ADVERTISEMENT

ರಾಯರ ಮಠದ ಸತ್ಯಕ್ಕೆ ಸಂದ ಜಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 16:22 IST
Last Updated 9 ಜುಲೈ 2024, 16:22 IST
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ರಾಯರ ಮಠದಲ್ಲಿ ಸೋಮವಾರ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಶಿಷ್ಯರು ನ್ಯಾಯಾಲಯ ಆದೇಶ ಪ್ರತಿ ತೋರಿಸುತ್ತಿರುವುದು
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ರಾಯರ ಮಠದಲ್ಲಿ ಸೋಮವಾರ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಶಿಷ್ಯರು ನ್ಯಾಯಾಲಯ ಆದೇಶ ಪ್ರತಿ ತೋರಿಸುತ್ತಿರುವುದು   

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ನವವೃಂದಾವನ ಗಡ್ಡೆಯಲ್ಲಿನ 9 ಯತಿಗಳ ಪೈಕಿ 3 ಯತಿಗಳ ಪೂಜೆಗೆ ಶಾಶ್ವತ ನಿರ್ಬಂಧ ಕೋರಿ ರಾಯರ ಮಠದ ವಿರುದ್ಧ ಉತ್ತರಾದಿಮಠ ಸಲ್ಲಿಸಿದ ದಾವೆಯನ್ನು ಹೈಕೋರ್ಟ್‌ ವಜಾಗೊಳಿಸಿದ ಹಿನ್ನೆಲೆಯಲ್ಲಿ ಸೋಮವಾರ ರಾಯರ ಮಠದ ಸ್ವಾಮೀಜಿ, ಭಕ್ತರು ಸೇರಿ ಆನೆಗೊಂದಿ ರಾಯರಮಠ ಮತ್ತು ನವವೃಂದಾವನ ಗಡ್ಡೆಯಲ್ಲಿ ಸಂಭ್ರಮಾಚರಿಸಿದರು.

ರಾಯರ ಮಠಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡದಂತೆ ಕೋರಿ ಉತ್ತರಾದಿಮಠ ಸಲ್ಲಿಸಿದ ದಾವೆ, ವಿವಿಧ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಕೆಯಾಗಿ, 32 ವರ್ಷಗಳಿಂದ ಉಭಯ ಮಠಗಳ ನಡುವೆ ವ್ಯಾಜ್ಯ ನಡೆಯುತ್ತಿತ್ತು. ಇದೀಗ ರಾಯರ ಮಠದ ಪೂಜೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಅವಕಾಶ ಕಲ್ಪಿಸಿದ್ದು, ಮಂತ್ರಾಲಯದ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶಿಷ್ಯರ ಸಮೇತ ಆನೆಗೊಂದಿಗೆ ಭೇಟಿ
ನೀಡಿದರು.

ಸಮರ್ಪಣಾ ಸಂಭ್ರಮಾಚರಣೆ: 3 ಯತಿಗಳ ಪೂಜೆ ವಿಚಾರವಾಗಿ ರಾಯರಮಠದ ಪರ ನ್ಯಾಯಾಲಯ ತೀರ್ಪು ಬಂದ ಹಿನ್ನೆಲೆಯಲ್ಲಿ ಭಕ್ತರು ಆನೆಗೊಂದಿ ರಾಯರಮಠದಿಂದ ತುಂಗಭದ್ರಾ ನದಿ ತಟದವರೆಗೆ ಮೆರವಣಿಗೆ ನಡೆಸಿ, ಸಂಭ್ರಮಾಚರಣೆ ಮಾಡಿದರು.

ADVERTISEMENT

ಮೆರವಣಿಗೆ ಮಧ್ಯದಲ್ಲಿ ಭಕ್ತರು ಕುಣಿದು ಕುಪ್ಪಳಿಸಿದರು. ಬೋಟಿನಲ್ಲಿ ನವವೃಂದಾವನಗಡ್ಡೆಗೆ ಭೇಟಿ ನೀಡುತ್ತಿದ್ದಂತೆ ಭಕ್ತರು ಪರಸ್ಪರ ಬಣ್ಣ ಎರಚಿಕೊಂಡು, ವಿಜಯೋತ್ಸವ ಆಚರಿಸಿ, ಪಟಾಕಿ ಸಿಡಿಸಿದರು. ನಂತರ ನದಿಯಲ್ಲಿ ಸ್ನಾನ ಮಾಡಿ ಪೂಜೆಗೆ ತೆರಳಿದರು.

ವಿಶೇಷ ಪೂಜೆ: ನವವೃಂದಾವನ ಗಡ್ಡೆಗೆ ತೆರಳಿದ ನಂತರ ರಾಯರಮಠದ ಶ್ರೀಗಳು ಮೂಲ ರಾಮದೇವರಿಗೆ ವಿಶೇಷ ಪೂಜೆ, ನಿರ್ಮಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಅಲಂಕಾರ, ಒಂಬತ್ತು ಬೃಂದಾವನಕ್ಕೆ ವಸ್ತ್ರಾಲಂಕಾರ, ಪುಷ್ಪಾಲಂಕಾರ, ಅಷ್ಟೋದಕ ಸೇರಿದಂತೆ ಭಕ್ತರಿಗೆ ತೀರ್ಥ ಪ್ರಸಾದ, ಪ್ರವಚನ ನೀಡಲಾಯಿತು.

ವಾದಿರಾಜ್ ಆಚಾರ್, ವಾಧೀಂದ್ರ ಆಚಾರ್, ಸುರೀಂದ್ರ ಆಚಾರ್, ಡಣಾಪುರ ವಿಜಯ್, ದ್ವಾರಕನಾಥ, ಗುರುರಾಜ್ ಆಚಾರ್, ಹನುಮೇಶ, ಹನುಮಂತರಾವ್, ಫಣೀಂದ್ರ, ಢಣಾಪುರ ಶ್ರೀನಿವಾಸ, ರಾಘವೇಂದ್ರರಾವ್, ವಾದೀಂದ್ರ ಆಚಾರ್, ಪ್ರಹ್ಲಾದರಾವ್ ನವಲಿ ಸೇರಿದಂತೆ ಶ್ರೀಮಠದ ಶಿಷ್ಯರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.

ಗಂಗಾವತಿ ತಾಲ್ಲೂಕಿನ ನವವೃಂದಾವನ ಗಡ್ಡೆಯಲ್ಲಿ ರಾಯರ ಮಠದ ಸ್ವಾಮೀಜಿ ಭಕ್ತರೊಂದಿಗೆ ಸಂಭ್ರಮಾಚರಣೆ ಮಾಡಿದ ಕ್ಷಣ
ಅರ್ಜಿ ವಜಾ ಆಗಿದೆ: ಸ್ವಾಮೀಜಿ
ಸುಬುಧೇಂದ್ರ ತೀರ್ಥರು ಪ್ರಕರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ‘ನವವೃಂದಾವನ ಗಡ್ಡೆಯಲ್ಲಿ ಪದ್ಮನಾಭ ತೀರ್ಥರ ಕವೀಂದ್ರತೀರ್ಥರ ವಾಗೀಶ ತೀರ್ಥರಬೃಂದಾವನಗಳಿಗೆ ಪೂಜೆಸಲ್ಲಿಸದಂತೆ ಉತ್ತರಾದಿಮಠದವರು ರಾಯರ ಮಠದ ವಿರುದ್ಧ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಪ್ರಕರಣ ಮುಂದೆ ಹೈಕೋರ್ಟ್‌ನ ಧಾರವಾಡ ಪೀಠಕ್ಕೆ ವರ್ಗಾವಣೆಯಾಗಿತ್ತು. ತದನಂತರ ಹಲವು ಬಾರಿ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸುತ್ತಾ ಸಾಗಿ ಇದೀಗ ನ್ಯಾಯಾಲಯ ರಾಯರಮಠದ ವಿರುದ್ಧ ಉತ್ತರಾಧಿಮಠ ನವವೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡದಂತೆ ಹೂಡಿದ ದಾವೆಯನ್ನು ವಜಾಗೊಳಿಸಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.