ಗಂಗಾವತಿ: ಇಲ್ಲಿನ ಇಂದಿರಾ ನಗರದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಕಸದ ಮಧ್ಯೆಯೇ ಪಡಿತರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಆದ್ದರಿಂದ ಅಕ್ಕಿ ಜತೆ ರೋಗವೂ ಉಚಿತ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ.
ನಿವಾಸಿಗಳು ಸಂಬಂಧಿಸಿದವರಿಗೆ ಹಲವು ಬಾರಿ ಮನವಿ ಮಾಡಿದರೂ ಪಡಿತರ ಕೇಂದ್ರದ ಎದುರಿನ ಕಸವನ್ನು ವಿಲೇವಾರಿ ಮಾಡಿಲ್ಲ. ಆದ್ದರಿಂದ ಕಸದ ರಾಶಿ ನಿರ್ಮಾಣವಾಗಿದೆ. ಅದು ದುರ್ನಾತ ಬೀರುತ್ತಿದೆ.
‘ನಗರಸಭೆಯವರು ವಾರ್ಡ್‌ನಲ್ಲಿಯ ಚರಂಡಿಯನ್ನು ಮಾತ್ರ ಸ್ವಚ್ಛ ಮಾಡುತ್ತಾರೆ. ಕಸ ಎತ್ತಿಕೊಂಡು ಹೋಗುವುದಿಲ್ಲ’ ಎಂದು ನಿವಾಸಿಗಳು ಆರೋಪಿಸಿದರು.
ದುರ್ನಾತದ ಮಧ್ಯೆ ವಿತರಣೆ: ಕಸ ದುರ್ನಾತ ಬೀರಿದರೂ ನ್ಯಾಯಬೆಲೆ ಅಂಗಡಿಯವರು ಕ್ರಮಕೈಗೊಳ್ಳುತ್ತಿಲ್ಲ. ಹಾಗೆಯೇ ಸಾರ್ವಜನಿಕರಿಗೆ ಧಾನ್ಯ ವಿತರಣೆ ಮಾಡುತ್ತಿದ್ದಾರೆ. ಜನ ಮೂಗು ಮುಚ್ಚಿಕೊಂಡೆ ಪಡಿತರ ಪಡೆಯುತ್ತಾರೆ.
ಕಸದ ರಾಶಿಯ ಕಾರಣಕ್ಕೆ ಸಂಜೆ ಸೊಳ್ಳೆಗಳ ಕಾಟ ಶುರುವಾಗುತ್ತದೆ. ಕಸದಲ್ಲಿಯ ಹುಳಗಳು ನ್ಯಾಯಬೆಲೆ ಅಂಗಡಿಯೊಳಗಿನ ಪಡಿತರಧ್ಯಾನ ಸೇರಿಕೊಳ್ಳುವ ಆತಂಕವನ್ನೂ ನಿವಾಸಿಗಳು ವ್ಯಕ್ತಪಡಿಸುತ್ತಾರೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯೂ ಹೆಚ್ಚಿದೆ ಎನ್ನುತ್ತಾರೆ.
ಪಡಿತರ ಅಂಗಡಿ ಮುಂದೆ ಕಸದ ರಾಶಿ ನಿರ್ಮಾಣವಾಗಲು ಸುತ್ತಮುತ್ತಲಿನ ಅಂಗಡಿಗಳ ವ್ಯಾಪಾರಸ್ಥರೇ ಕಾರಣ ಎನ್ನಲಾಗುತ್ತಿದೆ. ಕಸವನ್ನು ತಂದು ನ್ಯಾಯಬೆಲೆ ಅಂಗಡಿ ಮುಂದೆ ಬಿಸಾಡಿ ಹೋಗುತ್ತಾರೆ. ಈ ಬಗ್ಗೆ ಯಾರೂ ಪ್ರಶ್ನಿಸುವ ಆಗಿಲ್ಲ. ಒಂದು ವೇಳೆ ಪ್ರಶ್ನಿಸಿದರೆ, ಗಲಾಟೆ ಮಾಡುತ್ತಾರೆ ಎಂದು ನಿವಾಸಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.