ADVERTISEMENT

ಕುಷ್ಟಗಿ ಆರ್‌ಡಬ್ಲೂಎಸ್‌ ಕಚೇರಿ: ಸಹಿ ಪುಸ್ತಕದಲ್ಲಿ ಹಾಜರ್; ಕರ್ತವ್ಯಕ್ಕೆ ಚಕ್ಕರ್

ನಾರಾಯಣರಾವ ಕುಲಕರ್ಣಿ
Published 23 ಮೇ 2024, 5:38 IST
Last Updated 23 ಮೇ 2024, 5:38 IST

ಕುಷ್ಟಗಿ ಗ್ರಾಮೀಣ ನೀರು ಸರಬರಾಜು ಉಪ ವಿಭಾಗದ ಕಚೇರಿಯಲ್ಲಿ ಬುಧವಾರ ಕಂಡು ಬಂದ ದೃಶ್ಯ

ಕುಷ್ಟಗಿ ಗ್ರಾಮೀಣ ನೀರು ಸರಬರಾಜು ಉಪ ವಿಭಾಗದ ಕಚೇರಿಯಲ್ಲಿ ಬುಧವಾರ ಕಂಡು ಬಂದ ದೃಶ್ಯ

ಕುಷ್ಟಗಿ: ಅದು ತಾಲ್ಲೂಕಿನ 172 ಹಳ್ಳಿಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವದ ಜವಾಬ್ದಾರಿ ನಿಭಾಯಿಸುವ ಕಚೇರಿ. ಎಲ್ಲ ಕೊಠಡಿಗಳಲ್ಲಿ ವಿದ್ಯುತ್‌ ಲೈಟ್‌ ಉರಿಯುತ್ತಿದ್ದರೆ, ಫ್ಯಾನ್‌ಗಳು ತಿರುಗುತ್ತಿದ್ದವು. ಬೆರಳೆಣಿಕೆ ಸಿಬ್ಬಂದಿಯಲ್ಲಿ ಒಬ್ಬರೂ ಅಲ್ಲಿರಲಿಲ್ಲ. ಬೆಳಿಗ್ಗೆ ಕಚೇರಿಗೆ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಹೊರ ಹೋದವರು ಮರಳಿ ಕಚೇರಿಗೆ ಬಂದಿರಲಿಲ್ಲ. ಹಾಗಾಗಿ ಅಲ್ಲಿ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಹೇಳುವ ಕೇಳುವವರಿಲ್ಲದೆ ಕಚೇರಿ ಭಣಗುಡುತ್ತಿತ್ತು.

ADVERTISEMENT

ಪಟ್ಟಣದಲ್ಲಿರುವ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಉಪ ವಿಭಾಗ (ಆರ್‌ಡಬ್ಲೂಎಸ್‌) ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ ಕಚೇರಿ ಅವಧಿಯಲ್ಲಿ ಕಂಡುಬಂದ ದೃಶ್ಯ ಇದು.

ಈವರೆಗೂ ಲೋಕೋಪಯೋಗಿ ಇಲಾಖೆಗೆ ಸೇರಿದ ಹಳೆಯ ಕಟ್ಟದಲ್ಲಿದ್ದ ಆರ್‌ಡಬ್ಲೂಎಸ್‌ ಕಚೇರಿಯನ್ನು ಕೃಷ್ಣಗಿರಿ ಕಾಲೊನಿಯಲ್ಲಿರುವ ಖಾಸಗಿ ಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿಗೆ ಸ್ಥಳಾಂತರಿಸಲಾಗಿದೆ.

ಕಚೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಯಾರೂ ಇರುವುದಿಲ್ಲ. ಯಾವುದೇ ಸಮಯದಲ್ಲಿ ಹೋದರೂ ಹೋದರೆ ಅಲ್ಲಿ ಸಿಪಾಯಿ ಮಾತ್ರ ಇರುತ್ತಾರೆ. ಎಂಜಿನಿಯರ್‌ಗಳು ಸೈಟ್‌ಗೆ ಹೋಗಿದ್ದಾರೆ ಎಂಬ ಸಿದ್ಧ ಉತ್ತರ ಬರುತ್ತದೆ. ಉಳಿದ ಸಿಬ್ಬಂದಿ ಎಲ್ಲಿಗೆ ಹೋಗಿದ್ದಾರೆಂಬುದೇ ಗೊತ್ತಾಗುವುದಿಲ್ಲ. ಕಚೇರಿಯಲ್ಲಿ ಅಧಿಕಾರಿಗಳೇ ಇಲ್ಲವೆಂದಮೇಲೆ ಇನ್ನು ಸಿಬ್ಬಂದಿಯನ್ನು ನಿಯಂತ್ರಿಸುವವರು ಯಾರು?  ಉಪ ವಿಭಾಗದ ಅವ್ಯವಸ್ಥೆ, ಸಿಬ್ಬಂದಿ ಬೇಜವಾಬ್ದಾರಿ ಕುರಿತು ಚಳಗೇರಿಯ ಬಸವರಾಜ ಪಾಟೀಲ, ಹನುಮಸಾಗರದ ವೀರಭದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಹುದ್ದೆ ಖಾಲಿ: ಮಂಜೂರಾದ ಹುದ್ದೆಯ ಪ್ರಕಾರ ಇಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆ ಖಾಲಿ ಇದ್ದು, ಗಂಗಾವತಿಯ ಎಇಇ ವಿಜಯಕುಮಾರ ಪೂಜಾರ ಎಂಬುವವರು ಇಲ್ಲಿ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದಾರೆ. ವಾರದಲ್ಲಿ ಒಂದೆರಡು ದಿನ ಮಾತ್ರ ಇಲ್ಲಿ ಹಾಜರಿರುತ್ತಾರೆ. ಇಲ್ಲದಿದ್ದರೆ ಇಲ್ಲ. ಎರಡು ಸಹಾಯಕ ಎಂಜಿನಿಯರ್ ಹುದ್ದೆಗಳೂ ಖಾಲಿಯಿದ್ದು ಇಬ್ಬರನ್ನು ಕಿರಿಯ ಎಂಜಿನಿಯರ್‌ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ವ್ಯವಸ್ಥಾಪಕ ಹುದ್ದೆ ನಿರ್ವಹಿಸಲು ಒಬ್ಬ ಪ್ರಥಮ ದರ್ಜೆ ಸಹಾಯಕ, ಇನ್ನೊಬ್ಬ ಬೆರಳಚ್ಚುಗಾರ ಇದ್ದಾರೆ. ಆದರೆ ಇವರೆಲ್ಲ ಕಚೇರಿಯಲ್ಲಿ ಇರುವುದೇ ಅಪರೂಪ. ಹಾಜರಿ ಪುಸ್ತಕದಲ್ಲಿ ಸಹಿ ಮಾತ್ರ ಅಚ್ಚುಕಟ್ಟಾಗಿರುತ್ತದೆ. ಇವರೆಲ್ಲ ಎಲ್ಲಿಗೆ, ಯಾವ ಸ್ಥಳಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ದೊರೆಯುವುದಿಲ್ಲ. ಚಲನವಲನ (ಮೂವ್‌ಮೆಂಟ್‌) ಕಡತದಲ್ಲಿ ನಮೂದಿಸುವುದು ಕಡ್ಡಾಯವಾಗಿದ್ದರೂ ಕಡತವನ್ನು ನಿರ್ವಹಿಸದಿರುವುದು ತಿಳಿದು ಬಂದಿತು.

ಕುಷ್ಟಗಿ ಆರ್‌ಡಬ್ಲೂಎಸ್‌ ಕಚೇರಿಯಲ್ಲಿ ಸಹಿ ಮಾಡಿ ಹೊರಹೋಗಿರುವ ಸಿಬ್ಬಂದಿ ಮೇಲೆ ಶಿಸ್ತುಕ್ರಮ ಜರುಗಿಸಲಾಗುತ್ತದೆ. ಈ ಕುರಿತು ಶೋಕಾಸ್ ನೋಟಿಸ್‌ ನೀಡಲಾಗುವುದು.
ವಿಜಯಕುಮಾರ ಪೂಜಾರ, ಪ್ರಭಾರ ಎಎಇ, ಗ್ರಾಮೀಣ ನೀರು ನೈರ್ಮಲ್ಯ ಉಪ ವಿಭಾಗ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.