ADVERTISEMENT

ತಾವರಗೇರಾ | ಹಿಂಗಾರು ಮಳೆ: ರಾಯನಕೆರೆಗೆ ಜೀವಕಳೆ

ಕೆರೆ ನೀರಿನ ಸಂಗ್ರಹದಿಂದ ಅಂತರ್ಜಲ ಮಟ್ಟ ಹೆಚ್ಚಳ

ಕೆ.ಶರಣಬಸವ ನವಲಹಳ್ಳಿ
Published 16 ಅಕ್ಟೋಬರ್ 2024, 6:25 IST
Last Updated 16 ಅಕ್ಟೋಬರ್ 2024, 6:25 IST
ತಾವರಗೇರಾ ಪಟ್ಟಣದ ರಾಯನಕೆರೆ ಭರ್ತಿಯಾಗಿರುವುದು
ತಾವರಗೇರಾ ಪಟ್ಟಣದ ರಾಯನಕೆರೆ ಭರ್ತಿಯಾಗಿರುವುದು   

ತಾವರಗೇರಾ: ಪಟ್ಟಣದ ಜನರ ಜೀವನಾಡಿಯಾದ ರಾಯನಕೆರೆಯು ಇತ್ತೀಚೆಗೆ ಸುರಿದ ಹಿಂಗಾರು ಮಳೆಯಿಂದ ಭರ್ತಿಯಾಗಿದ್ದು, ಪಟ್ಟಣ ನಿವಾಸಿಗಳ ಮೊಗದಲ್ಲಿ ಹರ್ಷ ಮೂಡಿದೆ.

42 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯು ಸಂಪೂರ್ಣ ಭರ್ತಿಯಾಗಿದ್ದು, ಈ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಆಗಲಾರದು ಎಂಬ ಆಶಾಭಾವನೆ ಪಟ್ಟಣದ ನಿವಾಸಿಗಳದ್ದಾಗಿದೆ. ಕೆರೆಯು ಭರ್ತಿಯಾಗಿರುವ ಕಾರಣ  ಪಟ್ಟಣದ ವಿವಿಧ ಕಡೆ ಅಂತರ್ಜಲ ಹೆಚ್ಚಳವಾಗಿ, 15ಕ್ಕೂ ಹೆಚ್ಚು ತೆರದ ಬಾವಿಗಳು ನೀರಿನಿಂದ ತುಂಬಿವೆ.

ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ಈಚೆಗೆ ತಡೆಗೋಡೆ, ಕೆರೆ ಮುಂದಿನ ಕಾಲುವೆ ನಿರ್ಮಾಣ ಕಾಮಗಾರಿ ನಡೆದಿದೆ. ಆದರೆ ಹಿನ್ನಿರಿನ ಕಾಲುವೆ ದುರಸ್ತಿ ಮಾಡದ ಕಾರಣ ಮಳೆ ಬಂದಾಗ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದೆ. ಹಾಗಾಗಿ ಇಲಾಖೆ ಅಧಿಕಾರಿಗಳು ಕೆರೆಗೆ ನೀರು ಹರಿದು ಬರುವಂತೆ ನೂತನ ಕಾಲುವೆ ನಿರ್ಮಾಣ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ADVERTISEMENT
ಈ ವರ್ಷ ಮಳೆರಾಯನ ಕೃಪೆಯಿಂದ ಪಟ್ಟಣದ ರಾಯನಕೆರೆ ಭರ್ತಿಯಾಗಿದೆ. ಆದರೆ ಕೆರೆ ಹಿನ್ನಿರು ಕಾಲುವೆ ಸ್ವಚ್ಛತೆಗೆ ಅಧಿಕಾರಿಗಳು ಮುಂದಾಗಬೇಕು.
ಚಂದ್ರಶೇಖರ ಗುರಿಕಾರ, ತಾವರಗೇರಾ ‌ನಿವಾಸಿ

‘ತಾವರಗೇರಾ ‌ರಾಯನಕೆರೆಯನ್ನು ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ‌ನಡೆಸಲಾಗಿದೆ. ಹಿನ್ನಿರಿನಲ್ಲಿ‌ ನೂತನ ಕಾಲುವೆ ನಿರ್ಮಾಣಕ್ಕೆ ಈಗಾಗಲೇ ಸರ್ವೆ ಕಾರ್ಯ ‌ಮುಗಿದಿದೆ. ಪ್ರಸ್ತುತ ಹಿಂಗಾರು‌ ಮಳೆಗೆ ಕೆರೆ ತುಂಬಿದ್ದು, ಅಂತರ್ಜಲ ಹೆಚ್ಚಾಗಿ ಸಾರ್ವಜನಿಕರಿಗೆ ಅನುಕೂಲವಾಗಿದೆ’ ಎಂದು ಸಣ್ಣ ನೀರಾವರಿ ‌ಇಲಾಖೆ‌ ಅಧಿಕಾರಿಯೊಬ್ಬರು ಮಾಹಿತಿ ‌ನೀಡಿದರು.

ಈ ಕೆರೆಯಲ್ಲಿ ಸುಮಾರು 5 ರಿಂದ 6 ಅಡಿ ಹೂಳು ತುಂಬಿಕೊಂಡಿದ್ದ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಆಗುತ್ತಿರಲಿಲ್ಲ. ಅಲ್ಲದೇ ಕೆರೆಯಲ್ಲಿ ಮುಳ್ಳುಕಂಟಿ ಬೆಳೆದು ನೀರಿಲ್ಲದೇ ಭಣಗುಡುತ್ತಿತ್ತು. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿತ್ತು. ಇದನ್ನು ಮನಗಂಡ ಸಾರ್ವಜನಿಕರು 2019ರಲ್ಲಿ ಪಟ್ಟಣದ ಕೆರೆ ಅಭಿವೃದ್ಧಿ ಸಮಿತಿ ಮತ್ತು ಪೊಲೀಸ್ ಇಲಾಖೆ, ಕೊಪ್ಪಳ ಗವಿ ಮಠದ ಸಹಯೋಗದಲ್ಲಿ ಕೆರೆಯ ಹೂಳೆತ್ತುವ ಕಾರ್ಯ ಕೈಗೊಂಡಿದ್ದರು. ಈ ಕಾರ್ಯಕ್ಕೆ ಪಟ್ಟಣದ ಯುವಕರು, ಹಿರಿಯರು, ರೈತರು, ಎಲ್ಲಾ ಸಮುದಾಯಗಳು ಕೈ ಜೋಡಿಸಿದಲ್ಲದೇ ದೇಣಿಗೆಯನ್ನು ನೀಡಿದ್ದರು. ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಕನಕಗಿರಿಯ ಸುವರ್ಣಗಿರಿ ವಿರಕ್ತ ಮಠದ ಚನ್ನಮಲ್ಲ ಸ್ವಾಮೀಜಿ, ಅಂದಿನ ಸಂಸದ ಕರಡಿ ಸಂಗಣ್ಣ ಅವರು ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದರು. 

ತಾವರಗೇರಾ ಪಟ್ಟಣದಲ್ಲಿ ಈಚೆಗೆ ಸುರಿದ ಮಳೆಗೆ ರಾಯನಕೆರೆ ಕೋಡಿಯಲ್ಲಿ ನೀರು ಹರಿಯುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.