ADVERTISEMENT

ಕಾರಟಗಿ, ಕನಕಗಿರಿ ಆಸ್ಪತ್ರೆ ಕಟ್ಟಡಗಳಿಗೆ ₹42 ಕೋಟಿ: ಶಿವರಾಜ ತಂಗಡಗಿ

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 14:01 IST
Last Updated 16 ಅಕ್ಟೋಬರ್ 2024, 14:01 IST
ಕನಕಗಿರಿ- ನವಲಿ ರಸ್ತೆ ಕಾಮಗಾರಿಗೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಭೂಮಿ ಪೂಜೆ ನೆರವೇರಿಸಿದರು
ಕನಕಗಿರಿ- ನವಲಿ ರಸ್ತೆ ಕಾಮಗಾರಿಗೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಭೂಮಿ ಪೂಜೆ ನೆರವೇರಿಸಿದರು   

ಕನಕಗಿರಿ: ಕ್ಷೇತ್ರದ ಕಾರಟಗಿ ಹಾಗೂ ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರಗಳನ್ನು 100 ಬೆಡ್ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ₹ 42 ಕೋಟಿ ಬಿಡುಗಡೆ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಇಲ್ಲಿನ ವಾಲ್ಮೀಕಿ ವೃತ್ತ, ಪರಿಶಿಷ್ಟ ಜಾತಿಯ ಕಾಲೊನಿ ಹಾಗೂ ಇಂದಿರಾ ಕ್ಯಾಂಟಿನ್ ನಿರ್ಮಾಣದ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ‌ನೆರವೇರಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಗೌರಿಪುರ, ಜೀರಾಳ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗುತ್ತಿದ್ದು,  ತಲಾ ಒಂದು ಕಟ್ಟಡಕ್ಕೆ ₹ 4 ಕೋಟಿ ಮಂಜೂರಾಗಿದೆ, ಗಂಗಾವತಿಯ ಉಪ ವಿಭಾಗ ಆಸ್ಪತ್ರೆಯನ್ನು ಸಹ 150 ಬೆಡ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ₹16.50 ಕೋಟಿ ಬಿಡುಗಡೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಕನಕಗಿರಿ- ನವಲಿ ರಸ್ತೆಯ ಡಾಂಬರೀಕರಣಕ್ಕೆ ₹ 25 ಕೋಟಿ, ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ₹ 87 ಲಕ್ಷ, ಎಸ್ ಸಿ ಕಾಲೊನಿಯಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ₹ 13.65 ಲಕ್ಷ ಅನುದಾನ ಬಿಡುಗಡೆಯಾಗಿದೆ.  ಕನಕಗಿರಿ- ಗಂಗಾವತಿ ರಸ್ತೆಯಲ್ಲಿರುವ ಬಳ್ಳಾರಿ ತಬ್ರೇಜ್ ಅವರ ಮೂರು ಎಕರೆ ಜಾಗದಲ್ಲಿ ಪ್ರಜಾಸೌಧ (ಮಿನಿ ವಿಧಾನಸೌಧ) ನಿರ್ಮಾಣ‌ ಮಾಡಲಾಗುತ್ತಿದ್ದು, ₹ 15 ಕೋಟಿ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

‘ಒಣಬೇಸಾಯದ ರೈತಾಪಿ ವರ್ಗಕ್ಕೆ ಅನುಕೂಲವಾಗಿಸಲು ತುಂಗಭದ್ರಾ ಜಲಾಶಯದಲ್ಲಿರುವ ನೀರು ಪೋಲಾಗದಂತೆ ನೋಡಿಕೊಳ್ಳಲು ನವಲಿ ಸೇರಿ ಈ ಭಾಗದಲ್ಲಿ ಸಮಾನಾಂತರ ಜಲಾಶಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ.  ಶಿರವಾರ ಗ್ರಾಮದಲ್ಲಿ ಸ್ಥಾಪಿಸಲು‌ ಉದ್ದೇಶಿಸಿರುವ ತೋಟಗಾರಿಕಾ ಪಾರ್ಕ್‌ನ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ.  ಬಿಜೆಪಿ ಸರ್ಕಾರ ಬರೀ ಘೋಷಣೆ ಮಾಡಿತ್ತೆ ವಿನಹ ಚಾಲನೆಗೆ ತಯಾರಿ ನಡೆಸಲಿಲ್ಲ’ ಎಂದು ದೂರಿದರು.

ತೇರಿನ‌ಮನೆ ಕಾಮಗಾರಿಗೂ ಟೆಂಡರ್ ಪ್ರಕ್ರಿಯೆ ನಡೆಸಿ ಚಾಲನೆ ನೀಡಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾ.ಪಂ. ಪ್ರಭಾರ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ಪಟ್ಟಣ‌ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗ್ಡೆ, ಪಟ್ಟಣ‌ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗ ನಾಯಕ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ವೀರೇಶ ಸಮಗಂಡಿ, ಶರಣಬಸಪ್ಪ ಭತ್ತದ, ಮಹ್ಮದರಫಿ, ಬಸಂತಗೌಡ, ಸದಸ್ಯರಾದ ಬಿಜ್ಜಳ ಅನಿಲಕುಮಾರ, ರಾಜಾಸಾಬ‌, ಹನುಮಂತಪ್ಪ ಬಸರಿಗಿಡ, ಶರಣೆಗೌಡ ಪಾಟೀಲ, ರವಿ ಪಾಟೀಲ, ಶಾಂತಪ್ಪ ಬಸರಿಗಿಡದ, ಅಧಿಕಾರಿಗಳು, ಪ್ರಮುಖರು ಇದ್ದರು.

ತರಬೇತಿ ಶಾಲೆಗೆ ಚಾಲನೆ: ಕಲಕೇರಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕನಕಾಚಲ ಸೇನಾ ಆಯ್ಕೆ ತರಬೇತಿ ಶಾಲೆಗೆ ಸಚಿವ‌ ತಂಗಡಗಿ ಚಾಲನೆ‌ ನೀಡಿದರು. ಉಡುಪಿ, ಕಲಬುರುಗಿ, ಕನಕಗಿರಿಯಲ್ಲಿ ಈ ಕೇಂದ್ರಗಳಿವೆ ಎಂದು ತಿಳಿಸಿದರು. ವರ್ಗಗಳ ಕಲ್ಯಾಣಾಧಿಕಾರಿ ನಾಗವೇಣಿ, ತಾಲ್ಲೂಕು ಅಧಿಕಾರಿ ಉಷಾ, ವಿಸ್ತರಣಾಧಿಕಾರಿ ಸುರೇಶ ಉದ್ದನವರ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.