ಯಲಬುರ್ಗಾ: ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು, ವಿಜ್ಞಾನ ಶಿಕ್ಷಕರಲ್ಲಿನ ಕುತೂಹಲ ಹಾಗೂ ಇತರೆ ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು ತಾಲ್ಲೂಕಿನ ಹೊಸಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತುಪ್ರದರ್ಶನ.
ತಾಲ್ಲೂಕಿನ ವಿವಿಧ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಆಸಕ್ತಿರು ಹೊಸಳ್ಳಿಯಲ್ಲಿ ಸೇರಿ ವಿಜ್ಞಾನದ ಚಟುವಟಿಕೆಗಳ ಅನಾವರಣಗೊಳಿಸುವ ಪ್ರಯತ್ನ ನಡೆಸಿದ್ದು ಜನಮೆಚ್ಚುಗೆಗೆ ಪಾತ್ರವಾಗಿತ್ತು. ವಸ್ತುಪ್ರದರ್ಶನದಲ್ಲಿ ತಾಲ್ಲೂಕಿನ ಸುಮಾರು 22 ಶಾಲೆಗಳು ಭಾಗವಹಿಸಿದ್ದವು.
ಸುಸ್ಥಿರ ಕೃಷಿ ಪದ್ಧತಿ, ಸ್ವಚ್ಛತೆ ಮತ್ತು ಆರೋಗ್ಯ, ಸಂಪನ್ಮೂಲ ನಿರ್ವಹಣೆ, ಕೈಗಾರಿಕಾ ಅಭಿವೃದ್ಧಿ, ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ, ಶೈಕ್ಷಣಿಕ ಆಟಿಕೆ ಮತ್ತು ಗಣತಿ ಮಾದರಿ ಹೀಗೆ ಆರು ವಿಭಾಗಗಳನ್ನಾಗಿ ಮಾಡಿ ಪರಸರ ಸಂರಕ್ಷಣೆ ಜತೆಗೆ ಲಭ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಹೇಗೆ ಅಭಿವೃದ್ಧಿ ಕಾರ್ಯ ನಡೆಸಬಹುದು ಎಂಬುದನ್ನು ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
‘ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಮುಖ್ಯ. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು’ ಎಂದು ಪ್ರಾಚಾರ್ಯ ವಿ.ಬಿ.ಹನಮಶೆಟ್ಟಿ ತಿಳಿಸಿದರು.
‘ಮೇವು ಕತ್ತರಿಸುವ ಯಂತ್ರದ ಮಾದರಿ, ಸ್ವಯಂ ಚಾಲಿತ ದೀಪ ನಿರ್ವಹಣೆ, ಸಾರಿಗೆ ವ್ಯವಸ್ಥೆ ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ವಿಷಯ ವಸ್ತುವುಳ್ಳ ವಸ್ತು ಪ್ರದರ್ಶನ ತೀರ್ಪುಗಾರರನ್ನು ಆಕರ್ಷಿಸಿದವು. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಬಹುಮಾನ ಪಡೆದಿರುವುದು ಉತ್ತಮ ಬೆಳವಣಿಗೆ’ ಎಂದು ತೀರ್ಪುಗಾರ ವಿಜ್ಞಾನ ಶಿಕ್ಷಕ ಉಮೇಶ ಎತ್ತಿನಮನಿ ಹೇಳಿದರು.
ರೈತನ ಮಿತ್ರ ಮಾದರಿಯಲ್ಲಿ ಕಲ್ಲೂರಿನ ಸರ್ಕಾರಿ ಪ್ರೌಢಶಾಲೆ ಪ್ರಥಮ, ಮೇವು ಕತ್ತರಿಸುವ ಯಂತ್ರದ ಮಾದರಿಯಲ್ಲಿ ಬೇವೂರ ಶಾಲೆ ದ್ವಿತೀಯ, ಮಾನವನ ಮೆದುಳು ಮಾದರಿಯಲ್ಲಿ ಕುಕನೂರಿನ ವಿದ್ಯಾನಂದ ಗುರುಕುಲ ಪ್ರಥಮ, ಮಾನವನ ಹೃದಯ ಮಾದರಿಯಲ್ಲಿ ರ‍್ಯಾವಣಕಿಯ ಸರ್ಕಾರಿ ಪ್ರೌಢ ಶಾಲೆ ದ್ವಿತೀಯ, ಸ್ವಯಂಚಾಲಿತ ಬೀದಿ ದೀಪ ನಿರ್ವಹಣೆ ಕುಕನೂರಿನ ಗವಿಸಿದ್ದೇಶ್ವರ ಪ್ರೌಢ ಶಾಲೆ ಪ್ರಥಮ, ಪ್ಲಾಸ್ಟಿಕ್ ಬರುಬಳಕೆಯ ಪ್ರದರ್ಶನಕ್ಕೆ ಹಿರೇಮ್ಯಾಗೇರಿಯ ಸರ್ಕಾರಿ ಪ್ರೌಢ ಶಾಲೆ ದ್ವಿತೀಯ, ಸೋಲಾರ್ ರೋಡ್ ವೇ ಮಾದರಿಗೆ ಹೊಸಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಥಮ, ಯಲಬುರ್ಗಾದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ದ್ವಿತೀಯ, ಚಂದ್ರಯಾನ-2 ಮಾದರಿಯಲ್ಲಿ ಯಲಬುರ್ಗಾದ ಸಿದ್ಧರಾಮೇಶ್ವರ ಪ್ರೌಢಶಾಲೆ ಪ್ರಥಮ, ಸಾರಿಗೆ ವ್ಯವಸ್ಥೆಯಲ್ಲಿ ವಿದ್ಯಾನಂದ ಗುರುಕುಲ ದ್ವಿತೀಯ, ಶೈಕ್ಷಣಿಕ ಚಟುವಟಿಕೆಯಲ್ಲಿ ಯಲಬುರ್ಗಾ ಬಾಲಕಿಯರ ಪ್ರೌಢಶಾಲೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದುಕೊಂಡವು.
‘ಪ್ರತಿಯೊಂದು ತಂಡದಲ್ಲಿ ಹೊಸತನದ ಪ್ರದರ್ಶನ ತೋರಬೇಕೆಂಬ ಹಂಬಲ ಎದ್ದು ಕಾಣುತ್ತಿತ್ತು. ಮತ್ತಷ್ಟು ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಸೂಕ್ತ ಸಮಯದಲ್ಲಿ ಸರಿಯಾದ ತರಬೇತಿ ಸಿಕ್ಕರೆ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ವಿಜ್ಞಾನಿಗಳಾಗುವ ಅವಕಾಶಗಳಿವೆ’ ಎಂದು ಮತ್ತೊಬ್ಬ ತೀರ್ಪುಗಾರ ಪದ್ಮರಾಜ ಡಂಬ್ರಳ್ಳಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.