ADVERTISEMENT

ಬಸಾಪಟ್ಟಣ | ಬಸ್ ನಿಲುಗಡೆಗೆ ಒತ್ತಾಯಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 5:36 IST
Last Updated 14 ಅಕ್ಟೋಬರ್ 2023, 5:36 IST
ಗಂಗಾವತಿ ತಾಲ್ಲೂಕಿನ ಬಸಾಪಟ್ಟಣ ಗ್ರಾಮದ ಬಸ್ ನಿಲ್ದಾ ಣದ ಒಳಗಡೆ ಕೊಪ್ಪಳ-ಗಂಗಾವತಿ, ಗಂಗಾವತಿ- ಕೊಪ್ಪಳ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ನಿಲುಗಡೆ ಮಾಡಿ ಸುವಂತೆ ಒತ್ತಾಯಿಸಿ ಕೆ.ಆರ್.ಎಸ್ ಪಕ್ಷದ ನೇತೃತ್ವದಲ್ಲಿ ಗ್ರಾಮಸ್ಥರು ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಗಂಗಾವತಿ ತಾಲ್ಲೂಕಿನ ಬಸಾಪಟ್ಟಣ ಗ್ರಾಮದ ಬಸ್ ನಿಲ್ದಾ ಣದ ಒಳಗಡೆ ಕೊಪ್ಪಳ-ಗಂಗಾವತಿ, ಗಂಗಾವತಿ- ಕೊಪ್ಪಳ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ನಿಲುಗಡೆ ಮಾಡಿ ಸುವಂತೆ ಒತ್ತಾಯಿಸಿ ಕೆ.ಆರ್.ಎಸ್ ಪಕ್ಷದ ನೇತೃತ್ವದಲ್ಲಿ ಗ್ರಾಮಸ್ಥರು ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.   

ಗಂಗಾವತಿ: ತಾಲ್ಲೂಕಿನ ಬಸಾಪಟ್ಟಣ ಗ್ರಾಮದ ಬಸ್ ನಿಲ್ದಾಣದೊಳಗೆ ಗದಗ-ಕೊಪ್ಪಳ-ಗಂಗಾವತಿ, ಗಂಗಾವತಿ-ಕೊಪ್ಪಳ-ಗದಗ-ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ಬಸ್‌ಗಳನ್ನು ನಿಲ್ಲಿಸದೇ ಇದ್ದುದನ್ನು ಖಂಡಿಸಿ, ಶುಕ್ರವಾರ ಕರ್ನಾಟಕ ರಾಷ್ಟ್ರೀಯ ಪಕ್ಷದ ನೇತೃತ್ವದಲ್ಲಿ ಗ್ರಾಮಸ್ಥರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಕೆ.ಆರ್.ಎಸ್ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ನಿರುಪಾದಿ ಕೆ. ಗೊಮರ್ಸಿ ಮಾತನಾಡಿ, ಬಸಾಪಟ್ಟಣ ಗ್ರಾಮದಲ್ಲಿ ₹ 90 ಲಕ್ಷ ಖರ್ಚು ಮಾಡಿ, ಬಸ್ ನಿಲ್ದಾಣ ನಿರ್ಮಿಸಿದ್ದು, ನಿಲ್ದಾಣದ ಒಳಗಡೆ ಬಸ್‌ಗಳೇ ಬರುತ್ತಿಲ್ಲ. ಇದರಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಲ್ದಾಣ ಬಿಟ್ಟು ರಸ್ತೆಗೆ ಬಂದು ಬಸ್ ನಿಲ್ಲಿಸಿ ಎಂದರೂ ನಿಲ್ಲಿಸುತ್ತಿಲ್ಲ. ಬದಲಾಗಿ ದೂರ ಸಂಚರಿಸುವ ಬಸ್‌ಗಳಾಗಿದ್ದು, ಇಲ್ಲಿ ನಿಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ವಾಹನ ಚಾಲಕರು, ನಿರ್ವಾಹಕರು ಹೇಳುತ್ತಿದ್ದರು. ಇದೇ ವಿಷಯವನ್ನು ಘಟಕದ ವ್ಯವಸ್ಥಾಪಕರಿಗೆ ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದರು.

ADVERTISEMENT

ನಂತರ ಕೆ.ಆರ್.ಎಸ್ ಪಕ್ಷದ ನೇತೃತ್ವದಲ್ಲಿ ಗ್ರಾಮಸ್ಥರು ಮುಖ್ಯರಸ್ತೆಗೆ ನಿಂತು ಬಸ್ ಒಂದನ್ನು ತಡೆದು ಬಸಾಪಟ್ಟಣ ಬಸ್ ನಿಲ್ದಾಣದ ಒಳಗಡೆ ಕಳುಹಿಸಿ, ಮುಂದಕ್ಕೆ ಸಂಚರಿಸದಂತೆ ಕೆಲ ನಿಮಿಷಗಳ ಕಾಲ ತಡೆಯಲಾಯಿತು.

ಘಟನೆ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಸ್ ಡಿಪೋ ವ್ಯವಸ್ಥಾಪಕ, ಪೊಲೀಸ್ ಸಿಬ್ಬಂದಿ ಬಸ್ ನಿಲುಗಡೆ ಹಾಗೂ ಬಸ್ ನಿಲ್ದಾಣಕ್ಕೆ ಮೂಲಸೌಕರ್ಯ ಒದಗಿಸುವ ಬಗ್ಗೆ ಮನವಿ ಪಡೆದು, 20 ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಕೊಪ್ಪಳ ರೈತ ಘಟಕದ ಅಧ್ಯಕ್ಷ ಕನಕಪ್ಪ ಹುಡೇಜಾಲಿ, ಸಂಘಟನಾ ಕಾರ್ಯದರ್ಶಿ ಗಣೇಶ, ಹನುಮಂತಪ್ಪ ಗೊಡಚಳ್ಳಿ, ಬಸವರಾಜ ಬಿಜಕಲ್, ಅಶಾ ವಿರೇಶ, ಮೆಹಬೂಬ, ಮೈನೂದ್ದೀನ್, ಮೆಹಬೂಬ್, ಮಂಜುನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.