ಮುನಿರಾಬಾದ್: ಇಲ್ಲಿನ ರೈಲು ನಿಲ್ದಾಣ ಪ್ರದೇಶದಲ್ಲಿನ ಕೋರಮಂಡಲ್ ಇಂಟರ್‌ನ್ಯಾಷನಲ್ ಲಿಮಿಟೆಡ್– ರಸಾಯನಿಕಗೊಬ್ಬರ ತಯಾರಿಸುವ ಕಾರ್ಖಾನೆಯನ್ನು ತಕ್ಷಣ ಮುಚ್ಚುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಇಲ್ಲಿನ ಮಹಿಳೆಯರು ಆಗ್ರಹಿಸಿದ್ದಾರೆ.
ಹುಲಿಗಿಯ ಶ್ರೀಅಕ್ಕಮಹಾದೇವಿ ಮಹಿಳಾ ಮಂಡಳಿ ವತಿಯಿಂದ ಸೋಮವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಜ್ಜನರ ಪ್ರಕಾಶ್ ಅವರಿಗೆ ಲಿಖಿತ ಮನವಿ ಸಲ್ಲಸಿದರು.
ಸಾರ್ವಜನಿಕರಿಗೆ ಅಸ್ತಮಾ, ಅಲರ್ಜಿ ಮತ್ತು ತುರಿಕೆ, ಉಸಿರಾಟದ ತೊಂದರೆಯಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಮೂರು ವರ್ಷದಿಂದ ಹೋರಾಡುತ್ತಿದ್ದೇವೆ. ತಪಾಸಣೆ ನಡೆಸಿದ ಮಂಡಳಿಯು ಕಾರ್ಖಾನೆ ಮುಚ್ಚಲು ಜು.10ರಂದು ಆದೇಶ ನೀಡಿದ್ದರೂ ಕಂಪೆನಿ ಇನ್ನೂ ಉತ್ಪಾದನೆಯಲ್ಲಿ ತೊಡಗಿದೆ. ಇನ್ನುಮುಂದೆ ಕಾರ್ಖಾನೆಗೆ ನಿರಕ್ಷೇಪಣಾ ಪತ್ರ (ಎನ್‍ಒಸಿ) ನೀಡಬಾರದು ಎಂದು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗೆ ಬರೆದ ಮನವಿಯಲ್ಲಿ ಮಹಿಳಾ ಮಂಡಳಿ ತಾಕೀತು ಮಾಡಿದೆ.
ಮಹಿಳಾ ಮಂಡಳಿಯ ಅಧ್ಯಕ್ಷೆ ವೀರಬಸಮ್ಮಪ್ರಭುರಾಜ್ ಪಾಟೀಲ್, ಕಾರ್ಯದರ್ಶಿ ನಾಗರತ್ನಪೂಜಾರ, ಲಕ್ಷ್ಮೀದೇವಿಪರಮಟ್ಟಿ, ಅನುಸೂಯಾ ಪಾಟೀಲ್, ಹೊನ್ನೂರಬೀ ಜವಳಿ, ಗಿರಿಜಮ್ಮಹನಸಿ, ನಸೀಮಾಬೇಗಮ್, ಅನ್ನಪೂರ್ಣಬಂಗಾರಶೆಟ್ರ, ಹುಸೇನ್‍ಬೀ ಜವಳಿ ನಿಯೋಗದಲ್ಲಿದ್ದರು.
ಹೊಸಹಳ್ಳಿ ಗ್ರಾಮಪಂಚಾಯಿತಿ ಆಡಳಿತಾಧಿಕಾರಿಗೂ ಇದೇ ಮನವಿ ನೀಡಿರುವ ಮಂಡಳಿ ಇನ್ನು ಮುಂದೆ ಕಾರ್ಖಾನೆಗೆ ಎನ್‍ಒಸಿ ನೀಡದಂತೆ ಪಿಡಿಒ ಮತ್ತು ಆಡಳಿತಾಧಿಕಾರಿಗೆ ಮನವಿ ಮಾಡಿದೆ.
ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಖಾಜಾವಲಿಜವಳಿ, ಟಿ.ಕಿಶೋರಕುಮಾರ್, ಮುಸ್ತಫಾ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.