ADVERTISEMENT

ಕೊಪ್ಪಳ: ಕಿನ್ನಾಳ ಕಲೆಯ ರಾಯಭಾರಿ ಸಣ್ಣರಂಗಪ್ಪ.

ಊರೂರು ಅಲೆದಾಡಿ ಕಲಾಕೃತಿ ತಯಾರಿಸುವ ಕಾಯಕದಲ್ಲಿ ಏಳು ದಶಕಗಳ ಸೇವೆ

ಪ್ರಮೋದ
Published 12 ಫೆಬ್ರುವರಿ 2023, 6:24 IST
Last Updated 12 ಫೆಬ್ರುವರಿ 2023, 6:24 IST
ಸಣ್ಣರಂಗಪ್ಪ ಚಿತ್ರಗಾರ
ಸಣ್ಣರಂಗಪ್ಪ ಚಿತ್ರಗಾರ   

ಕೊಪ್ಪಳ: ‘ಸುಮಾರು ಏಳು ದಶಕಗಳ ಹಿಂದಿನ ಮಾತು. ಊರಿಂದ ಊರಿಗೆ ನಡೆದುಕೊಂಡು ಅಲೆದಾಡಿ ತಿಂಗಳಾನುಗಟ್ಟಲೇ ಅಲ್ಲಿಯೇ ವಾಸವಿದ್ದು ದೇವಿಯರ ಮೂರ್ತಿಗಳನ್ನು ಮಾಡುತ್ತಿದ್ದೆವು. ಆ ಕಲಾಕೃತಿಗಳ ಸೊಬಗಿಗೆ ಮಾರು ಹೋದ ಜನ ಈಗ ಮನೆ ಬಾಗಿಲಿಗೆ ಬಂದು ಖರೀದಿಸುವಂತಾಗಿದೆ...‘

70 ವರ್ಷಗಳಿಂದ ಕಿನ್ನಾಳ ಕಲೆಯಲ್ಲಿ ವಿವಿಧ ಕಲಾಕೃತಿಗಳನ್ನು ಮಾಡುತ್ತ ಈ ಕಲೆಯ ಕೀರ್ತಿ ಎಲ್ಲೆಡೆ ಪಸರಿಸಿದ ಕೊಪ್ಪಳ ತಾಲ್ಲೂಕಿನ ಕಿನ್ನಾಳದ ಸಣ್ಣರಂಗಪ್ಪ ಚಿತ್ರಗಾರ ಅವರ ಮನದ ಮಾತುಗಳು ಇವು.

85 ವರ್ಷದ ಸಣ್ಣರಂಗಪ್ಪ ಅವರು ಬದುಕಿನುದ್ದಕ್ಕೂ ಕಲೆಯನ್ನೇ ಜೀವ ಮತ್ತು ಅದರ ಸೊಬಗನ್ನೇ ಜೀವಾಳವಾಗಿರಿಸಿಕೊಂಡ ಕಲಾವಿದರು. 2022ನೇ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ತಮ್ಮ 10ನೇ ವಯಸ್ಸಿನಿಂದ ಕಿನ್ನಾಳ ಕಲೆ ಪ್ರಚುರಪಡಿಸುತ್ತ ಬಂದಿರುವ ಸಣ್ಣರಂಗಪ್ಪ ಧಾರವಾಡ, ಶಿವಮೊಗ್ಗ, ಹಾವೇರಿ, ಬಳ್ಳಾರಿ, ಗದಗ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಸುತ್ತಾಡಿ ಗ್ರಾಮದೇವತೆಗಳು, ಛತ್ರಿ, ಚಾಮರ, ದಶಮಿದಿಂಡು, ಬಾರಕೋಲಗುಣಿ ಮತ್ತು ಮಕ್ಕಳ ಆಟಿಕೆ ಬೊಂಬೆಗಳನ್ನು ಮಾಡಿದ್ದಾರೆ. ಹೊರ ರಾಜ್ಯಗಳಲ್ಲಿಯೂ ಕಿನ್ನಾಳ ಕಲೆಯ ಛಾಪು ಮೂಡಿಸಿದ್ದಾರೆ.

ADVERTISEMENT

ತಾವು ಕಲಾಕೃತಿಗಳನ್ನು ರಚಿಸಲು ಹೋದಲೆಲ್ಲ ಅಲ್ಲಿ ಕಿನ್ನಾಳ ಕಲೆಯ ಗುರುತು ಅಚ್ಚಳಿಯದಂತೆ ಮಾಡಿದ್ದಾರೆ. ಇವರಂತೆ ಅನೇಕ ಕಲಾವಿದರು ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಿಗೆ ಹೋಗಿ ಬಂದು ಕಿನ್ನಾಳ ಕಲೆಯ ರಾಯಭಾರಿಗಳು ಎನಿಸಿದ್ದಾರೆ.

ಕಿನ್ನಾಳ ಕಲೆಯ ಕಲಾಕೃತಿಗಳನ್ನು ಅನೂಚಾನವಾಗಿ ಮಾಡಿಕೊಂಡು ಬಂದವರಲ್ಲಿ ಸಣ್ಣರಂಗಪ್ಪ ಅವರದ್ದು ನಾಲ್ಕನೇ ತಲೆಮಾರು. ಶೀನಪ್ಪ ಚಿತ್ರಗಾರ–ಗೌರಮ್ಮ ದಂಪತಿಯ ಪುತ್ರ ಸಣ್ಣರಂಗಪ್ಪ ಅವರಿಗೆ ಈಗ ಕಲಾಕೃತಿ ಮಾಡುವಷ್ಟು ದೈಹಿಕ ಸಾಮರ್ಥ್ಯವಿಲ್ಲ. ಆದರೆ, ಅವರ ಕುಟುಂಬದವರು ತಯಾರು ಮಾಡುವುದನ್ನು ತನ್ಮಯತೆಯಿಂದ ನೋಡುವುದನ್ನು ಮಾತ್ರ ಬಿಟ್ಟಿಲ್ಲ.

ದುರ್ಗಮ್ಮ, ದ್ಯಾಮವ್ವ ದೇವಿಯರ ನಿರ್ಮಾಣ ಹಾಗೂ ಅವುಗಳಿಗೆ ಬಣ್ಣ ಬಡಿಯಲು ಹಳ್ಳಿಗಳಿಗೆ ಹೋದಾಗ ಗ್ರಾಮಸ್ಥರೇ ಊಟ, ಉಪಚಾರ ಹಾಗೂ ವಸತಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ದೇವರ ಪಟಗಳನ್ನು ಹಾಗೂ ಮೂರ್ತಿಗಳನ್ನು ಮಾಡಲಾಗುತ್ತಿತ್ತು. ಜಾತ್ರೆಯ ಸಮಯದಲ್ಲಿ ಬನಶಂಕರಿ, ಬಾದಾಮಿ, ಕೊಪ್ಪಳದ ಗವಿಸಿದ್ದೇಶ್ವರ ಹಾಗೂ ಬಳ್ಳಾರಿಯ ಜಾತ್ರೆಗಳಿಗೆ ಹೋಗುತ್ತಿದ್ದೆವು ಎಂದು ಸಣ್ಣರಂಗಪ್ಪ ನೆನಪಿನ ಅಂಗಳಕ್ಕೆ ಜಾರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.