ಕುಷ್ಟಗಿ: ಪಟ್ಟಣದ ರಸ್ತೆಗಳಲ್ಲಿನ ಮಣ್ಣು ತೆಗೆದು ಧೂಳು ಮುಕ್ತಗೊಳಿಸುತ್ತೇವೆ ಎಂದು ಪುರಸಭೆಯ ಪ್ರತಿನಿಧಿಗಳು ಸುಳ್ಳು ಹೇಳುತ್ತಲೇ ಜನರನ್ನು ಮರಳು ಮಾಡುತ್ತಿದ್ದಾರೆ. ಆದರೆ ಅನಾಥೆ ಮತ್ತು ನೆನಪಿನ ಶಕ್ತಿ ಕಳೆದುಕೊಂಡಿರುವ ವೃದ್ಧೆಯೊಬ್ಬರು ದಶಕದಿಂದಲೂ ಪಟ್ಟಣದ ಒಂದು ರಸ್ತೆಯಲ್ಲಿ ಒಂದಿಷ್ಟೂ ಕಸಕಡ್ಡಿ ಬೀಳದಂತೆ ನೋಡಿಕೊಂಡು ಧೂಳು ಮುಕ್ತವಾಗಿಸುವ ಬದ್ಧತೆ ಮೆರೆಯುತ್ತಿರುವುದು ಸಾರ್ವಜನಿಕರ ಗಮನಸೆಳೆಯುತ್ತಿದೆ.
ಸುಮಾರು 65-70ರ ವಯೋಮಾನದ ಈ ಮಹಿಳೆ ಬುದ್ಧಿಮಾಂದ್ಯೆ ಎಂದು ಜನ ಮಾತನಾಡಿಕೊಂಡರೂ ಯಾರಿಗೂ ತೊಂದರೆ ಕೊಟ್ಟಿಲ್ಲ, ತಾನು ಹನುಮವ್ವ ಎಂದಷ್ಟೇ ಹೇಳುತ್ತಾಳೆ. ಬೇರೆ ಏನೂ ಮಾತನಾಡುವುದಿಲ್ಲ. ಸಂಬಂಧಿಕರು ಯಾರೆಂಬುದು ಗೊತ್ತಿಲ್ಲ. ಕೆಲವರ ಪ್ರಕಾರ ಪಟ್ಟಣದ ಗೊಲ್ಲ ಸಮುದಾಯದ ಮಹಿಳೆ ಇರಬಹುದು ಎನ್ನುತ್ತಾರೆ. ಬೆಳಿಗ್ಗೆಯಿಂದ ಹೊತ್ತು ಮುಳುಗುವವರೆಗೂ ಪೌರಕಾರ್ಮಿಕರು ಮಾಡುವ ಕೆಲಸವನ್ನು ಈಕೆ ಚಾಚೂತಪ್ಪದೆ ಮುಂದುವರೆಸಿದ್ದಾಳೆ. ಮಳೆ, ಗಾಳಿ, ಬಿಸಿಲು ಇದ್ದರೂ ರಸ್ತೆ ಪಕ್ಕದ ಮಳಿಗೆಗಳ ಮುಂದಿನ ಜಾಗದಲ್ಲೇ ವಾಸ, ಕೆಲವು ಹರುಕು ಸೀರೆ ಬಟ್ಟೆಯ ಗಂಟು ಮಾತ್ರ ಈಕೆಯ ಆಸ್ತಿ. ಸುತ್ತಲಿನ ಹೋಟೆಲ್, ಖಾನಾವಳಿಯವರು ಪ್ರೀತಿಯಿಂದ ಕೊಡುವ ಒಂದಷ್ಟು ಊಟ, ಉಪಹಾರ ಕೊಟ್ಟರೆ ಹೊಟ್ಟೆಯ ಚಿಂತೆಯಿಲ್ಲ. ಮತ್ತು ಯಾರ ಮುಂದೆಯೂ ಹಣಕ್ಕೆ ಕೈ ಒಡ್ಡುವುದಿಲ್ಲ, ಕಿರಿಕಿರಿ ಇಲ್ಲದ ಸಾತ್ವಿಕತೆ ಈ ಮಹಿಳೆಯಲ್ಲಿನ ಮತ್ತೊಂದು ವಿಶೇಷ.
ಹೌದು ಈ ವೃದ್ಧೆಗೆ ರಸ್ತೆಗಳನ್ನು ಸ್ವಚ್ಛವಾಗಿಡುವ ಉಸಾಬರಿ ಏಕೆ? ಅದೇ ಯಕ್ಷಪ್ರಶ್ನೆಯಾಗಿದೆ. ಈಕೆಯ ಕಾಯಕ ಪ್ರಜ್ಞೆಯಿಂದಾಗಿಯೇ ರಾಷ್ಟ್ರೀಯ ಹೆದ್ದಾರಿ ಬಸವೇಶ್ವರ ವೃತ್ತದವರೆಗಿನ ರಸ್ತೆಯಲ್ಲಿ ಪುರಸಭೆ ಸಿಬ್ಬಂದಿಗೆ ಯಾವುದೇ ಕೆಲಸವಿಲ್ಲ ಅಷ್ಟೊಂದು ಸ್ವಚ್ಛವಾಗಿರುತ್ತದೆ. ಡಾಂಬರು ರಸ್ತೆಯಲ್ಲಿ ಪ್ಲಾಸ್ಟಿಕ್ ಇತರೆ ಕಸ ಬಿದ್ದ ತಕ್ಷಣ ಅದನ್ನು ಎತ್ತಿ ರಸ್ತೆ ಬದಿಯಲ್ಲಿ ಹಾಕಿ ಸುಡುವುದು, ಮಣ್ಣು, ಕೆಸರು ಏನೇ ಇದ್ದರೂ ಅದನ್ನು ಬಳಿದು ಚೆಲ್ಲುವ ಕೆಲಸ ಆಕೆಯದ್ದೇ ಎನ್ನುತ್ತಾರೆ ಸುತ್ತಲಿನ ಜನ. ಅನೇಕ ವರ್ಷಗಳಿಂದಲೂ ಈ ರಸ್ತೆಯನ್ನು ಗುತ್ತಿಗೆಪಡೆದವರಂತೆ ಶುಚಿಗೊಳಿಸುತ್ತಿರುವ ನಿಸ್ವಾರ್ಥ ಸೇವೆಯ ಹಿಂದಿನ ಉದ್ದೇಶವಾದರೂ ಏನೆಂಬುದು ಯಾರಿಗೂ ಗೊತ್ತಿಲ್ಲವಂತೆ. ಒಟ್ಟಾರೆ ರಸ್ತೆಯಂತೂ ಧೂಳು ಮುಕ್ತವಾಗಿದ್ದು ಪುರಸಭೆ ಸಿಬ್ಬಂದಿಯನ್ನೇ ನಾಚಿಸುವಂತಿದೆ ಎಂದೆ ಮಹಿಳೆಯ ಬಗೆಗಿನ ಮೆಚ್ಚುಗೆ ಮಾತು ನಾಗರಿಕರದ್ದು.
ಪಟ್ಟಣವನ್ನು ಧೂಳು ಮುಕ್ತವಾಗಿಸುತ್ತೇವೆ ಎಂದು ಹಿಂದಿನ ಮಾಜಿ ಅಧ್ಯಕ್ಷರೊಬ್ಬರು ಹೇಳಿಕೆಕೊಟ್ಟು ಪ್ರಚಾರ ಗಿಟ್ಟಿಸಿಕೊಂಡರೆ ಹೊರತು ಧೂಳು, ಮಣ್ಣಿನಿಂದ ಜನ ಹೈರಾಣಾಗುವುದು ತಪ್ಪಲಿಲ್ಲ. ಧೂಳು ತಡೆಗೆ ಗಜೇಂದ್ರಗಡ ರಸ್ತೆಯಲ್ಲಿ ಮಾತ್ರ ತಿಳಿದಾಗೊಮ್ಮೆ ಟ್ಯಾಂಕರ್ ಮೂಲಕ ನೀರು ಚಿಮುಕಿಸುವ ಪುರಸಭೆ ದಾಖಲೆಯಲ್ಲಿ ಮಾತ್ರ ಅನೇಕ ಟ್ಯಾಂಕರ್‌ಗಳ ಲೆಕ್ಕ ತೋರಿಸುತ್ತಿದೆ. ಈ ಹಣದಲ್ಲಿ ಒಂದು ಧೂಳು ಹೀರುವ (ಸಕ್ಕಿಂಗ್ ಮಷಿನ್) ಯಂತ್ರ ಖರೀದಿಸಬಹುದಿತ್ತು. ಪಟ್ಟಣವನ್ನು ಧೂಳು ಮುಕ್ತವಾಗಿಸುವಲ್ಲಿ ಬುದ್ಧಿ ಭ್ರಮಣೆಗೊಂಡಿರುವ ವೃದ್ಧೆಗೆ ಇರುವ ಸಾರ್ವಜನಿಕ ಪ್ರಜ್ಞೆ ಪುರಸಭೆಯ ಸದಸ್ಯರಲ್ಲಿಲ್ಲ ಎಂದು ಕರವೇ ಜಿಲ್ಲಾ ಉಪಾಧ್ಯಕ್ಷ ರಮೇಶ ಮೇಲಿನಮನಿ, ವೀರಭದ್ರಗೌಡ ಪಾಟೀಲ ಇತರರು ಖೇದ ವ್ಯಕ್ತಪಡಿಸಿದರು.
ವೃದ್ಧೆಯಲ್ಲಿ ಈಗಂತೂ ಶಕ್ತಿ ಇದೆ. ಈಕೆಯ ಸಂಬಂಧಿಕರು ಯಾರೆಂಬುದು ಗೊತ್ತಿಲ್ಲ. ವಯೋಸಹಜ ಅನಾರೋಗ್ಯಕ್ಕೆ ಒಳಗಾದರೆ ಸಮಸ್ಯೆಯಾಗಬಹುದು, ಹೀಗಾಗಿ ಈಕೆಯ ಬದುಕಿಗೆ ರಕ್ಷಣೆ ಒದಗಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಹೇಳಿದರು.
ರಸ್ತೆ ಸುಂದರವಾಗಿಸುವಲ್ಲಿ ಈ ಬುದ್ಧಿಮಾಂದ್ಯೆಗೆ ಇರುವಷ್ಟು ಪ್ರಜ್ಞೆ ಪುರಸಭೆ ಸದಸ್ಯರಿಗಿದ್ದಿದ್ದರೆ ಪಟ್ಟಣ ಸ್ವಚ್ಛವಾಗಿರುತ್ತಿತ್ತು. ದುರ್ದೈವ ಅಂಥ ಕಳಕಳಿಯ ಪ್ರತಿನಿಧಿಗಳ ಕೊರತೆ ಕಾಡುತ್ತಿದೆ.-ರಮೇಶ ಮೇಲಿನಮನಿ, ಕರವೇ ಜಿಲ್ಲಾ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.