ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಭಾನುವಾರದ ಮನದ ಮಾತು ಕಾರ್ಯಕ್ರಮದಲ್ಲಿ ಸಮಷ್ಠಿ ಗುಬ್ಬಿ ಎಂಬ ಕೊಪ್ಪಳದ ಯುವತಿಯ ‘ಸಂಸ್ಕೃತ ವಾರಾಂತ್ಯ’ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪೋಷಕರು ಹರ್ಷಗೊಂಡಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ಸಮಷ್ಠಿ ಗುಬ್ಬಿ ಮೂಲತಃ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದವರಾದರು ಪ್ರಸ್ತುತ ಕೊಪ್ಪಳದ ಭಾಗ್ಯನಗರದಲ್ಲಿ ನೆಲೆಸಿದ್ದಾರೆ. ಅವರು ಕೃಷಿ ವಿಜ್ಞಾನಿ ಶೇಷಗಿರಿ ಗುಬ್ಬಿ ಹಾಗೂ ಅನುರಾಧ ಗುಬ್ಬಿ ಅವರ ಪುತ್ರಿ.
ಸಮಷ್ಟಿ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಈ ಖುಷಿಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಶೇಷಗಿರಿ ಗುಬ್ಬಿ ‘ಮಗಳು ಸಂಸ್ಕೃತದ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾಳೆ. ಮುಂದೆ ಹೇಗೆ ಸಾಗಬೇಕು ಎನ್ನುವ ಮಾರ್ಗವನ್ನು ಆಕೆ ಕಂಡುಕೊಂಡಿದ್ದಾಳೆ. ಈ ನಿಟ್ಟಿನಲ್ಲಿ ಮೂರು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದು, ಸಾಗುತ್ತಿರುವ ಮಾರ್ಗ ಸರಿಯಾಗಿಯೇ ಇದೆ ಎನ್ನುವುದು ನಮಗೆ ಈಗ ಖಚಿತವಾಗಿದೆ’ ಎಂದರು.
‘ಮಗಳು ಮೊದಲ ಬಾರಿಗೆ ನಡೆಸಿದ ಕಾರ್ಯಕ್ರಮ ನೋಡಿದಾಗ ಮನದ ಮಾತಿನಲ್ಲಿ ಈ ವಿಷಯ ಪ್ರಸ್ತಾಪವಾಗಬಹುದು ಎನ್ನುವ ನಿರೀಕ್ಷೆ ಹೊಂದಿದ್ದೆವು. ಅಂದುಕೊಂಡಂತೆಯೇ ಆಗಿದ್ದಕ್ಕೆ ಖುಷಿಯಾಗಿದೆ’ ಎಂದು ಸಂತಸ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.