ತಿರುವ ಯುವಕರ ಪಡೆ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ಸಮಾಜ ಮತ್ತು ಪಾಲಕರು ಒಗ್ಗೂಡಿ ನಿಯಂತ್ರಣಕ್ಕೆ ತರುವುದು ಮುಖ್ಯವಾಗಿದೆ ಎಂದರು.

ಜಿ.ಪಂ. ಮಾಜಿ ಸದಸ್ಯ ಶಿವಶಂಕರ ದೇಸಾಯಿ, ಜೆಡಿಎಸ್ ಜಿಲ್ಲಾ ಮುಖಂಡ ಮಲ್ಲನಗೌಡ ಕೊನನಗೌಡ್ರ ಸೇರಿ ಅನೇಕರು ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷ ಶರಣಪ್ಪ ಕೊಪ್ಪದ, ಮುಖಂಡ ಸಿದ್ದು ಮಣ್ಣಿನವರ, ಈಶ್ವರ ಅಟಮಾಳಗಿ, ಮಾನಪ್ಪ ಪೂಜಾರ, ಅಯ್ಯನಗೌಡ ಕೆಂಚಮ್ಮನವರ, ಶರಣಯ್ಯ ಸರಗಣಚಾರಮಠ, ಬಾಳಪ್ಪ ಬಂಡಿ, ಸಂಗಮೇಶ ಪೂಜಾರ, ಮಂಜುನಾಥ ಕಲ್ಲೂರು, ದುರಗನಗೌಡ ಪೋಲೀಸ್ ಪಾಟೀಲ, ಶರಣಪ್ಪ ಮಾಲಿಗೌಡ್ರ, ಯಂಕಪ್ಪ ಜುಟ್ಲದ, ಭೀಮಣ್ಣ ಮುರಡಿ, ರಮೇಶ, ಕೆ.ಎಸ್.ಮಾಲಿಗೌಡ್ರ, ಹನಮಗೌಡ ಮಾಲಿಗೌಡ್ರ ಹಾಜರಿದ್ದರು.

ರಥೋತ್ಸವ: ನೂತನ ರಥದ ಪ್ರಥಮ ರಥೋತ್ಸವ ನೋಡುವುದಕ್ಕಾಗಿಯೇ ದೂರದ ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ಗೆದಗೇರಿ ಗ್ರಾಮಸ್ಥರಿಂದ ತೇರಿನ ಕಳಕ, ಮಕ್ಕಳ್ಳಿ ಹಾಗೂ ಸಾಲಭಾವಿ ಗ್ರಾಮಸ್ಥರಿಂದ ರುದ್ರಾಕ್ಷಿ ಮಾಲೆ, ನರಸಾಪೂರದಿಂದ ನಂದಿಕೋಲು, ಬಸರಿಹಾಳ ಗ್ರಾಮದಿಂದ ರಥ ಎಳೆಯುವ ಹಗ್ಗವನ್ನು ಮೆರವಣಿಗೆಯ ಮೂಲಕ ತರಲಾಯಿತು.

ಗ್ರಾಮದ ಸುತ್ತಲಿನ ಗ್ರಾಮಗಳಾದ ತಲ್ಲೂರು, ಮುರಡಿ, ಚಿಕ್ಕಮ್ಯಾಗೇರಿ, ವಜ್ರಗಂಡಿ, ಜರಕುಂಟಿ, ಮದ್ಲೂರು, ಗಾಣದಾಳ, ಚಿಕ್ಕವಂಕಲಕುಂಟಾ ಸೇರಿ ವಿವಿಧ ಗ್ರಾಮಸ್ಥರು ಹಾಜರಿದ್ದರು. ರಥೋತ್ಸವದಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.