ಕೊಪ್ಪಳ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹುಲಿಗಿ ಗ್ರಾಮದ ರೈಲ್ವೆ ಗೇಟ್ ಸಂಖ್ಯೆ 79ರ ಹುಲಿಗಿ-ಮುನಿರಾಬಾದ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ ₹29.57 ಕೋಟಿ ಹಾಗೂ ಭೂ ಪರಿಹಾರಕ್ಕೆ ₹3 ಕೋಟಿ ಬಿಡುಗಡೆ ಮಾಡಿದೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದ್ದಾರೆ.
‘ರೈಲ್ವೆ ಮೇಲ್ಸೆತುವೆಗಳ ನಿರ್ಮಾಣದಲ್ಲಿ ರಾಜ್ಯ ಸರ್ಕಾರವೂ ಪಾಲುದಾರಿಕೆಯಾಗಬೇಕು. ಆದರೆ, ಈ ಯೋಜನೆಗಳಿಗೆ ರಾಜ್ಯ ಸರ್ಕಾರ ನಿರಾಸಕ್ತಿ ತೋರಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಬಾರೆಂಬ ಕಾರಣಕ್ಕೆ ಕೇಂದ್ರ ಸರ್ಕಾರವೇ ಸಂಪೂರ್ಣ ಅನುದಾನ ಬಿಡುಗಡೆ ಮಾಡಿದೆ’ ಎಂದು ಹೇಳಿದ್ದಾರೆ.
‘ಶೀಘ್ರದಲ್ಲೇ ಸಿಂಧನೂರಿಗೆ ರೈಲು ಸಂಚಾರ ಆರಂಭವಾಗಲಿದೆ. ಕಾಂಗ್ರೆಸ್ ಸರ್ಕಾರ ರೈಲ್ವೆ ಯೋಜನೆ ರೂಪಿಸುತ್ತಿತ್ತು. ಹಣ ನೀಡದ ಕಾರಣ ಕಾಮಗಾರಿ ಪೂರ್ಣಗೊಳ್ಳುತ್ತಿರಲಿಲ್ಲ. ಬಿಜೆಪಿ ಅವುಗಳನ್ನು ಪೂರ್ಣಗೊಳಿಸುವ ಬದ್ಧತೆ ತೋರಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕೊಪ್ಪಳ ಜಿಲ್ಲೆಯಲ್ಲಿ ರೈಲ್ವೆಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ಇನ್ನಷ್ಟು ಅಭಿವೃದ್ಧಿ ಮಾಡುವ ಗುರಿ ಹೊಂದಲಾಗಿದೆ’ ಎಂದು ಹೇಳಿದ್ದಾರೆ.
ಅನುಕೂಲ:
ಮೇಲ್ಸೆತುವೆ ನಿರ್ಮಾಣಕ್ಕೆ ಕೇಂದ್ರ ಅನುದಾನ ನೀಡಿದ ಕುರಿತು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಫಾಲಾಕ್ಷಪ್ಪ ಗುಂಗಾಡಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ‘ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಧಾರ್ಮಿಕ ತಾಣ ಹುಲಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ನಿತ್ಯ ಲಕ್ಷಾಂತರ ಭಕ್ತರು ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುತ್ತಾರೆ. ರೈಲ್ವೆ ಮೇಲ್ಸೇತುವೆ ನಿರ್ಮಾಣದಿಂದಾಗಿ ಎಲ್ಲರಿಗೂ ಅನುಕೂಲವಾಗಲಿದೆ’ ಎಂದರು.
ಯೋಗೇಶ್, ಗವಿಸಿದ್ಧಪ್ಪ ಗುಂಗಾಡಿ ಹಾಗೂ ಮಲ್ಲಿಕಾರ್ಜುನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.